ADVERTISEMENT

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಹತ್ಯೆ; ವಿಧವೆ ಮೇಲೆ ಇಬ್ಬರಿಂದ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:09 IST
Last Updated 6 ಜನವರಿ 2026, 6:09 IST
   

ಢಾಕಾ: ನರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಏತನ್ಮಧ್ಯೆ ಹಿಂದೂ ವಿಧವೆ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಯು ವರದಿಯಾಗಿದೆ.

ಮತ್ತೊಬ್ಬ ಹಿಂದೂ ಹತ್ಯೆಯ ಹತ್ಯೆ...

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕಾರ್ಖಾನೆಯೊಂದರ ಮಾಲೀಕ ಮತ್ತು ಪತ್ರಕರ್ತರೂ ಆದ ರಾಣಾ ಪ್ರತಾಪ್‌ ಬೈರಾಗಿ (38) ಕೊಲೆಯಾದ ದುರ್ದೈವಿ.

ADVERTISEMENT

ಬಾಂಗ್ಲಾದ ಜೆಸ್ಸೋರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೆಲ ಪುರುಷರ ಗುಂಪು ರಾಣಾ ಅವರ ತಲೆಗೆ ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಿದೆ. 

ಐಸ್‌ ತಯಾರಿಸುವ ಕಾರ್ಖಾನೆ ಹೊಂದಿದ್ದ ರಾಣಾ, ನರೈಲ್‌ನಿಂದ ಪ್ರಕಟವಾಗುವ ‘ದೈನಿಕ್‌ ಬಿಡಿ ಖಬರ್‌’ ಪತ್ರಿಕೆಯ ಹಂಗಾಮಿ ಸಂಪಾದಕರಾಗಿದ್ದರು. 

ಸೋಮವಾರ ಸಂಜೆ 5.45 ಗಂಟೆಗೆ ಈ ಘಟನೆ ನಡೆದಿದೆ. ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಐಸ್‌ ಕಾರ್ಖಾನೆಯಿಂದ ರಾಣಾ ಅವರನ್ನು ಹೊರ ಕರೆದು ತಲೆಗೆ ಮೂರು ಬಾರಿ ಗುಂಡುಗಳನ್ನು ಹಾರಿಸಿದ್ದಾರೆ, ಕತ್ತನ್ನು ಸೀಳಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. 

ಕೊಲೆಗೆ ಕಾರಣ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 

ಬಾಂಗ್ಲಾದೇಶದಲ್ಲಿ ಕನಿಷ್ಠ ಮೂವರು ಹಿಂದೂ ವ್ಯಕ್ತಿಗಳ ಹತ್ಯೆಯಾದ ಬೆನ್ನಲ್ಲೇ ರಾಣಾ ಕೊಲೆಯೂ ನಡೆದಿದ್ದು, ಅಲ್ಪಸಂಖ್ಯಾತರ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳು ಎದುರಾಗಿವೆ.

ಹಿಂದೂ ವಿಧವೆ ಮೇಲೆ ಇಬ್ಬರಿಂದ ಅತ್ಯಾಚಾರ

ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ಕಾಳಿಗಂಜ್‌ ಪಟ್ಟಣದಲ್ಲಿ ಹಿಂದೂ ವಿಧವೆ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ಮರವೊಂದಕ್ಕೆ ಕಟ್ಟಿಹಾಕಿ ಜಡೆ ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಹಿನ್‌ ಹಾಗೂ ಆತನ ಸಹಚರ ಹಸನ್‌, ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಜಡೆ ಕತ್ತರಿಸಿದ್ದಾರೆ. ಅವರು ಈ ಕೃತ್ಯದ ವಿಡಿಯೊ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ಇಬ್ಬರ ವಿರುದ್ಧ ಸಂತ್ರಸ್ತ ಮಹಿಳೆಯು ಕಾಳಿಗಂಜ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

‘ಕಾಳಿಗಂಜ್‌ನ ವಾರ್ಡ್‌ ಸಂಖ್ಯೆ 7ರಲ್ಲಿ, ಎರಡೂವರೆ ವರ್ಷಗಳ ಹಿಂದೆ ಶಾಹಿನ್‌ ಹಾಗೂ ಆತನ ಸಹೋದರನಿಂದ ಮೂರು ಡೆಸಿಮಲ್ ಜಮೀನು (ಅಂದಾಜು 1,300 ಚದರಡಿ) ಹಾಗೂ ಎರಡು ಅಂತಸ್ತಿನ ಕಟ್ಟಡ ಖರೀದಿಸಿದ್ದೆ. ಇದಾದ ಬಳಿಕ, ಶಾಹಿನ್‌ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಲು ಹಾಗೂ ಕಿರುಕುಳ ನೀಡಲು ಶುರು ಮಾಡಿದ್ದ ಎಂಬುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಶನಿವಾರ ಸಂಜೆ, ಮಹಿಳೆಯ ಭೇಟಿಗೆ ಆಕೆಯ ಊರಿನಿಂದ ಸಂಬಂಧಿಕರು ಬಂದಿದ್ದರು. ಈ ವೇಳೆ, ಮನೆಗೆ ನುಗ್ಗಿದ ಶಾಹಿನ್‌ ಹಾಗೂ ಹಸನ್ ಆಕೆಯ ಮೇಲೆ ಅತ್ಯಾಚಾರ ನಡೆಸಿದರು. ಬಳಿಕ 50 ಸಾವಿರ ಟಾಕಾ ನೀಡುವಂತೆ ಬೇಡಿಕೆ ಇಟ್ಟರು’ ಎಂದು ಹೇಳಲಾಗಿದೆ.

‘ಹಣ ನೀಡಲು ನಿರಾಕರಿಸಿದಾಗ, ಆರೋಪಿಗಳು ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ, ಅವರನ್ನು ಮನೆಯಿಂದ ಹೊರಗೆ ನೂಕಿದರು. ಈ ವೇಳೆ, ಮಹಿಳೆ ಕಿರುಚಲು ಆರಂಭಿಸಿದಾಗ,ಆಕೆಯನ್ನು ಮರವೊಂದಕ್ಕೆ ಕಟ್ಟಿಹಾಕಿದ ಆರೋಪಿಗಳು ಜಡೆಯನ್ನು ಕತ್ತರಿಸಿದರು’ ಎಂದೂ ಹೇಳಲಾಗಿದೆ.

ಈ ವೇಳೆ, ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಸ್ಥಳೀಯರು ಜೆನೈದಾ ಸದರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಿಸಿಕೊಂಡಿದ್ದು, ತನಿಖೆ ಬಳಿಕ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಎಸ್‌ಪಿ ಬಿಲಾಲ್‌ ಹೊಸೈನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.