ಕಾಂಗ್ರೆಸ್ ಮತ್ತು ಬಿಜೆಪಿ
ನವದೆಹಲಿ: ನೀತಿ ಆಯೋಗ ಎಂಬುದು ‘ಅಯೋಗ್ಯ ಸಂಸ್ಥೆ’ಯಾಗಿದೆ. ನೀತಿ ಆಯೋಗದ ಸಭೆ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೂಟಾಟಿಕೆ ಪ್ರದರ್ಶನ ಮಾಡುತ್ತಿದೆ. ಜತೆಗೆ, ಜನರ ದಿಕ್ಕು ತಪ್ಪಿಸುವ ಮತ್ತೊಂದು ಕಸರತ್ತು ಮಾಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು (ಶನಿವಾರ) ನೀತಿ ಆಯೋಗದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸರ್ಕಾರ ‘ವಿಕಸಿತ ಭಾರತ’ದ ಪ್ರಗತಿ ಕುರಿತು ಚರ್ಚೆ ನಡೆಸಲಿದೆ. ಆದರೆ, ಅಧಿಕಾರದಲ್ಲಿರುವವರೇ (ಬಿಜೆಪಿಗರು) ತಮ್ಮ ದುರುದ್ದೇಶಪೂರಿತ ಮಾತು ಮತ್ತು ಕೃತ್ಯಗಳಿಂದ ಸಮಾಜದ ಸಾಮರಸ್ಯ ನಾಶಪಡಿಸಿದರೆ, ಇದು ಎಂತಹ ವಿಕಸಿತ ಭಾರತವಾಗಿರುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಧಿಕಾರದಲ್ಲಿರುವವರು (ಬಿಜೆಪಿಗರು) ತಮ್ಮ ದುಷ್ಟ ಗುರಿಗಳನ್ನು ಪೂರೈಸಲು ಸಂಸತ್ತು, ನ್ಯಾಯಾಂಗ, ವಿಶ್ವವಿದ್ಯಾಲಯಗಳು, ಮಾಧ್ಯಮ, ಸಾಂವಿಧಾನಿಕ ಮತ್ತು ಶಾಸನಬದ್ಧ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡರೆ, ವಿಕಸಿತ ಭಾರತ ಉದ್ದೇಶ ಹೇಗೆ ಈಡೇರುತ್ತದೆ’ ಎಂದು ರಮೇಶ್ ಕಿಡಿಕಾರಿದ್ದಾರೆ.
‘ದೇಶದಲ್ಲಿ ಕೆಲವೇ ಕೆಲವು ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಸಂಗ್ರಹವಾಗುತ್ತಲೇ ಇದ್ದರೂ ಆರ್ಥಿಕ ಅಸಮಾನತೆಗಳು ತೀವ್ರಗೊಳ್ಳುತ್ತಿವೆ. ಭಾರತದ ವೈವಿಧ್ಯತೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲು ಮತ್ತು ಅಳಿಸಿ ಹಾಕಲು ಪ್ರಯತ್ನಿಸಲಾಗುತ್ತಿದೆ’ ಎಂದು ಬಿಜೆಪಿ ವಿರುದ್ಧ ರಮೇಶ್ ಆಕ್ರೋಶ ಹೊರಹಾಕಿದ್ದಾರೆ.
ದೇಶದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಬೆದರಿಕೆ ಇರುವುದು ಮಾತ್ರವಲ್ಲದೆ, ಸ್ವಾತಂತ್ರ್ಯವೂ ಅಪಾಯದಲ್ಲಿದೆ ಎಂದು ಬಿಜೆಪಿ ವಿರುದ್ಧ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
ನೀತಿ ಆಯೋಗದ ಆಡಳಿತ ಮಂಡಳಿಯಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್‌ಗಳು ಹಾಗೂ ಕೇಂದ್ರದ ಹಲವು ಸಚಿವರು ಇದ್ದಾರೆ. ಮೋದಿ ಅವರು ಇದರ ಅಧ್ಯಕ್ಷರಾಗಿದ್ದಾರೆ.
ಪ್ರತಿ ವರ್ಷವೂ ಆಯೋಗದ ಸಭೆ ನಡೆಯುತ್ತದೆ. ಕಳೆದ ವರ್ಷದ ಜುಲೈ 27ರಂದು ಸಭೆ ನಡೆದಿತ್ತು. ಆಯೋಗದ ಮೊದಲ ಸಭೆಯು 2015ರ ಫೆಬ್ರುವರಿ 8ರಂದು ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.