ADVERTISEMENT

ಕುಂಭಮೇಳ: ಅಯೋಧ್ಯೆಗೂ ಭಕ್ತರ ದಂಡು

ಜ.11ಕ್ಕೆ ಪ್ರತಿಷ್ಠಾ ದ್ವಾದಶಿ ಉತ್ಸವ: ಬಾಲರಾಮ ಪ್ರತಿಷ್ಠಾಪನೆಯಾಗಿ ಒಂದು ವರ್ಷ

ಎಸ್‌.ಸಂಪತ್‌
Published 15 ಡಿಸೆಂಬರ್ 2024, 20:26 IST
Last Updated 15 ಡಿಸೆಂಬರ್ 2024, 20:26 IST
ಅಯೋಧ್ಯೆಯ ಬಾಲರಾಮ
ಅಯೋಧ್ಯೆಯ ಬಾಲರಾಮ   

ಪ್ರಯಾಗ್‍ರಾಜ್/ಅಯೋಧ್ಯೆ: ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಹೊಂದಿರುವ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಮುಂದಿನ ತಿಂಗಳಿಂದ ಆರಂಭವಾಗಲಿರುವ ‘ಮಹಾ ಕುಂಭಮೇಳ–2025’ಕ್ಕೂ ಎರಡು ದಿನ ಮುನ್ನ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷವಾಗಲಿದೆ.

ಜನವರಿ 13ರಿಂದ ಫೆಬ್ರುವರಿ 26ರವರೆಗೆ ‘ಮಹಾ ಕುಂಭಮೇಳ’ ಜರುಗಲಿದೆ. ಈ ವೇಳೆ ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರಯಾಗ್‍ರಾಜ್‍ಗೆ ಬರಲಿದ್ದು, ಅವರಲ್ಲಿ ಹಲವರು ಇಲ್ಲಿಂದ 160 ಕಿ.ಮೀ ದೂರದಲ್ಲಿರುವ ಅಯೋಧ್ಯೆಗೆ ಭೇಟಿ ನೀಡಿ, ಬಾಲರಾಮನ ದರ್ಶನ ಪಡೆಯಲು ಬಯಸುತ್ತಾರೆ. ಇದರಿಂದ ಅಯೋಧ್ಯೆಯಲ್ಲಿ ಯಾತ್ರಿಗಳ ಪ್ರವೇಶ ದುಪ್ಪಟ್ಟಾಗಲಿದ್ದು, ಬರುವ ಎಲ್ಲ ಭಕ್ತರಿಗೂ ರಾಮನ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲು ಮತ್ತು ಪರಿಸ್ಥಿತಿ ನಿರ್ವಹಿಸಲು ರಾಮಂದಿರ ಸಹ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

‘ಪ್ರಸ್ತುತ ನಿತ್ಯ 75 ಸಾವಿರದಿಂದ ಒಂದು ಲಕ್ಷದವರೆಗೂ ಜನರು ಅಯೋಧ್ಯೆ ರಾಮನ ದರ್ಶನಕ್ಕೆ ಬರುತ್ತಿದ್ದಾರೆ. ವಾರಾಂತ್ಯಗಳಲ್ಲಿ ಅವರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ತಿಂಗಳ ಕಾಲ ನಡೆಯುವ ಮಹಾ ಕುಂಭಮೇಳದ ಸಂದರ್ಭದಲ್ಲಿ ಅಯೋಧ್ಯೆಗೆ ಬರುವವರ ಸಂಖ್ಯೆ ನಿತ್ಯ 2 ಲಕ್ಷ ದಾಟಬಹುದು ಎಂದು ನಿರೀಕ್ಷಿಸಿದ್ದೇವೆ. ಅವರೆಲ್ಲರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲು ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ’ ಎಂದು ಆಯೋಧ್ಯೆಯ ರಾಮಮಂದಿರ ನಿರ್ಮಾಣದ ರಾಷ್ಟ್ರೀಯ ಉಸ್ತುವಾರಿ ಗೋಪಾಲ ನಾಗರಕಟ್ಟೆ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಅಗತ್ಯವಾದರೆ ದರ್ಶನದ ಅವಧಿಯನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಜ. 11ರಿಂದ 13ರವರೆಗೆ ಉತ್ಸವ: ಬರುವ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ದಿವಸ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರ್ಣಗೊಳ್ಳಲಿದೆ. 2024ನೇ ಸಾಲಿನಲ್ಲಿ ಆ ಮುಹೂರ್ತ ಜನವರಿ 22ರಂದು ಬಂದಿತ್ತು. 2025ರಲ್ಲಿ ಅದು ಜನವರಿ 11ರಂದು ಬಂದಿದೆ. ಹೀಗಾಗಿ ಮುಂದಿನ ಜನವರಿ 11ರಿಂದ 13ರವರೆಗೆ ಮೂರು ದಿನ ಪ್ರತಿಷ್ಠಾ ದ್ವಾದಶಿ ಉತ್ಸವ ಜರುಗಲಿದೆ ಎಂದು ಅವರು ವಿವರಿಸಿದರು.

