ADVERTISEMENT

ಅಯೋಧ್ಯೆ–ಬಾಬ್ರಿ ಮಸೀದಿ ಪ್ರಕರಣ ವಿಚಾರಣೆ ಅಂತ್ಯ; ತೀರ್ಪು ಕಾಯ್ದಿರಿಸಿದ ಸುಪ್ರೀಂ

ಏಜೆನ್ಸೀಸ್
Published 16 ಅಕ್ಟೋಬರ್ 2019, 11:50 IST
Last Updated 16 ಅಕ್ಟೋಬರ್ 2019, 11:50 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್    

ನವದೆಹಲಿ:ಅಯೋಧ್ಯೆ ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ವಿವಾದ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು, ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.

ದಶಕಗಳಿಂದ ನಡೆದು ಬರುತ್ತಿರುವ ಈ ವಿವಾದಪ್ರಕರಣದ ಮ್ಯಾರಥಾನ್ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಬುಧವಾರ ಸಂಜೆ 4.30ಕ್ಕೆ ಮುಕ್ತಾಯಗೊಳಿಸಿದೆ.

ಈ ಪ್ರಕರಣದ ಬಗ್ಗೆ ನ್ಯಾಯಾಲಯ ತೀರ್ಪು ಕೊಡುವ ಮುನ್ನ ಮೂರು ಕಕ್ಷಿದಾರರು ಈ ವಿವಾದವನ್ನು ಪರಿಹರಿಸಲಿರುವ ಸಲಹೆಗಳನ್ನು ಮೂರು ದಿನಗಳೊಳಗೆ ಲಿಖಿತ ರೂಪದಲ್ಲಿ ಕೊಡಬೇಕುಎಂದು ನ್ಯಾಯಪೀಠ ಹೇಳಿದೆ.

ಕಳೆದ 40 ದಿನಗಳಿಂದ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆದುಬರುತ್ತಿದ್ದು, ಚರಿತ್ರೆಯಲ್ಲಿ ಎರಡನೇ ಬಾರಿ ಈ ರೀತಿ ಅತೀ ದೀರ್ಘಕಾಲದ ವಿಚಾರಣೆ ನಡೆದದ್ದು. ಈ ಹಿಂದೆ 1972ಲ್ಲಿ ಕೇಶವಾನಂದ ಭಾರತಿ ಪ್ರಕರಣದ ವಿಚಾರಣೆಯನ್ನು 13 ನ್ಯಾಯಾಧೀಶರಿದ್ದ ಸಂವಿಧಾನ ಪೀಠವು 68 ದಿನಗಳ ಕಾಲ ನಡೆಸಿತ್ತು. ನಂತರ ಸಂಸತ್ತಿನ ಅಧಿಕಾರಿಗಳ ಬಗ್ಗೆ ತೀರ್ಪು ನೀಡಿತ್ತು.

ಅಯೋಧ್ಯೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ 2010ರಲ್ಲಿ ನೀಡಿರುವ ತೀರ್ಪು ಪ್ರಶ್ನಿಸಿರುವ 14 ಸಿವಿಲ್ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಅಯೋಧ್ಯೆಯಲ್ಲಿರುವ ವಿವಾದಾತ್ಮಕ 2.77 ಎಕರೆ ಭೂಮಿಯನ್ನು ಅಲಹಾಬಾದ್ ಹೈಕೋರ್ಟ್‌ ಸುನ್ನಿ ವಕ್ಫ್‌ ಬೋರ್ಡ್‌, ನಿರ್ಮೋಹಿ ಅಖಾಡ ಮತ್ತು ರಾಮ್‌ಲಲ್ಲಾ ಕಕ್ಷಿದಾರರಿಗೆ ಸಮಾನವಾಗಿ ಹಂಚಿಕೆ ಮಾಡಿಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.