ADVERTISEMENT

ಅಯೋಧ್ಯೆ | ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿಪೂಜೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಸಾಧು–ಸಂತರು, ರಾಜಕಾರಣಿಗಳು ಸೇರಿದಂತೆ ಒಟ್ಟು 175 ಮಂದಿ ಅತಿಥಿಗಳು ಭಾಗವಹಿಸಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಹೆಚ್ಚು ಜನ ಸ್ಥಳಕ್ಕೆ ಬರಬಾರದೆಂದು ಮನವಿ ಮಾಡಲಾಗಿತ್ತು. ಈ ಕಾರ್ಯಕ್ರಮದ ಕ್ಷಣಕ್ಷಣದ ಅಪ್‌ಡೇಟ್ಸ್ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 11:06 IST
Last Updated 5 ಆಗಸ್ಟ್ 2020, 11:06 IST

ಶ್ರೀರಾಮಚಂದ್ರ ಕಿ ಜೈ – ಘೋಷಣೆಯೊಂದಿಗೆ ಮೋದಿ ಭಾಷಣ ಮುಕ್ತಾಯ

ಕೋವಿಡ್ ದೂರ ಇಡಬೇಕು ಎಂದಾದರೆ ಮಾಸ್ಕ್‌ಗಳನ್ನು ಜರೂರು ಬಳಸಿ. ಎಲ್ಲ ದೇಶವಾಸಿಗಳ ಮೇಲೆ ಮಾತೆ ಸೀತಾದೇವಿ ಮತ್ತು ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಇರಲಿ.

ನಾವೆಲ್ಲರೂ ಮುಂದೆ ಹೆಜ್ಜೆಯಿಟ್ಟರೆ ದೇಶ ಮುಂದೆ ಹೆಜ್ಜೆಯಿಡುತ್ತದೆ. ರಾಮನ ಈ ಮಂದಿರವು ಹಲವು ಯುಗಗಳವರೆಗೆ ಮಾನವತೆಗೆ ಪ್ರೇರಣೆ ಕೊಡುತ್ತದೆ. ಕೊರೊನಾ ಕಾಲದಲ್ಲಿ ರಾಮನ ಆದರ್ಶದ ಅಗತ್ಯ ಹಿಂದಿಗಿಂತಲೂ ಹೆಚ್ಚು ಇದೆ.

ರಾಮನನ್ನು ಗೌರವಿಸಿದಾಗ ಅಭಿವೃದ್ಧಿ ಸಾಧ್ಯ. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು, ಎಲ್ಲರ ಅಭಿವೃದ್ಧಿಗಾಗಿ ದುಡಿಯುವ ಆತ್ಮವಿಶ್ವಾಸ ನಮಗೆ ಸಿಗುತ್ತದೆ. ಆತ್ಮನಿರ್ಭರ ಭಾರತಕ್ಕೂ ರಾಮನ ಸಂದೇಶ ಪೂರಕ.

ನಾವು ಹೇಗೆ ಕೆಲಸ ಮಾಡಬೇಕು ಎನ್ನವುದಕ್ಕೆ ಇದು ಆಧಾರವಾಗಬೇಕು. ಜನರನ್ನು ಪ್ರೀತಿಸಲು, ಸಮಾಜದಲ್ಲಿ ಸಾಮರಸ್ಯ ಕಾಪಾಡಲು ರಾಮ ಪ್ರೇರಣೆಯಾಗಬೇಕು.

ರಾಮ ತನ್ನ ಬಗ್ಗೆ ಹೇಳಿಕೊಳ್ಳುವಾಗ ’ನಾನು ಸಮಯ, ಸ್ಥಾನ, ಪರಿಸ್ಥಿತಿಗೆ ತಕ್ಕಂತೆ ಯೋಚಿಸುತ್ತೇನೆ ಮತ್ತು ಕೆಲಸ ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದೇನೆ.

ರಾಷ್ಟ್ರಪಿತ ಮಹಾತ್ಮಗಾಂಧಿ ಇದೇ ಸೂತ್ರಗಳ ಆಧರಿಸಿದ ರಾಮರಾಜ್ಯದ ಕನಸು ಕಂಡಿದ್ದರು. ರಾಮ ತನ್ನ ಬಗ್ಗೆ ಹೇಳಿಕೊಳ್ಳುವಾಗ ಸಮಯ, ಸ್ಥಾನ, ಪರಿಸ್ಥಿತಿಗೆ ತಕ್ಕಂತೆ ಯೋಚಿಸುತ್ತಾನೆ ಮತ್ತು ಕೆಲಸ ಮಾಡುತ್ತಾನೆ

ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ (ತಾಯಿ ಮತ್ತು ಸ್ವದೇಶ ಸ್ವರ್ಗಕ್ಕಿಂತ ಹೆಚ್ಚು) ಎನ್ನವುದು ರಾಮನ ಸಂದೇಶ. ನಮ್ಮ ದೇಶ ಎಷ್ಟು ಬೆಳೆದರೂ ನೀತಿಯ ಹಾದಿಯಿಂದ ಹಿಂದೆ ಸರಿಯುವುದಿಲ್ಲ. ಇದು ರಾಮನ ಆದರ್ಶ.

ಎಲ್ಲ ಸ್ತ್ರೀ–ಪುರುಷರು ಸಮಾನ ಸುಖಿಗಳಾಗಿದ್ದರು ಎನ್ನುವುದು ರಾಮನ ಆಡಳಿತದ ವೈಭವ. ರಾಮನ ಆಡಳಿತದಲ್ಲಿ ರೈತರು, ಪಶುಪಾಲಕರು ಖುಷಿಯಾಗಿ ಜೀವನ ಸಾಗಿಸುತ್ತಿದ್ದರು. ವೃದ್ಧರು, ಬಾಲಕರು, ರೋಗಿಗಳಿಗೂ ರಾಮನ ಆಡಳಿತದಲ್ಲಿ ಬೆಚ್ಚನೆ ರಕ್ಷೆಯಿತ್ತು.

ಇಡೀ ಜಗತ್ತಿನಲ್ಲಿ ರಾಮನಂಥ ರಾಜ ಇರಲಿಲ್ಲ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ರಾಮನ ಆಡಳಿತದಲ್ಲಿ ಯಾರೂ ದುಃಖಿಗಳು, ಬಡವರು ಇರಲಿಲ್ಲ.