ಈ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಉದ್ದೇಶಿಸಲಾಗಿದೆ. ಮೂರು ದಿನಗಳು ಇಲ್ಲಿ ವೇದ ಪಾರಾಯಣ, ಮಾನಸ ಪಾಠ, ರಾಮಾಯಣ ಪಾಠ, ಹವನಗಳು, ಜತೆಗೆ ಭಗವಂತನಿಗೆ ವಿವಿಧ ವಸ್ತುಗಳಿಂದ ಅಭಿಷೇಕ, ಮಧ್ಯಾಹ್ನ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ವೇಳೆ ಪುಷ್ಪ ಅಲಂಕಾರ, ದೀಪ ಅಲಂಕಾರಗಳು ನಡೆಯುತ್ತವೆ. ಅದನ್ನೂ ಜನ ಕಣ್ತುಂಬಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

ಸಂವಹನಕ್ಕೆ ‘ಚಾಟ್‌ಬಾಟ್’
ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಸಂವಹನವನ್ನು ಸುವ್ಯವಸ್ಥಿತಗೊಳಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕುಂಭ ಸಹಾಯಕ್ ಚಾಟ್‌ಬಾಟ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಯಾತ್ರಿಗಳಿಗೆ ಸುಮಾರು 11 ಭಾಷೆಗಳಲ್ಲಿ ಸಂವಹನ ಮಾಡಲು ಈ ವ್ಯವಸ್ಥೆ ಅನುಕೂಲಕರವಾಗಿದೆ.

2025ರ ಅಂತ್ಯದೊಳಗೆ ಮಂದಿರ ಪೂರ್ಣ

ಮಂದಿರ ನಿರ್ಮಾಣ ಕಾರ್ಯ ತೀವ್ರಗತಿಯಲ್ಲಿ ಸಾಗಿದೆ. ಬಾಲರಾಮನ ಪ್ರತಿಷ್ಠಾಪನೆಯ ದಿನವಾದ 2024ರ ಜನವರಿ 22ರ ವೇಳೆಗೆ ದೇವಾಲಯದ ಮೊದಲ ಮಹಡಿಯಷ್ಟೇ ಪೂರ್ಣವಾಗಿತ್ತು. ಈಗ ಮಂದಿರದ ಎರಡನೇ ಮಹಡಿಯೂ ಪೂರ್ಣವಾಗಿದೆ. ಶಿಖರದ ಕೆಲಸ ನಡೆಯುತ್ತಿದೆ. ಹೊರಗಡೆಯ ಪ್ರಾಕಾರದ ಕೆಲಸವೂ ಕ್ಷಿಪ್ರಗತಿಯಲ್ಲಿ ಸಾಗಿದೆ. ಮೂರು ಲಕ್ಷ ಘನ ಅಡಿಯಷ್ಟು ಕಲ್ಲುಗಳನ್ನು ಜೋಡಿಸಲಾಗಿದ್ದು, ಸಪ್ತ ಮಂಟಪದ ಕೆಲಸವೂ ಸಾಗಿದೆ.

ಮಂದಿರ ನಿರ್ಮಾಣ ಕೆಲಸ ಮೂರೂವರೆ ತಿಂಗಳಿನಿಂದ ಆರು ತಿಂಗಳೊಳಗೆ ಮುಗಿಯುವ ಸಾಧ್ಯತೆಯಿದೆ. ಆದರೆ, ಪ್ರಾಕಾರ ಪೂರ್ಣಗೊಳ್ಳಲು ಇನ್ನಷ್ಟು ಸಮಯ ಬೇಕು. ಅಂತಿಮ ಸ್ಪರ್ಶ ಸೇರಿದಂತೆ ಎಲ್ಲ ಕೆಲಸ ಮುಗಿಯಲು ಒಂದು ವರ್ಷವಾದರೂ ಬೇಕಾಬಹುದು. ಅಂದರೆ 2025ರ ಡಿಸೆಂಬರ್ ವೇಳೆಗೆ ದೇವಾಲಯ ನಿರ್ಮಾಣದ ಪೂರ್ಣ ಕೆಲಸ ಮುಕ್ತಾಯವಾಗಬಹುದು ಎಂದು ಅಂದಾಜಿಸಿದ್ದೇವೆ ಎಂದು ಗೋಪಾಲ್ ತಿಳಿಸಿದರು.

ಈಗಲೂ ನಿತ್ಯ ಎರಡು ಸಾವಿರ ಜನರು ದೇಗುಲ ನಿರ್ಮಾಣ ಕಾಯಕದಲ್ಲಿ ತೊಡಗಿದ್ದಾರೆ. ಹಗಲೂ ರಾತ್ರಿ, ದಿನದ 24 ಗಂಟೆಯೂ ಕೆಲಸ ನಡೆಯುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.