ADVERTISEMENT

ಅಯೋಧ್ಯೆ ಪ್ರಕರಣ ಇತ್ಯರ್ಥಕ್ಕೆ ಒಪ್ಪುವುದಿಲ್ಲ ಎಂದ ಮುಸ್ಲಿಂ ಕಕ್ಷಿದಾರರು

ಏಜೆನ್ಸೀಸ್
Published 18 ಅಕ್ಟೋಬರ್ 2019, 10:17 IST
Last Updated 18 ಅಕ್ಟೋಬರ್ 2019, 10:17 IST
ಅಯೋಧ್ಯೆಯ ಬಾಬರಿ ಮಸೀದಿ
ಅಯೋಧ್ಯೆಯ ಬಾಬರಿ ಮಸೀದಿ    

ನವದೆಹಲಿ: ಅಯೋಧ್ಯೆವಿವಾದಿತ ರಾಮ ಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದಲ್ಲಿ ಸಂಧಾನ ಸಮಿತಿಯ ಮುಂದೆ ನಾವು ಪ್ರಕರಣ ಇತ್ಯರ್ಥಗೊಳಿಸಬೇಕು ಎಂಬ ಪ್ರಸ್ತಾಪ ಮುಂದಿಟ್ಟಿಲ್ಲ ಎಂದು ಜಮಾತ್‌ ಉಲೇಮಾ ಇ ಹಿಂದ್‌ ಮತ್ತು ಮುಸ್ಲಿಂ ಕಕ್ಷಿದಾರರ ಪರ ವಾದಿಸುತ್ತಿರುವ ವಕೀಲರು ಹೇಳಿದ್ದಾರೆ.

ವಿಚಾರಣೆ ಅಂತ್ಯಗೊಳಿಸುವ ಮುನ್ನ ಅಯೋಧ್ಯೆ ಪ್ರಕರಣದಲ್ಲಿ ಸಂಧಾನ ಸಮಿತಿಯು ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ನ್ಯಾಯಪೀಠಕ್ಕೆ ಅಂತಿಮ ವರದಿ ಸಲ್ಲಿಸಿತ್ತು.

ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಬುಧವಾರ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. 40 ದಿನಗಳ ವಿಚಾರಣೆ ಅಕ್ಟೋಬರ್ 16ರಂದು ಮುಕ್ತಾಯಗೊಂಡಿದೆ.

ಯಾವೆಲ್ಲ ವಿಚಾರಗಳನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ತಮ್ಮ ಬೇಡಿಕೆ ಏನು ಎಂಬ ಬಗ್ಗೆ ಲಿಖಿತ ಟಿಪ್ಪಣಿ ಸಲ್ಲಿಸಲು ಕಕ್ಷಿದಾರರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಮೂರು ದಿನಗಳ ಅವಕಾಶ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಬಲ್ಲಮೂಲಗಳ ಪ್ರಕಾರ ಆ ರೀತಿಯ ಪ್ರಸ್ತಾಪ ಮಾಡಿದ್ದು ವಕ್ಫ್ ಮಂಡಳಿ. ಈ ಪ್ರಸ್ತಾಪ 4 ಷರತ್ತುಗಳಿಂದ ಕೂಡಿದೆ. ಅಯೋಧ್ಯೆ ಮತ್ತು ದೇಶದ ಇತರ ಭಾಗಗಳಲ್ಲಿಯೂ ಮುಸ್ಲಿಂ ಸಮುದಾಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿರಬೇಕು ಎಂದು ಇದರಲ್ಲಿ ಹೇಳಲಾಗಿದೆ.

ಶುಕ್ರವಾರ ಈ ಬಗ್ಗೆ ಪ್ರತಿಕ್ರಯಿಸಿದ ವಕೀಲ ಇಜಾಜ್ ಮಕ್ಬೂಲ್ , ಶಾಹೀದ್ ರಿಜ್ವಿ ಅವರ ಹೇಳಿಕೆಯನ್ನು ಮಾಧ್ಯಮಗಳು ತಿರುಚಿದ್ದು ನೋಡಿ ದಂಗಾದೆ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ನಾವು ಈ ರೀತಿ ಇತ್ಯರ್ಥ ಪ್ರಸ್ತಾಪವನ್ನು ಒಪ್ಪುವುದಿಲ್ಲ. ಈ ರೀತಿಯ ಸುದ್ದಿಯನ್ನು ಸಂಧಾನ ಸಮಿತಿ ಅಥವಾ ನಿರ್ಮೋಹಿ ಅಖಾಡವೇ ಸೋರಿಕೆ ಮಾಡಿರಬೇಕು ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.