ದೇಶದಲ್ಲಿ ರಾಮ ಎಲ್ಲೆಲ್ಲಿ ಓಡಾಡಿದ್ದನೋ ಅವೆಲ್ಲವನ್ನೂ ರಾಮ ಸರ್ಕೀಟ್ ಹೆಸರಿನಲ್ಲಿ ಜೋಡಿಸಲಾಗುತ್ತಿದೆ. ಅಯೋಧ್ಯೆ ರಾಮನ ಸ್ವಂತದ, ಪ್ರೀತಿಯ ನಗರ. ರಾಮನ ಅಯೋಧ್ಯೆಯ ಭವ್ಯತೆ, ದಿವ್ಯತೆ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಂಡಿದ್ದೇನೆ

ಶ್ರೀರಾಮ ಮತ್ತು ರಾಮ ಮಂದಿರದ ಸಂದೇಶವನ್ನು ಪೂರ್ಣ ಜಗತ್ತಿಗೆ ನಿರಂತರ ತಲುಪುವಂತೆ ಮಾಡುವುದು ಹೇಗೆ? ಇದು ನಮ್ಮ ಮುಂದಿನ ತಲೆಮಾರಿನ ವಿಶೇಷ ಜವಾಬ್ದಾರಿ.

ವಿಶ್ವದ ಹಲವು ದೇಶಗಳಲ್ಲಿ, ಹಲವು ಭಾಷೆಗಳಲ್ಲಿ ಇಂದಿಗೂ ರಾಮಾಯಣ ಪ್ರಚಲಿತದಲ್ಲಿದೆ. ಇವರೆಲ್ಲರಿಗೂ ರಾಮಮಂದಿರ ನಿರ್ಮಾಣದಿಂದ ಸಂತೋಷವಾಗುತ್ತಿದೆ. ಮಂದಿರ ನಿರ್ಮಾಣವು ಭವ್ಯ ಸಂಸ್ಕೃತಿಯ ಪ್ರತೀಕವಾಗಲಿದೆ. ಇದು ಅನಂತ ಕಾಲದವರೆಗೆ ಮಾನವ ಕುಲಕ್ಕೆ ಪ್ರೇರಣೆಯಾಗಲಿದೆ

ಕಾಂಬೋಡಿಯಾ, ವಾಲೋ, ಮಲೇಷಿಯಾ, ಥಾಯ್ಲೆಂಡ್, ಇರಾನ್ ಮತ್ತು ಚೀನಾಗಳಲ್ಲಿಯೂ ರಾಮಾಯಣಗಳಿವೆ. ರಾಮ ಕಥೆಯಲ್ಲಿ ಭಕ್ತಿಯಿಂದ ನೆನಯುತ್ತಾರೆ ಆ ಜನರು. ನೇಪಾಳದಲ್ಲಿ ರಾಮನಿಗಿಂತಲೂ ಸೀತೆಯ ಭಕ್ತರು ಹೆಚ್ಚು. ಅವರು ಸೀತೆಯೊಂದಿಗೆ ಭಾವುಕ ನಂಟು ಹೊಂದಿದ್ದಾರೆ.

ಗುರುಗೋವಿಂದ ಸಿಂಗ್‌ರು ಸ್ವತಃ ರಾಮಾಯಣ ಬರೆದಿದ್ದರು. ದೇಶದಲ್ಲಿ ವಿವಿಧ ರೀತಿಯ ರಾಮಾಯಣ ಕೃತಿಗಳು ಇವೆ. ರಾಮ ಎಲ್ಲೆಡೆ ಇದ್ದೇನೆ. ವಿವಿಧತೆಯಲ್ಲಿ ಏಕತೆ ಎನ್ನುವುದಕ್ಕೆ ರಾಮನೇ ಪ್ರತೀಕ. ವಿಶ್ವದಲ್ಲಿ ಅತಿಹೆಚ್ಚು ಮುಸ್ಲಿಮರು ಇರುವ ಇಂಡೋನೇಷ್ಯಾದಲ್ಲಿಯೂ ಸಾಕಷ್ಟು ರಾಮಾಯಣ ಕೃತಿಗಳಿವೆ ರಾಮ ಇಂದಿಗೂ ಅಲ್ಲಿ ಪೂಜನೀಯ

ರಾಮನ ಕಥೆ ಹಲವು ಮಹಾಕಾವ್ಯಗಳಿಗೆ ವಸ್ತು, ಅದೇ ರಾಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧಿಜಿಯವರ ಭಜನೆಗಳ ಮೂಲಕ ಜನರಿಗೆ ಪ್ರೇರಣೆ ನೀಡಿದ. ವಿವಿಧತೆಯಲ್ಲಿ ಏಕತೆ ಎನ್ನುವುದು ಭಾರತದ ಜೀವನ ಚರಿತ್ರೆ. ತಮಿಳು, ಕನ್ನಡ, ತೆಲುಗು, ಒಡಿಶಾ, ಮಲಯಾಳಂ, ಕಾಶ್ಮೀರಿ ಬಾಂಗ್ಲಾ ಭಾಷೆಯ ರಾಮಾಯಣಗಳು ಸ್ವತಂತ್ರ ಕೃತಿಗಳು

ರಾಮನ ಅಭೂತ ವ್ಯಕ್ತಿತ್ವ, ಧೈರ್ಯ ಹಲವು ಯುಗಗಳಿಗೆ ಪ್ರೇರಣಾದಾಯಕ. ರಾಮನು ಎಲ್ಲ ಪ್ರಜೆಗಳನ್ನು ಒಂದೇ ರೀತಿ ಕಾಣುತ್ತಿದ್ದ. ಬಡವರು ಮತ್ತು ದೀನ, ದುಃಖಿತರನ್ನು ಹೆಚ್ಚು ಪ್ರೀತಿಯಿಂದ ಕಾಣುತ್ತಿದ್ದ. ಭಾರತದ ನಂಬಿಕೆಯಲ್ಲಿ, ಆದರ್ಶಗಳಲ್ಲಿ, ದಿವ್ಯತೆಯಲ್ಲಿ, ದರ್ಶನದಲ್ಲಿ ರಾಮನಿದ್ದಾನೆ.

