ADVERTISEMENT

ಬಾಬರಿ ಮಸೀದಿ ಧ್ವಂಸಕ್ಕೆ 2018ಕ್ಕೆ 26 ವರ್ಷ: ಅಯೋಧ್ಯೆಯಲ್ಲಿ ಕಟ್ಟೆಚ್ಚರ

ಪಿಟಿಐ
Published 3 ಡಿಸೆಂಬರ್ 2018, 20:19 IST
Last Updated 3 ಡಿಸೆಂಬರ್ 2018, 20:19 IST
   

ಲಖನೌ: 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳಿವೆ. ಬಾಬರಿ ಮಸೀದಿ ನಾಶವಾದ ಡಿಸೆಂಬರ್‌ 6ರ ವರ್ಷಾಚರಣೆ ಗುರುವಾರ ಬರಲಿದೆ. ಹಾಗಾಗಿ ಈಗ ಎಲ್ಲ ಕಣ್ಣೂ ಅಯೋಧ್ಯೆಯ ಮೇಲೆ ನೆಟ್ಟಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ಕ್ರೋಡೀಕರಿಸಲು ವಿಶ್ವ ಹಿಂದೂ ಪರಿಷತ್‌ (ಪಿಟಿಐ) ಪ್ರಾಯೋಜಿಸಿದ ಧರ್ಮ ಸಭೆ ಕೆಲವೇ ದಿನಗಳ ಹಿಂದೆ ನಡೆದಿತ್ತು. ಡಿಸೆಂಬರ್ 6ರಂದು ಶೌರ್ಯ ದಿನ ಆಚರಣೆಗೆ ಹಿಂದೂ ಬಲಪಂಥೀಯ ಸಂಘಟನೆಗಳು ನಿರ್ಧರಿಸಿವೆ. ಇದೇ 18ರಂದು ಗೀತಾ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರ್ಜುನನಿಗೆ ಕೃಷ್ಣ ಗೀತೆಯನ್ನು ಬೋಧಿಸಿದ ದಿನವನ್ನು ಗೀತಾ ಜಯಂತಿ ಎಂದು ಆಚರಿಸಲಾಗುತ್ತಿದೆ.

ಶೌರ್ಯ ದಿವಸವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ಅಯೋಧ್ಯೆಯಲ್ಲಿ ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವಿಎಚ್‌ಪಿ ಹಮ್ಮಿಕೊಂಡಿದೆ’ ಎಂದು ವಿಎಚ್‌ಪಿಯ ವಕ್ತಾರ ಶರದ್‌ ಶರ್ಮಾ ಹೇಳಿದ್ದಾರೆ.

ADVERTISEMENT

ಅಯೋಧ್ಯೆಯಲ್ಲಿ ಇರುವ ಸುಮಾರು 500 ಪ್ರಮುಖ ಆಶ್ರಮಗಳಲ್ಲಿ ಗುರುವಾರ ದೀಪ ಬೆಳಗಿಸಲಾಗುವುದು ಎಂದು ನಿರ್ಮೋಹಿ ಅಖಾಡದ ಮಹಾಂತ ರಾಮದಾಸ ತಿಳಿಸಿದ್ದಾರೆ. ‘ರಾಮ ಜನ್ಮಭೂಮಿಗೆ ಮೊಘಲ್‌ ವಾಸ್ತುಶಿಲ್ಪದಿಂದ ಮುಕ್ತಿ ಕೊಟ್ಟ ದಿನವಾಗಿ ಶೌರ್ಯ ದಿನ ಆಚರಿಸಲಾಗುತ್ತಿದೆ. ಹಾಗಾಗಿ ಆಶ್ರಮಗಳಲ್ಲಿ ಅಂದು ತುಪ್ಪದ ದೀಪ ಬೆಳಗಲಾಗುವುದು’ ಎಂದು ಅವರು ಹೇಳಿದ್ದಾರೆ.

2017ರ ಡಿಸೆಂಬರ್‌ 6ಕ್ಕೆ ಬಾಬರಿ ಮಸೀದಿ ಧ್ವಂಸಗೊಂಡು 25 ವರ್ಷಗಳಾಗಿದ್ದವು. ಹಾಗಾಗಿ ಫೈಜಾಬಾದ್‌ ಮತ್ತು ಅಯೋಧ್ಯೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ವಿಎಚ್‌ಪಿ ಮತ್ತು ಬಜರಂಗ ದಳ ಶೌರ್ಯ ದಿನ ಆಚರಿಸಿದ್ದರೆ ಮುಸ್ಲಿಂ ಸಂಘಟನೆಗಳು ‘ದುಃಖ ದಿನ’ ಆಚರಿಸಿದ್ದವು.

ಈ ಬಾರಿಯೂ ಅಯೋಧ್ಯೆ ಮತ್ತು ಫೈಜಾಬಾದ್‌ನ ಸೂಕ್ಷ್ಮ ಪ್ರದೇಶಗಳಲ್ಲಿ ಮೀಸಲು ಪೊಲೀಸ್‌ ಪಡೆ, ಕ್ಷಿಪ್ರ ಕಾರ್ಯಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ.

ಮುಖ್ಯಾಂಶಗಳು

* ಬಾಬರಿ ಮಸೀದಿ ಧ್ವಂಸಕ್ಕೆ 2018ಕ್ಕೆ 26 ವರ್ಷ

* ಅಯೋಧ್ಯೆ, ಫೈಜಾಬಾದ್‌ ನಲ್ಲಿ ಬಿಗಿ ಬಂದೋಬಸ್ತ್‌

* ಮಂದಿರ ನಿರ್ಮಿಸುವಂತೆ ರಾಜಕಾರಣಿಗಳಿಗೆ ಬುದ್ಧಿ ಕೊಡಲು ಸರಸ್ವತಿ ಪೂಜೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.