ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಹರಿದ್ವಾರ: ಉತ್ತರಾಖಂಡದ ಹರಿದ್ವಾರದ ಜ್ವಲಾಪುರ ಪ್ರದೇಶದಲ್ಲಿ ಭಾನುವಾರ ನಡೆಯುತ್ತಿದ್ದ ಬಜರಂಗದಳದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಧಿಕಾರಿಗಳು, ಪರಿಸ್ಥಿತಿ ಕೈತಪ್ಪಿ ಹೋಗುವುದನ್ನು ನಿಯಂತ್ರಿಸಿದರು. ಅಲ್ಲದೆ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಬಜರಂಗದಳ ಕಾರ್ಯಕರ್ತರಿಗೆ ಅವರು ಆಶ್ವಾಸನೆ ನೀಡಿದ್ದಾರೆ.
ಭಾನುವಾರ ಸಂಜೆ ಬಜರಂಗದಳ ‘ಶೌರ್ಯ ಯಾತ್ರೆ’ ಆಯೋಜಿಸಿತ್ತು. ಹರಿದ್ವಾರದ ವಿವಿಧ ಭಾಗಗಳಿಂದ ಮೆರವಣಿಗೆ ನಡೆಯಿತು. ಜ್ವಾಲಾಪುರದ ರಾಮಚೌಕದ ಬಳಿ ಮೆರವಣಿಗೆ ತಲುಪಿದಾಗ ಕಲ್ಲು ತೂರಾಟ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಕೆಲವು ಕಾರ್ಯಕರ್ತರು ಬುಲ್ಡೋಜರ್ ಸಹಿತ ಬಂದರು. ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ಆಡಳಿತ ಭಾರಿ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
‘ಮೆರವಣಿಗೆ ರಾಮಚೌಕ ಸಮೀಪ ಬಂದಾಗ ಕೆಲವು ಮಂದಿ ಕಲ್ಲು ತೂರಾಟ ನಡೆಸಿದ್ದಾರೆ. ಹರಿದ್ವಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಧಾರ್ಮಿಕ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವುದು ಆಡಳಿತ ವೈಫಲ್ಯದ ಪ್ರತೀಕ’ ಎಂದು ಬಜರಂಗದಳದ ರಾಜ್ಯಾಧ್ಯಕ್ಷ ಅನುಜ್ ವಾಲಿಯಾ ಹೇಳಿದ್ದಾರೆ.
‘ಮೆರವಣಿಗೆ ವೇಳೆ ಸಮಾಜಘಾತುಕ ಶಕ್ತಿಗಳು ಕಲ್ಲು ತೂರಾಟ ನಡೆಸಿರುವ ಮಾಹಿತಿ ಲಭಿಸಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ವಿಡಿಯೊ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹರಿದ್ವಾರ ನಗರ ಪೊಲಿಶ್ ವರಿಷ್ಠಾಧಿಕಾರಿ ಅಭಯ್ ಪ್ರತಾಪ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.