ರಾಮನು ತೇಜಕ್ಕೆ ಸೂರ್ಯ, ಕ್ಷಮೆಗೆ ಭೂಮಿ, ಬುದ್ಧಿಗೆ ಗುರು, ಯಶಸ್ಸಿನಲ್ಲಿ ಇಂದ್ರಿಗೆ ಸಮಾನ. ಸತ್ಯವನ್ನು ಆಧರಿಸಿದ ಬದುಕು ಜೀವಿಸಿ ಎಂಬುದೇ ರಾಮನ ಜೀವನ ನಮಗೆ ಕೊಡುವ ಸಂದೇಶ. ರಾಮನ ಆಡಳಿತಕ್ಕೆ ಆಧಾರವಾಗಿದ್ದ ಅಂಶ ಸಾಮಾಜಿಕ ಸಾಮರಾಸ್ಯ. ವಿಶ್ವಾಸದ ಆಡಳಿತ ರಾಮನದು.

ರಾಮಾಯಣ ಕಾಲದಲ್ಲಿ ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದು ರಾಮಸೇತು ನಿರ್ಮಿಸಲಾಯಿತು. ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮನ ಹೆಸರು ಹೊತ್ತ ಇಟ್ಟಿಗೆಗಳು ಇಲ್ಲಿಗೆ ಬಂದವು. ಇದು ನ ಭೂತೋ ನ ಭವಿಷ್ಯತಿ ನಮ್ಮ ಸಾಮೂಹಿಕ ಶಕ್ತಿ ಇಡೀ ಜಗತ್ತಿಗೆ ಅಧ್ಯಯನದ ವಿಷಯ.

ಈ ದಿನವು ಕೋಟ್ಯಂತರ ರಾಮಭಕ್ತರ ಸಂಕಲ್ಪ ಸತ್ಯವಾದ ದಿನ. ಸತ್ಯ, ಅಹಿಂಸಾ, ಆಸ್ಥಾ ಮತ್ತು ಬಲಿದಾನಕ್ಕೆ ನ್ಯಾಯಪ್ರಿಯ ಭಾರತ ಕೊಟ್ಟ ಗೌರವ. ಸುಪ್ರೀಂಕೋರ್ಟ್‌ ತೀರ್ಪು ಕೊಟ್ಟಾಗ ದೇಶವಾಸಿಗಳು ಶಾಂತಿಯಿಂದ ನಡೆದುಕೊಂಡರು. ಇಂದೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ.

ಇಡೀ ಜಗತ್ತಿನಿಂದ ಜನರು ಪ್ರಭು ರಾಮ್ ಮತ್ತು ಜಾನಕಿಯ ದರ್ಶನಕ್ಕಾಗಿ ಇಲ್ಲಿಗೆ ಬರ್ತಾರೆ. ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಯು ದೇಶವನ್ನು ಜೋಡಿಸುವ ಯತ್ನ. ಇದು ವಿಶ್ವಾಸವನ್ನು ವಿದ್ಯಮಾನದೊಂದಿಗೆ ಜೋಡಿಸುವ ಯತ್ನ

ರಾಮನ ಭವ್ಯದಿವ್ಯ ಮಂದಿರಕ್ಕಾಗಿ ಇಂದು ಭೂಮಿಪೂಜೆ ಆಗಿದೆ. ಇಲ್ಲಿಗೆ ಬರುವ ಮೊದಲು ನಾನು ಹನುಮಂತನ ಗುಡಿಗೆ ಹೋಗಿದ್ದೆ. ರಾಮನ ಕೆಲಸಗಳನ್ನು ಹನುಮ ಶ್ರದ್ಧೆಯಿಂದ ಮಾಡುತ್ತಿದ್ದ. ರಾಮನ ಮಂದಿರ ನಿರ್ಮಾಣದಿಂದ ಅಯೋಧ್ಯೆಯ ಭವ್ಯತೆ ಹೆಚ್ಚಾಗುವುದಷ್ಟೇ ಅಲ್ಲ. ಇಲ್ಲಿನ ವಾತಾವರಣವೇ ಬದಲಾಗಲಿದೆ.

ಸಂಪೂರ್ಣ ಸೃಷ್ಟಿಯ ಶಕ್ತಿ ರಾಮಜನ್ಮಭೂಮಿಯ ಪವಿತ್ರ ಆಂದೋಲನದೊಂದಿಗೆ ಜೋಡಿಸಿಕೊಂಡಿತ್ತು. ಎಲ್ಲರಿಗೂ ಆಶೀರ್ವಾದ ಮಾಡುತ್ತಿದ್ದಾರೆ. ಬದುಕಿನ ಪ್ರೇರಣೆಗಾಗಿ ಇಂದಿಗೂ ನಾವು ರಾಮನತ್ತ ನೋಡುತ್ತೇವೆ. ಇತಿಹಾಸ ಪುಟಗಳಲ್ಲಿ ಏನೆಲ್ಲಾ ಆಗಿಹೋದರು ರಾಮ ನಮ್ಮ ಮನದಲ್ಲಿ ವಿರಾಜಮಾನನಾಗಿದ್ದಾನೆ, ಸಂಸ್ಕೃತಿಯಆಧಾರವಾಗಿದ್ದಾನೆ

ಅವರ ತ್ಯಾಗ ಮತ್ತು ಬಲಿದಾನ ಮತ್ತು ಸಂಘರ್ಷದಿಂದ ಈ ಕನಸು ಇಂದು ನನಸಾಗುತ್ತಿದೆ, ಅವರ ಬದುಕು ರಾಮಮಂದಿರದ ಕನಸಿನೊಂದಿಗೆ ಬೆಸೆದುಕೊಂಡಿತ್ತು. ಅವರೆಲ್ಲರಿಗೂ ದೇಶದ 130 ಕೋಟಿ ದೇಶವಾಸಿಗಳ ಪರವಾಗಿ ಕೈಮುಗಿದು ನಮಿಸುತ್ತೇನೆ

