ADVERTISEMENT

ಬಾಬ್ರಿ ಮಸೀದಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಆರೋಪಿಗಳಿಗೆ ವಿನಾಯಿತಿ?

ಏಜೆನ್ಸೀಸ್
Published 29 ಸೆಪ್ಟೆಂಬರ್ 2020, 2:24 IST
Last Updated 29 ಸೆಪ್ಟೆಂಬರ್ 2020, 2:24 IST
   

ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ನ್ಯಾಯಾಲಯವು ತನ್ನ ತೀರ್ಪನ್ನು ಬುಧವಾರ ಪ್ರಕಟಿಸುವಾಗ ಪ್ರಕರಣದ ಆರೋಪಿಗಳಾದ ಕೆಲವು ಹಿರಿಯ ರಾಜಕೀಯ ಮುಖಂಡರು, ನ್ಯಾಯಾಲಯಕ್ಕೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು ಎಂದು ತಿಳಿದುಬಂದಿದೆ.

ತೀರ್ಪಿನ ದಿನದಂದು ಎಲ್ಲಾ ಆರೋಪಿಗಳು ಖುದ್ದಾಗಿಯೇ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಕಾನೂನು ಹೇಳುತ್ತದೆ.

ಆದರೆ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಸೇರಿದಂತೆ 32 ಆರೋಪಿಗಳಲ್ಲಿ ಕೆಲವರು, ತಮ್ಮ ವಯಸ್ಸು ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಮುಂದಿಟ್ಟು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ನ್ಯಾಯಾಲಯವನ್ನು ಕೋರಬಹುದು ಎಂದು ಅವರ ಪರ ವಕೀಲ ಕೆ.ಕೆ. ಮಿಶ್ರಾ ತಿಳಿಸಿದ್ದಾರೆ.

ADVERTISEMENT

ನನ್ನ ಕಕ್ಷಿದಾರರ ಸ್ಥಿತಿಯ ಬಗ್ಗೆ ಬುಧವಾರ ನ್ಯಾಯಾಲಯಕ್ಕೆ ತಿಳಿಸುತ್ತೇನೆ. ತೀರ್ಪಿನ ದಿನದ ಬಗ್ಗೆ ನಾನು ಆಡ್ವಾಣಿ, ಜೋಶಿ ಮತ್ತು ನನ್ನ ಇತರ ಕಕ್ಷಿದಾರರಿಗೂ ಮಾಹಿತಿ ನೀಡಿದ್ದೇನೆ. ತೀರ್ಪಿನ ದಿನದಂದು ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಾರೋ, ಇಲ್ಲವೋ ಎಂಬುದು ಆ ದಿನವೇ ಸ್ಪಷ್ಟವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಧ್ವಂಸ ಪ್ರಕರಣದ 32 ಆರೋಪಿಗಳ ಪೈಕಿ ಅಡ್ವಾಣಿ, ಜೋಶಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ 25 ಜನರನ್ನು ಕೆಕೆ ಮಿಶ್ರಾ ಅವರು ಪ್ರತಿನಿಧಿಸುತ್ತಿದ್ದಾರೆ.

ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯವು ಅಡ್ವಾಣಿ, ಜೋಶಿ ಮತ್ತು ಇತರರಿಗೆ ತಮ್ಮ ಹೇಳಿಕೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕವೇ ದಾಖಲಿಸಲು ಅನುಮತಿ ನೀಡಿತ್ತು.

ಇತರ ಇಬ್ಬರು ಆರೋಪಿಗಳಾದ ಶ್ರೀರಾಮ ಜನ್ಮಭೂಮಿ ತೀರ್ಥ ​​ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮತ್ತು ಶಿವಸೇನಾ ಮುಖಂಡ ಸತೀಶ್ ಪ್ರಧಾನ್ ಸಹ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರಿಗೆ ಸೋಮವಾರ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟ ನಂತರ ರಿಷಿಕೇಶ್‌ನ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ಪ್ರಕಟಿಸಿದ್ದಾರೆ.

'ಏಮ್ಸ್ ವೈದ್ಯರು ಅನುಮತಿ ನೀಡಿದರೆ ಮಾತ್ರ ನಾಡಿದ್ದು ನಾನು ಲಖನೌದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹಾಜರಾಗಲು ಬಯಸುತ್ತೇನೆ' ಎಂದು ಅವರು ಸೋಮವಾರ ಟ್ವೀಟ್ ಮಾಡಿದ್ದರು.

ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಕೂಡ ಘಾಜಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.