ಹೈದರಾಬಾದ್: ಹೈದರಾಬಾದ್‌ನ ಖಾಸಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸಹವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತೆಲಂಗಾಣ ಪೊಲೀಸರು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಅವರ ಪುತ್ರ ಬಂಡಿ ಭಗೀರಥ ಸಾಯಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭಗೀರಥ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುತ್ತಿರುವುದು ಹಾಗೂ ಆತನ ಸ್ನೇಹಿತ ಸಹ ಹೊಡೆದಿರುವ ದೃಶ್ಯಗಳನ್ನು ಮಂಗಳವಾರದಿಂದ ಕೆಲ ಸುದ್ದಿ ವಾಹಿನಿಗಳು ಬಿತ್ತರಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲೂ ಹಲ್ಲೆ ನಡೆಸಿರುವ ವಿಡಿಯೊ ಹರಿದಾಡಿದೆ.
ದುಂಡಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮಹೀಂದ್ರಾ ವಿಶ್ವವಿದ್ಯಾಲಯದ ಅಧಿಕಾರಿಗಳು ಹಲ್ಲೆ ನಡೆಸಿದಕ್ಕಾಗಿ ಭಗೀರಥನನ್ನು ಅಮಾನತುಗೊಳಿಸಿದ್ದಾರೆ ಎಂದು ವರದಿಯಾಗಿದೆ.
‘ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಆದೇಶದ ಮೇರೆಗೆ ನನ್ನ ಮಗನನ್ನು ಅಮಾನತು ಮಾಡಲಾಗಿದೆ. ನನ್ನ ರಾಜಕೀಯ ಬೆಳವಣಿಗೆ ಸಹಿಸದೆ ಈ ರೀತಿ ಮಾಡಿದ್ದಾರೆ’ ಎಂದು ಬಂಡಿ ಸಂಜಯ್ ಆರೋಪಿಸಿದರು.
‘ಮಕ್ಕಳು ಕಾಲೇಜುಗಳಲ್ಲಿ ಜಗಳವಾಡುತ್ತಾರೆ. ಮತ್ತೆ ಸ್ನೇಹಿತರಾಗುತ್ತಾರೆ. ಹಿಂದಿನ ಘಟನೆಯ ಬಗ್ಗೆ ಈಗ ಪ್ರಕರಣ ದಾಖಲಿಸುವ ಅಗತ್ಯವೇನಿತ್ತು?’ ಎಂದು ಅವರು ಪ್ರಶ್ನಿಸಿದ್ದಾರೆ.
ಈ ನಡುವೆ ಬಂಡಿ ಕಚೇರಿಯು ವಿಡಿಯೊ ಬಿಡುಗಡೆ ಮಾಡಿದ್ದು, ಇದರಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ಘಟನೆ ಬಗ್ಗೆ ಹೇಳಿಕೆ ನೀಡಿದ್ದಾನೆ. ‘ಭಗೀರಥನ ಸ್ನೇಹಿತನ ಸಹೋದರಿಗೆ ಮೆಸೇಜ್ ಕಳುಹಿಸುತ್ತಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ನಾನು ಅಸಭ್ಯವಾಗಿ ಉತ್ತರಿಸಿದೆ. ಆಗ ಅವನು ನನಗೆ ಕಪಾಳ ಮೋಕ್ಷ ಮಾಡಿದ. ಅದನ್ನು ಮರೆತು, ನಾವು ಸ್ನೇಹಿತರಾಗಿದ್ದೇವೆ. ಇದು ಮುಗಿದ ಅಧ್ಯಾಯ’ ಎಂದು ಸಂತ್ರಸ್ತ ವಿದ್ಯಾರ್ಥಿ ಶ್ರೀರಾಮ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.