ಇದೂ ಅಷ್ಟೇ. ರಾಮಮಂದಿರಕ್ಕಾಗಿ ಹಲವು ಪೀಳಿಗೆಗಳು ಅಖಂಡವಾಗಿ ಪ್ರಯತ್ನಿಸಿದ್ದವು. ಈ ದಿನವು ಅವರ ತ್ಯಾಗ ಮತ್ತು ಸಂಕಲ್ಪದ ಪ್ರತೀಕ. ರಾಮ ಮಂದಿರಕ್ಕಾಗಿ ನಡೆದ ಆಂದೋಲನದಲ್ಲಿ ಅರ್ಪಣೆ ಮತ್ತು ತರ್ಪಣ ಇತ್ತು. ಸಂಘರ್ಷ ಮತ್ತು ಸಂಕಲ್ಪ ಇತ್ತು

ಸ್ವಾತಂತ್ರ್ಯ ಹೋರಾಟದ ಸಂದರ್ಭ ಸಾಕಷ್ಟು ಜನರು ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದರು. ದೇಶದ ಎಲ್ಲ ಭೂಭಾಗಗಳಲ್ಲಿಯೂ ಹೋರಾಟ ನಡೆದಿತ್ತು. ಆಗಸ್ಟ್‌ 15 ಎನ್ನುವುದು ಇಂಥ ಲಕ್ಷಾಂತರ ಬಲಿದಾನಗಳ ಪ್ರತೀಕ. ಸ್ವಾತಂತ್ರ್ಯ ಗಳಿಸಬೇಕೆನ್ನುವ ಭಾವನೆಗಳ ಪ್ರತೀಕ.

ಎಲ್ಲಿ ಕೆಡವಾಗಿತ್ತೋ ಅಲ್ಲೇ ಮಂದಿರ ಮೇಲೆದ್ದು ನಿಲ್ಲಲಿದೆ. ರಾಮ ಜನ್ಮಭೂಮಿ ಇಂದು ಮುಕ್ತವಾಗಿದೆ ಎಂದು ಜೈ ಶ್ರೀರಾಮ್ ಘೋಷಣೆ ಮತ್ತೆ ಮೊಳಗಿಸಿದ ಮೋದಿ

ನಮ್ಮ ರಾಮಲಲ್ಲಾನಿಗಾಗಿ ಒಂದು ಭವ್ಯ ಮಂದಿರ ನಿರ್ಮಾಣವಾಗಲಿದೆ

ಹಲವು ವರ್ಷಗಳ ಕಾಯುವಿಕೆ ಇಂದು ಅಂತ್ಯವಾಗಿದೆ. ಕೋಟ್ಯಂತರ ಜನರು ಈ ಪವಿತ್ರ ದಿನ ನೋಡಲೆಂದು ಉಸಿರು ಬಿಗಿ ಹಿಡಿದಿದ್ದರು.

ಪೂರ್ಣ ದೇಶವು ಇಂದು ರಾಮಮಯವಾಗಿದೆ. ಇಡೀದೇಶ ರೋಮಾಂಚಿತವಾಗಿದೆ. ಪ್ರತಿ ಮನಸ್ಸಿನಲ್ಲಿಯೂ ಜ್ಯೋತಿ ಬೆಳಗುತ್ತಿದೆ. ಪೂರ್ತಿ ಭಾರತ ಭಾವುಕವಾಗಿದೆ. –ಮೋದಿ

ಭಾರತವು ಇಂದು ಸೂರ್ಯನ ಸನ್ನಿಧಿಯಲ್ಲಿ, ಸರಯೂ ನದಿಯ ತೀರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ.

ಈ ಮಹತ್ವದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾಗಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ನಾನು ಹೃದಯಪೂರ್ವಕ ಆಭಾರಿಯಾಗಿದ್ದಾನೆ.

ದೇಶದ ಕೋಟಿಕೋಟಿ ರಾಮಭಕ್ತರಿಗೆ ಈ ಶುಭದಿನದ ಕೋಟಿಕೋಟಿ ಶುಭಾಶಯಗಳು

ಪ್ರಭು ರಾಮಚಂದ್ರ ಮತ್ತು ಸೀತಾದೇವಿಯನ್ನು ನೆನಪಿಸಿಕೊಂಡು ನನ್ನ ಮಾತು ಆರಂಭಿಸುತ್ತೇನೆ. ಜೈಶ್ರೀರಾಮ್ ಘೋಷಣೆಯಿಂದಿಗೆ ಮೋದಿ ಮಾತು ಆರಂಭ.

ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ

ಕರ್ನಾಟಕದಿಂದ ಬಂದಿರುವ ಕೋದಂಡ ರಾಮನ ಪ್ರತಿಮೆಯನ್ನು ಪ್ರಧಾನಿಗೆ ನೀಡಿದ ಯೋಗಿ ಆದಿತ್ಯನಾಥ

ರಾಮ ಮಂದಿರ ನಿರ್ಮಾಣದ ಭೂಮಿಪೂಜೆಯ ನೆನಪಿಗೆ ಶಿಲಾಫಲಕ ಅನಾವರಣ, ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದ ನರೇಂದ್ರ ಮೋದಿ

ಶ್ರೀಗಣೇಶ ಅಂತ ಶುಭಾರಂಭವಾಗಿದೆ. ಮಂದಿರದ ನಿರ್ಮಾಣ ಅಂದ್ರೆ ಭಾರತದ, ವಿಶ್ವದ ನಿರ್ಮಾಣ. ಶುಭ ಸಂಕಲ್ಪದೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದೇವೆ. ಬೇಗ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಬೇಗನೆ ದಿವ್ಯ, ಭವ್ಯ ಮಂದಿರ ನಿರ್ಮಾಣವಾಗಬೇಕು ಎಂಬುದು ಜನರ ಆಸೆ.

ಮುಹೂರ್ತಕ್ಕೆ ಸರಿಯಾಗಿ ಭೂಮಿಪೂಜೆ ಆಗಿದೆ. ಸಮಸ್ತ ಭಕ್ತರ ಆಶಯಗಳು ಈಡೇರುವಂಥ ಮಂದಿರ ಇಲ್ಲಿ ನಿರ್ಮಾಣವಾಗಲಿದೆ. ಇದು ಜನರ ಇಚ್ಛೆ.

