ADVERTISEMENT

ಬದ್ರಿನಾಥ ಅಭಿವೃದ್ಧಿಗೆ ‘ಮಾಸ್ಟರ್‌ ಪ್ಲಾನ್‌‘

₹ 424 ಕೋಟಿ ವೆಚ್ಚದ ಪ್ರಸ್ತಾವನೆ; ಮೂರು ಹಂತಗಳಲ್ಲಿ ಕ್ಷೇತ್ರ ಅಭಿವೃದ್ಧಿ

ಪಿಟಿಐ
Published 21 ಅಕ್ಟೋಬರ್ 2020, 10:55 IST
Last Updated 21 ಅಕ್ಟೋಬರ್ 2020, 10:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೋಪೇಶ್ವರ: ಪ್ರಸಿದ್ಧ ಪ್ರವಾಸಿ ತಾಣ ಬದ್ರಿನಾಥ ಕ್ಷೇತ್ರವನ್ನು ಮತ್ತಷ್ಟು ಚಂದಗಾಣಿಸುವುದು ಮತ್ತು ಹಿಮಾಲಯದ ತಪ್ಪಲಿನಲ್ಲಿರುವ ದೇವಾಲಯಗಳ ಸುತ್ತಮುತ್ತ ಮೂಲಸೌಲಭ್ಯಗಳನ್ನು ಹೆಚ್ಚಿಸುವ ₹424 ಕೋಟಿ ಮೊತ್ತದ ಬೃಹತ್ ಯೋಜನೆ(ಮಾಸ್ಟರ್‌ ಪ್ಲಾನ್) ತಯಾರಾಗಿದ್ದು, ಪ್ರಧಾನಿಯವರ ಅನುಮೋದನೆಯ ನಿರೀಕ್ಷೆಯಲ್ಲಿದೆ.

ಮಂಗಳವಾರ ಸ್ಥಳೀಯರೊಂದಿಗೆ ನಡೆದ ಸಭೆಯಲ್ಲಿ ಉತ್ತರಾಖಂಡ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ದಿಲೀಪ್ ಜವಾಲ್ಕರ್‌ ಅವರು ಪ್ರಸ್ತಾವನೆಯಲ್ಲಿರುವ ಮಾಹಿತಿಯನ್ನು ಹಂಚಿಕೊಂಡರು.

ದೇವಾಲಯ ಟೌನ್‌ಷಿಪ್‌ನಲ್ಲಿರುವ ಆಧ್ಯಾತ್ಮಿಕ ಸ್ವರೂಪವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿದೆ. ದೇವಾಲಯದ ಸುತ್ತ ಯಾತ್ರಾರ್ಥಿಗಳಿಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ದಿಲೀಪ್ ವಿವರಿಸಿದರು.

ADVERTISEMENT

ತೀರ್ಥಕ್ಷೇತ್ರದ ಪುರೋಹಿತರು ಮತ್ತು ವ್ಯಾಪಾರಿಗಳೊಂದಿಗೆ ಪ್ರಸ್ತಾವನೆ ಬಗ್ಗೆ ದಿಲೀಪ್ ಜವಾಲ್ಕರ್ ಚರ್ಚೆ ಮಾಡಿದರು. ಈ ಚರ್ಚೆಯಲ್ಲಿ ವ್ಯಕ್ತವಾದ ಅನುಮಾನಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದರು.

ಮೂರು ಹಂತಗಳಲ್ಲಿ ಈ ಮಾಸ್ಟರ್ ಪ್ಲಾನ್ ಅನ್ನು ಅನುಷ್ಠಾನಗೊಳಿಸಲಾಗುತ್ತದೆ. ಮೊದಲ ಹಂತದಲ್ಲಿ ಶೇಷ ನೇತ್ರ ಸರೋವರ ಮತ್ತು ವಿಷ್ಣುದೇವಾಲಯದ ಸಮೀಪವಿರುವ ಬದ್ರಿಶ್ ಸರೋವರದ ಅಭಿವೃದ್ಧಿ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ದೇವಾಲಯದ ಆವರಣವನ್ನು ವಿಸ್ತರಿಸುವ ಜತೆಗೆ ನವೀಕರಣ ಕಾರ್ಯ ನಡೆಯುತ್ತದೆ. ಮೂರನೇ ಹಂತದಲ್ಲಿ ಶೇಷ ನೇತ್ರ ಸರೋವರದಿಂದ ದೇವಾಲಯದವರೆಗೆ ‘ಅಷ್ಟ ಪಥ‘ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.