ADVERTISEMENT

ಔರಂಗಜೇಬ್‌ನ ವೈಭವೀಕರಣಕ್ಕೆ ಅವಕಾಶವಿಲ್ಲ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್

ಪಿಟಿಐ
Published 31 ಮಾರ್ಚ್ 2025, 10:34 IST
Last Updated 31 ಮಾರ್ಚ್ 2025, 10:34 IST

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್    

ಮುಂಬೈ: ‘ಮೊಘಲ್ ಚಕ್ರವರ್ತಿ ಔರಂಗಜೇಬ್‌ನನ್ನು ಜನರು ಇಷ್ಟಪಡುತ್ತಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಅವರ ಸಮಾಧಿ ಸಂರಕ್ಷಿತ ಸ್ಮಾರಕವಾಗಿದ್ದು, ಅವರನ್ನು ವೈಭವೀಕರಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸ್ಪಷ್ಟಪಡಿಸಿದ್ದಾರೆ.

ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನ ವ್ಯಾಪ್ತಿಯಿಂದ ಹೊರಗಿರುವ ಸ್ಮಾರಕಗಳನ್ನು ತೆರವುಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಖುಲ್ತಾಬಾದ್‌ನಲ್ಲಿರುವ ಔರಂಗಜೇಬ್‌ ಸಮಾಧಿಯನ್ನು ತೆರವು ಮಾಡುವಂತೆ ಆಗ್ರಹಿಸಿ ಬಲಪಂಥೀಯ ಸಂಘಟನೆಗಳು (ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ) ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ಸಮಾಧಿ ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಪ್ರತಿಭಟನೆಯಲ್ಲಿ ಸಮುದಾಯವೊಂದರ ಪವಿತ್ರ ಗ್ರಂಥಕ್ಕೆ ಬೆಂಕಿ ಹಾಕಲಾಗಿದೆ ಎಂಬ ವದಂತಿ ಹರಡಿದ ನಂತರ ನಾಗ್ಪುರದ ಮಹಲ್‌ ಪ್ರದೇಶದ ಚಿಟನಿಸ್‌ ಪಾರ್ಕ್‌ನಲ್ಲಿ ಈಚೆಗೆ ಹಿಂಸಾಚಾರ ನಡೆದಿತ್ತು. ನೂರಾರು ಜನರ ಗುಂಪು ಪೊಲೀಸರತ್ತ ಕಲ್ಲು ತೂರಾಟ ನಡೆಸಿ, ಕೆಲವೆಡೆ ಪೆಟ್ರೋಲ್‌ ಬಾಂಬ್‌ ಎಸೆದಿತ್ತು.

ADVERTISEMENT

ನಂತರ ಹಂಸಪುರಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಉದ್ರಿಕ್ತ ಗುಂಪು ಹಲವು ವಾಹನಗಳಿಗೆ ಬೆಂಕಿ ಇಟ್ಟಿತ್ತು. ಆ ಪ್ರದೇಶದ ಮನೆಗಳು ಮತ್ತು ಕ್ಲಿನಿಕ್‌ಗಳಿಗೆ ಬೆಂಕಿ ಇಟ್ಟು, ಧ್ವಂಸಗೊಳಿಸಿತು ಎಂದು ಪೊಲೀಸರು ತಿಳಿಸಿದ್ದರು.

ಹಿಂಸಾಚಾರದಲ್ಲಿ ಮೂವರು ಉಪ ಪೊಲೀಸ್‌ ಆಯುಕ್ತರು ಸೇರಿ 33 ಪೊಲೀಸ್‌ ಸಿಬ್ಬಂದಿ ಹಾಗೂ ಐವರು ನಾಗರಿಕರು ಗಾಯಗೊಂಡಿದ್ದರು.

ಔರಂಗಜೇಬ್‌ ಸಮಾಧಿ ತೆರವಿಗೆ ಆಗ್ರಹಿಸಿ ಪ್ರತಿಭಟನೆಗಳು ಭುಗಿಲೆದ್ದಿರುವ ಬೆನ್ನಲ್ಲೇ ಸಮಾಧಿ ಸುತ್ತಮುತ್ತಲಿನ ಪ್ರದೇಶವನ್ನು ಡ್ರೋನ್ ಹಾರಾಟ ನಿಷೇಧ ವಲಯವನ್ನಾಗಿ ಸರ್ಕಾರ ಈಚೆಗೆ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.