ಶೀಘ್ರದಲ್ಲಿ ಇಲ್ಲಿ ರಾಮಮಂದಿರ ಭವ್ಯವಾಗಿ ತಲೆಎತ್ತಲಿದೆ. ಇದಕ್ಕಾಗಿ ತನುಮನಧನ ಅರ್ಪಣೆ ಮಾಡಲು ಎಲ್ಲರೂ ಸಿದ್ದರಾಗಿದ್ದಾರೆ. ಮಂದಿರ ನಿರ್ಮಾಣ ಕಾರ್ಯ ಇಂದಿನಿಂದ ಆರಂಭವಾಗಿದೆ.

ಇಲ್ಲಿ ಯಾವಾಗ ಮಂದಿರ ಕಟ್ತಾರೆ ಅಂತ ಭಕ್ತರು ಕೇಳ್ತಾನೇ ಇದ್ದರು. ಈಗ ಒಂದೆಡೆ ಮೋದಿ, ಇನ್ನೊಂದು ಕಡೆ ಯೋಗಿ ಇದಕ್ಕಾಗಿ ದುಡಿದಿದ್ದಾರೆ. ಈಗಲ್ಲದಿದ್ದರೆ ಇನ್ಯಾವಾಗ ಇದು ಆಗ್ತಿತ್ತು?

ಸಭಿಕರಿಂದ ’ಶ್ರೀ ರಾಮ ಜಯರಾಮ ಜಯಜಯ ರಾಮ’ ಹರ್ಷೋದ್ಗಾರ

ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಅಧ್ಯಕ್ಷ ಗೋಪಾಲದಾಸ್‌ಜಿ ಮಹಾರಾಜ್ – ಭಾಷಣ ಆರಂಭ

ಮೋಹನ್ ಭಾಗವತ್ ಭಾಷಣ ಮುಕ್ತಾಯ

ದೇಶದಲ್ಲಿ ಈಗಾಗಲೇ ಲಕ್ಷಾಂತರ ಮಂದಿರಗಳಿವೆ. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಎನ್ನುವುದು ಅವೆಲ್ಲಕ್ಕಿಂತಲೂ ಭಿನ್ನ. ಇಲ್ಲಿ ಮಂದಿರ ನಿರ್ಮಾಣವಾಗುವ ಮೊದಲು ನಮ್ಮ ಮನಮಂದಿರಗಳನ್ನು ನಿರ್ಮಿಸಿಕೊಳ್ಳೋಣ.

ಅತ್ಯಾಸೆ, ವಿಪರೀತ ಸಿಟ್ಟು, ಜಿಪುಣತನದಂಥ ಸಮಾಜಕಂಟಕ ಸ್ವಭಾಗಳನ್ನು ದೂರವಿಡಲು ರಾಮನ ಆದರ್ಶಗಳಿಂದ ಸ್ಪೂರ್ತಿ ಪಡೆಯೋಣ.

ಧರ್ಮ ಎಲ್ಲರನ್ನೂ ಮೇಲ್ಮೆಗೆ ತರುತ್ತದೆ. ವಿಶ್ವಕ್ಕೇ ಭಾರತವು ಸುಖ ಶಾಂತಿ ತರಬಲ್ಲದು. ನಾವು ಅಯೋಧ್ಯೆಯಲ್ಲಿ ಮಂದಿರ ಕಟ್ಟಿ ಸುಮ್ಮನಾಗಬಾರದು. ಅದಕ್ಕೂ ಮೊದಲು ಮನಮಮಂದಿರ ಕಟ್ಟಬೇಕು.

ಎಲ್ಲರೂ ರಾಮರೇ, ಎಲ್ಲರನ್ನೂ ರಾಮನೇ ಇದ್ದಾನೆ. ರಾಮ ಮಂದಿರನವನ್ನು ಇಲ್ಲಿಯೇ ಕಟ್ಟೋಣ. ನಮ್ಮ ಹೃದಯಗಳನ್ನು ಅಯೋಧ್ಯೆ ಮಾಡಿಕೊಳ್ಳೋಣ.

ಕೊರೊನಾ ಕಾಲದಿಂದ ವಿಶ್ವ ಅಂತರ್ಮುಖಿಯಾಗಿದೆ. ಏನಾದ್ರೂ ದಾರಿಯಿದೆಯೇ ಎಂದು ಎದುರು ನೋಡುತ್ತಿದೆ. ನಮಗೆ ವಿಶ್ವಾಸವಿದೆ. ರಾಮನ ಹಾದಿಯಲ್ಲಿ ಪರಿಹಾರವಿದೆ.

’ವಸುಧೈವ ಕುಟುಂಬಕಂ’ ಎನ್ನುವುದು ಭಾರತೀಯರ ಧ್ಯೇಯ. ಸಾಧ್ಯವಾದ ಮಟ್ಟಿಗೂ ಎಲ್ಲರನ್ನೂ ಜೊತೆಗೆ ಕರೆದೊಯ್ಯಲು ಯತ್ನಿಸುತ್ತೇವೆ.

ಅಡ್ವಾಣಿ ಅವರು ಈ ಕಾರ್ಯಕ್ರಮವನ್ನು ತಮ್ಮ ನಿವಾಸದಲ್ಲಿ ನೋಡುತ್ತಿರಬಹುದು. ಸಾಕಷ್ಟು ನಾಯಕರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಪರಿಸ್ಥಿತಿಯೇ ಹಾಗಿದೆ. – ಮೋಹನ್ ಭಾಗವತ್

ಇದು ನನಗೆ ಅತ್ಯಂತ ಆನಂದದ ದಿನ. ಈ ಹಿಂದೆ ನಮ್ಮ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸರು ’ಈ ಕೆಲಸವನ್ನು ವರ್ಷಗಟ್ಟಲೆ ಮಾಡಬೇಕು’ ಎಂದು ಹೇಳಿದ್ದರು. ಅದೇ ರೀತಿ ನಾವು ನಡೆದುಕೊಂಡೆವು. ಸಾವಿರಾರು ಮಂದಿ ಈ ಕಾರ್ಯಕ್ಕಾಗಿ ಬಲಿದಾನ ಮಾಡಿದ್ದರು. ಅವರೆಲ್ಲರನ್ನೂ ನಾನು ನೆನಪಿಸಿಕೊಳ್ಳುತ್ತೇನೆ. – ಮೋಹನ್ ಭಾಗವತ್

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಭಾಷಣ ಆರಂಭ

ಜೈಜೈ ಶ್ರೀರಾಮ್ ಘೋಷಣೆಯೊಂದಿಗೆ ಆದಿತ್ಯನಾಥ್ ಭಾಷಣ ಮುಕ್ತಾಯ

ನಮಗೆ ಇದು ಅತ್ಯಂತ ಭಾವನಾತ್ಮಕ, ಮಹತ್ವಪೂರ್ಣ ದಿನ. ಭಗವಾನ್ ರಾಮಮಂದಿರವು ದೇಶದ ಕೀರ್ತಿ ಕಳಶದ ರೂಪದಲ್ಲಿ ಇಲ್ಲಿ ಅರಳಿ ನಿಲ್ಲಲಿದೆ.

