ಸಾಂದರ್ಭಿಕ ಚಿತ್ರ
–ಎ.ಐ ಚಿತ್ರ
ಎಚ್‌ರಲಾ (ಆಂಧ್ರ ಪ್ರದೇಶ): ಭಾರತದ ಜಲಸೀಮೆಗೆ ದಿಕ್ಕು ತಪ್ಪಿ ಬಂದ 13 ಬಾಂಗ್ಲಾದೇಶಿ ಪ್ರಜೆಗಳನ್ನು ಶ್ರೀಕಾಕುಲಂ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಇವರು ಬಾಂಗ್ಲಾದೇಶದ ಭೋಲಾ ಜಿಲ್ಲೆಯವರು. ಸಮುದ್ರ ಮಧ್ಯೆ ದೋಣಿಯ ಎಂಜಿನ್ ಕೆಟ್ಟು ಹೋಗಿದ್ದರಿಂದ ಭಾನುವಾರ ಶ್ರೀಕಾಕುಲಂ ಬಂದರಿಗೆ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 10ರಂದು ಧೋಲಾದಿಂದ ಮೀನುಗಾರಿಕೆಗೆಂದು ಹೊರಟಿದ್ದಾಗಿಯೂ, ಕಳೆದ 20 ದಿನಗಳಿಂದ ಬೀಸುತ್ತಿರುವ ಭಾರಿ ಗಾಳಿಯು ದೋಣಿಯನ್ನು ಭಾರತದ ಜಲ ಸೀಮೆಗೆ ನೂಕಿತು ಎಂದು ಅವರು ಹೇಳಿದ್ದಾಗಿ ಶ್ರೀಕಾಕುಲಂ ಪೊಲೀಸ್ ವರಿಷ್ಠಾಧಿಕಾರಿ ವಿ.ಕೆ ಮಹೇಶ್ವರ ರೆಡ್ಡಿ ಪಿಟಿಐಗೆ ತಿಳಿಸಿದ್ದಾರೆ.
7 ದಿನಕ್ಕೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಮಾತ್ರ ತೆಗೆದುಕೊಂಡು ಮೀನುಗಾರಿಕೆಗೆ ಬಂದಿದ್ದರು. ಉಳಿದ ದಿನಗಳಲ್ಲಿ ನೀರು ಸೇವಿಸಿಯೇ ಬದುಕುಳಿದಿದ್ದಾರೆ’ ಎಂದು ಅವರು ಹೇಳಿದ್ದಾರೆ.
ವಿದೇಶಿ ದೋಣಿಯನ್ನು ಕಂಡ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭಾರತದ ವಿಶೇಷ ಆರ್ಥಿಕ ವಲಯಕ್ಕೆ ಇವರ ದೋಣಿ ಪ್ರವೇಶಿಸಿದ್ದು, ಅಲ್ಲಿಗೆ ಬರಬೇಕಿದ್ದರೆ ಭಾರತದ ಅಧಿಕಾರಿಗಳ ಅನುಮತಿ ಅವಶ್ಯ.
ಅವರ ಈ ಪ್ರವೇಶವು ಭಾರತದ ಸಮುದ್ರ ವಲಯಗಳ ಕಾಯಿದೆ–1981ರ ವಿವಿಧ ಕಲಂಗಳನ್ನು ಉಲ್ಲಂಘಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಅಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿದ್ದು, ಮುಂದಿನ ಪ್ರಕ್ರಿಯೆ ಜಾರಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.