ಅವಧಪುರಿಯನ್ನು ವಿಶ್ವದ ಸಂಪದ್ಭರಿತ ನಗರವಾಗಿಸುವ ಸಂಕಲ್ಪ ನಾವು ಮಾಡಿದ್ದೇವೆ. ರಾಮಾಯಣ ಪರ್ಯಟನೆ, ಸ್ವದೇಶ ದರ್ಶನದ ಯೋಜನೆಗಳಡಿ ಇಲ್ಲಿ ಸಾಕಷ್ಟು ಕೆಲಸಗಳು ಆಗಿವೆ. – ಯೋಗಿ ಆದಿತ್ಯನಾಥ್

ಇದು ಅವಧಪುರಿ (ಅಯೋಧ್ಯೆ). ದೀಪಾವಳಿಯನ್ನು ಅಯೋಧ್ಯೆಯೊಂದಿಗೆ ಜೋಡಿಸಿ ದೀಪೋತ್ಸವ ಆಚರಿಸಿದ್ದೆವು. ನಮ್ಮ ಸಂಭ್ರಮ ಹೆಚ್ಚಿಸುವ ಕೆಲಸ ಇಂದು ಆಗಿದೆ. ರಾಮ ಮಂದಿರದ ಭೂಮಿಪೂಜೆ ಇಂದು ನಡೆದಿದೆ. – ಯೋಗಿ ಆದಿತ್ಯನಾಥ್

ರಾಮ ಮಂದಿರಕ್ಕಾಗಿ ಸಂತರು ಬಲಿದಾನ ಮಾಡಿದ್ದರು. ಮಂದಿರ ನಿರ್ಮಾಣದ ಆಶಯವನ್ನು ಜೀವಂತ ಇರಿಸಿಕೊಳ್ಳುವ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿತ್ತು. ಹಿಂಸಾಚಾರಕ್ಕೆ ಅವಕಾಶವಿಲ್ಲದೆ ಈ ಆಶಯ ಶಾಂತಿಯುತವಾಗಿ ಈಡೇರಿದೆ. ಇದಕ್ಕಾಗಿ ಪ್ರಧಾನಿಯನ್ನು ಅಭಿನಂದಿಸುವೆ. – ಯೋಗಿ ಆದಿತ್ಯನಾಥ್

ಸಂವಿಧಾನ ಬದ್ಧವಾಗಿ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಭಾರತೀಯರಿಗೆ ಶಕ್ತಿಯಿದೆ. – ಯೋಗಿ ಆದಿತ್ಯನಾಥ್

ದೇಶದ ವಿವಿಧೆಡೆಗಳಲ್ಲಿರುವ ಕೋಟ್ಯಂತರ ರಾಮಭಕ್ತರು ಈ ಕಾರ್ಯಕ್ರಮವನ್ನು ಶ್ರದ್ಧೆಯಿಂದ ನೋಡುತ್ತಿದ್ದಾರೆ. ಅವರೆಲ್ಲರನ್ನೂ ನಮಿಸುತ್ತೇನೆ. – ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಅಧ್ಯಕ್ಷ ಗೋಪಾಲದಾಸ್‌ಜಿ ಮಹಾರಾಜ್, ವಿವಿಧ ಪಂಥ ಮತ್ತು ಸಂಪ್ರದಾಯಗಳ ಸನ್ಯಾಸಿಗಳು ಸಭೆಯಲ್ಲಿ ಭಾಗಿ.

130 ಕೋಟಿ ಭಾರತೀಯರು ಮತ್ತು ಭಾರತದ ಬಗ್ಗೆ ಗೌರವವಿರುವ ಕೋಟ್ಯಂತರ ಜನರ ಭಾವನೆಗಳಿಗೆ ಗೌರವ ಕೊಟ್ಟ ದಿನ ಇದು – ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಸಭೆಯಲ್ಲಿ ಭಾಷಣ

ವೇದಿಕೆ ಕಾರ್ಯಕ್ರಮ ಆರಂಭ

ವೇದಿಕೆ ಕಾರ್ಯಕ್ರಮದತ್ತ ಪ್ರಧಾನಿ ಮೋದಿ.

ಶಿಲಾನ್ಯಾಸದ ವಿಧಿವಿಧಾನಗಳು ಸಂಪೂರ್ಣ.

’ಕಾಲಕ್ಕೆ ಸರಿಯಾಗಿ ಮಳೆ ಬರಲಿ, ಸಸ್ಯ ಸಂಪತ್ತು ವೃದ್ಧಿಯಾಗಲಿ...’ ಋತ್ವಿಜರಿಂದ ಆಶೀರ್ವಾದ ಮಂತ್ರಗಳ ಪಠಣ.

’ದೇಶದ ಸಮಸ್ತ ದೇಶಗಳ ಪ್ರತಿನಿಧಿಯಾಗಿ, ನರೇಂದ್ರ ಮೋದಿ ಹೆಸರಿನ ನಾನು ದೇಶದ ಪ್ರತಿನಿಧಿಯಾಗಿ ಭೂಮಿಪೂಜೆ ಮಾಡುತ್ತೇನೆ’ – ಮೋದಿ ಸಂಕಲ್ಪ

ಭೂಮಿಪೂಜೆಗೆ ನಿಗದಿಪಡಿಸಿರುವ ಸ್ಥಳಕ್ಕೆ ಮೋದಿ ಪ್ರದಕ್ಷಿಣೆ

ಪಂಚಭೂತಗಳೂ ಮಂಗಳ ಉಂಟು ಮಾಡಲಿ ಎಂಬ ಪ್ರಾರ್ಥನೆಯೊಂದಿಗೆ ಶಾಂತಿ ಮಂತ್ರ ಪಠಿಸಿದ ಋತ್ವಿಜರು

ಪ್ರಧಾನಿಯಿಂದ ಭೂಮಿಗೆ ಆರತಿ

ಭೂಮಿಪೂಜೆಗೆ ಬಳಸುವ ಗುದ್ದಲಿಯನ್ನು ವಿಧಿಪೂರ್ವಕ ಪೂಜಿಸಲಾಯಿತು. ಈ ಸಂದರ್ಭ ಭಕ್ತರು ರಾಮರಕ್ಷಾಸ್ತೋತ್ರ ಪಠಿಸಿದರು.

ಇಂದು, ಅಂದರೆ ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಅಭಿಜಿನ್ ಮುಹೂರ್ತ, ಭೂಮಿ ಕರಣ, ಶತಭಿಷ ನಕ್ಷತ್ರದಲ್ಲಿ ಭೂಮಿ ಪೂಜೆ ನಡೆಯುತ್ತಿದೆ.

ಇಂದು, ಅಂದರೆ ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಅಭಿಜಿನ್ ಮುಹೂರ್ತ, ಭೂಮಿ ಕರಣ, ಶತಭಿಷ ನಕ್ಷತ್ರದಲ್ಲಿ ಭೂಮಿ ಪೂಜೆ ನಡೆಯುತ್ತಿದೆ.

ಶಿಲಾನ್ಯಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 22.6 ಕೆಜಿ ತೂಕದ ಐದು ಇಟ್ಟಿಗೆಗಳನ್ನು ಬಳಸಲಿದ್ದಾರೆ. ಇವುಗಳಿಗೆ ನಂದಾ, ಭದ್ರಾ, ಜಯಾ, ರಿಕ್ಷಾ, ಪೂರ್ಣಾ ಎಂದು ಹೆಸರು.

ಸಂಕಲ್ಪದ ಬಳಿಕ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಭಿಜಿನ್‌ ಲಗ್ನದಲ್ಲಿ ಈ ಭೂಮಿ ಪೂಜೆ ನಡೆಯಲಿದೆ.

ಸಂಕಲ್ಪ ನೆರವೇರಿಸುತ್ತಿರುವ ಪ್ರಧಾನಿ ಮೋದಿ

ಶಿಲಾನ್ಯಾಸಕ್ಕೆ 5 ಇಟ್ಟಿಗೆಗಳನ್ನು ಬಳಸಲಾಗುವುದು. ನಂತರ ಕಳಸ ಪ್ರತಿಷ್ಠಾಪನೆ ಮಾಡಲಾಗುವುದು.

ಭೂಮಿ ಪೂಜೆಗೆ ನಿಗದಿಪಡಿಸಿರುವ ಸ್ಥಳದಲ್ಲಿ ಕೈಮುಗಿದ ಕುಳಿತ ಮೋದಿ. ಋತ್ವಿಜರಿಂದ ವೇದ ಮಂತ್ರ ಪಠಣ. ರಾಮಾಯಣದ ಕೆಲ ಶ್ಲೋಕಗಳ ಪಾರಾಯಣ.

ರಾಮ ಲಲ್ಲಾ ವಿಗ್ರಹಕ್ಕೆ ಆರತಿ, ಹೂಹಾರ ಅರ್ಪಿಸಿ ನಮನ

ಋತ್ವಿಜರ ಸಮ್ಮುಖದಲ್ಲಿ ಕೆಲವೇ ಕ್ಷಣಗಳಲ್ಲಿ ರಾಮಮಂದಿರದ ಶಿಲಾನ್ಯಾಸ ನಡೆಯಲಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿ

ಉದ್ದೇಶಿತ ದೇಗುಲ ಸಮುಚ್ಚಯದ ಸಮೀಪೇ ಪಾರಿಜಾತ ಗಿಡ ನೆಟ್ಟು, ನೀರೆರೆದ ಮೋದಿ

ರಾಮ ಲಲ್ಲಾ ವಿಗ್ರಹಕ್ಕೆ ಪ್ರದಕ್ಷಿಣೆ, ನಮಸ್ಕಾರ, ಅರ್ಚಕರಿಗೂ ಕೈಮುಗಿದು ವಂದಿಸಿದ ಮೋದಿ

ದೇಗುಲ ಪ್ರವೇಶಿಸುವ ಮುನ್ನ ಪ್ರವೇಶದ್ವಾರದ ಮೆಟ್ಟಿಲುಗಳ ಮೇಲೆ ದೀರ್ಘದಂಡ ಪ್ರಣಾಮ

ರಾಮ ಲಲ್ಲಾ ವಿಗ್ರಹಕ್ಕೆ ಆರತಿ ಬೆಳಗಿದ ಮೋದಿ

ಮಧ್ಯಾಹ್ನ 12.15ಕ್ಕೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಾಲನೆ

ಹನುಮನ ಸನ್ನಿದಿಯಿಂದ ರಾಮ ಮಂದಿರದ ಶಿಲಾನ್ಯಾಸ ಸ್ಥಳಕ್ಕೆ ತೆರಳಿದ ಪ್ರಧಾನಿ ಮೋದಿ

ದೇವಾಲಯದ ವತಿಯಿಂದ ಪ್ರಧಾನಿಗೆ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಲಾಯಿತು. ದೇವಾಲಯದಲ್ಲಿ ಕೆಲವೇ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಹನುಮನ ದೇವಾಲಯದಲ್ಲಿ ಮೋದಿ... ಹನುಮಂತನ ದೇವಾಲಯದಲ್ಲಿ ಮೋದಿ ಅವರು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಕೂಡ ಇದ್ದರು. ಪೂಜೆಯ ಬಳಿಕ ರಾಮನ ದೇವಾಲಯಕ್ಕೆ ತೆರಳುವರು.

ಹನುಮಂತನ ದೇವಾಲಯಕ್ಕೆ ತೆರಳಿದ ಪ್ರಧಾನಿ ಮೋದಿ

ರಾಮನ ಗುಡಿಗೆ ಬರುವ ಮುನ್ನ ಹನುಮಂತನ ದೇವಾಲಯಕ್ಕೆ ಹೋಗಿ ಪೂಜೆ ಮಾಡಲಿದ್ದಾರೆ

ಲಖನೌದಿಂದ ಪ್ರಧಾನಿ ನರೇಂದ್ರ ಅಯೋಧ್ಯೆಗೆ ಆಗಮಿಸಿದರು.

ಆರ್‌ಎಸ್‌ಎಸ್‌ನ ಮುಖ್ಯಸ್ಥರಾದ ಮೋಹನ್‌ ಭಾಗವತ್‌ ಅವರು ಭೂಮಿ ಪೂಜೆ ಸ್ಥಳಕ್ಕೆ ಆಗಮಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಲಖನೌ ತಲುಪಿದ್ದು, ಕೆಲವೇ ಹೊತ್ತಿನಲ್ಲಿ ರಾಮ ಜನ್ಮಭೂಮಿ ತಲುಪಲಿದ್ದಾರೆ

500 ವರ್ಷಗಳ ಹಿಂದೆ ಆರಂಭವಾದ ‘ಮಹಾಯಾಗ’ ಇಂದು ಮುಖ್ಯ ಹಂತ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರದರ್ಶಿಸಿದ ಇಚ್ಛಾಶಕ್ತಿ ಅವರನ್ನು ಕಳೆದ 500 ವರ್ಷಗಳಲ್ಲೇ ಶ್ರೇಷ್ಠ ನಾಯಕನನ್ನಾಗಿ ರೂಪಿಸಿದೆ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ರಾಮ ಜನ್ಮಭೂಮಿ ತಲುಪಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಉಮಾ ಭಾರತಿ

'ಇಂದು ಸುದೀರ್ಘ ಹೋರಾಟದ ಅಂತ್ಯವಾಗಿದೆ. ಇದು ಐತಿಹಾಸಿಕ ದಿನವಾಗಿರಲಿದೆ’: ಭೂಮಿಪೂಜೆಗೆ ಅಯೋಧ್ಯೆಗೆ ಬಂದ ಸಾಧುಗಳ ಹೇಳಿಕೆ

ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ

ರಾಮ ಜನ್ಮಭೂಮಿಯಲ್ಲಿರುವ ರಾಮ ಲಲ್ಲಾ ವಿಗ್ರಹವನ್ನು ಅಲಂಕರಿಸಿರುವುದು. ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಲಿದ್ದಾರೆ

ರಾಮ ಮಂದಿರ ಶಿಲಾನ್ಯಾಸ ಸಂಭ್ರಮಾಚರಣೆಯ ಭಾಗವಾಗಿ ಗಾಜಿಯಾಬದ್‌ನ ಕೌಶಂಬಿಯಲ್ಲಿ ಜನರು ರಾಮ ಭಜನೆ ಮಾಡಿದರು

ಭಕ್ತರ ಪರವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿರುವುದು ಹೆಮ್ಮೆಯ ಕ್ಷಣ: ಹನುಮಾನ್‌ ಗರ್ಹಿ ದೇವಾಲಯದ ಮುಖ್ಯ ಅರ್ಚಕ ಪ್ರೇಮದಾಸ್ ಜಿ ಮಹಾರಾಜ್

ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಮುಹೂರ್ತವನ್ನು ನಿಗದಿಪಡಿಸಿರುವುದು ಬೆಳಗಾವಿಯ ಗೋವಾವೇಸ್ ವೃತ್ತ ಸಮೀಪದ ವಿದ್ಯಾವಿಹಾರ ವಿದ್ಯಾಲಯದ ಮುಖ್ಯಸ್ಥ ಪಂಡಿತ್ ಎನ್.ಆರ್. ವಿಜಯೇಂದ್ರ ಶರ್ಮಾ

‘ಇಂದು ಐತಿಹಾಸಿಕ ದಿನ. ಈ ದಿನ ಬಹು ದೀರ್ಘ ಕಾಲ ನೆನಪಿನಲ್ಲುಳಿಯಲಿದೆ. ರಾಮ ಮಂದಿರ ನಿರ್ಮಾಣದ ಬಗ್ಗೆ ನನಗೆ ವಿಶ್ವಾಸವಿದೆ. ಭಾರತದಲ್ಲಿ ರಾಮ ರಾಜ್ಯ ಸ್ಥಾಪನೆಯಾಗಲಿದೆ’: ಹನುಮಾನ್‌ ಗರ್ಹಿ ದೇವಾಲಯದಲ್ಲಿ ಬಾಬಾ ರಾಮದೇವ್ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಅಯೋಧ್ಯೆಯ ಪ್ರಸಿದ್ಧ ಹನುಮಾನ್‌ ಗರ್ಹಿ ದೇವಾಲಯದಲ್ಲಿ ಸ್ಯಾನಿಟೈಸೇಷನ್ ನಡೆಸಲಾಯಿತು

ಅಯೋಧ್ಯೆ ನಗರದಲ್ಲಿ ಮಂಗಳವಾರದಿಂದಲೇ ಹಬ್ಬದ ವಾತಾವರಣ, ಎಲ್ಲೆಡೆ ಅಲಂಕಾರ

ಶಿಲಾನ್ಯಾಸಕ್ಕೂ ಮುನ್ನ ಪ್ರಧಾನಿ ಮೋದಿ ಪ್ರಸಿದ್ಧ ಹನುಮಾನ್‌ ಗರ್ಹಿ ದೇವಾಲಯಕ್ಕೆ ಹೋಗಲಿದ್ದಾರೆ. ರಾಮಮಂದಿರಕ್ಕೆ ಭೇಟಿ ನೀಡುವ ಮೊದಲು ಹನುಮಾನ್‌ ಮಂದಿರದಲ್ಲಿ ಪೂಜೆ ಸಲ್ಲಿಸಬೇಕು ಎಂಬ ನಂಬಿಕೆ ಇದೆ

ರಾಮ ಮಂದಿರ ಕುರಿತು ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.