ADVERTISEMENT

10 ವರ್ಷದಲ್ಲಿ ₹16.35 ಲಕ್ಷ ಕೋಟಿ ರೈಟ್‌ ಆಫ್‌: ಹಣಕಾಸು ಸಚಿವೆ ನಿರ್ಮಲಾ

'8ನೇ ವೇತನ ಆಯೋಗ ರಚಿಸಲು ಕೇಂದ್ರ ಸರ್ಕಾರ ತೀರ್ಮಾನ'

ಪಿಟಿಐ
Published 17 ಮಾರ್ಚ್ 2025, 14:34 IST
Last Updated 17 ಮಾರ್ಚ್ 2025, 14:34 IST
   

ನವದೆಹಲಿ: ಕಳೆದ ಹತ್ತು ಆರ್ಥಿಕ ವರ್ಷಗಳಲ್ಲಿ ಬ್ಯಾಂಕ್‌ಗಳು ರೈಟ್‌ ಆಫ್‌ ಮಾಡಿರುವ ವಸೂಲಾಗದ ಸಾಲದ (ಎನ್‌ಪಿಎ) ಒಟ್ಟು ಮೊತ್ತವು ₹16.35 ಲಕ್ಷ ಕೋಟಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.

2023–24ರಲ್ಲಿ ಬ್ಯಾಂಕ್‌ಗಳು ಒಟ್ಟು ₹1.70 ಲಕ್ಷ ಕೋಟಿ ಮೊತ್ತದ ವಸೂಲಾಗದ ಸಾಲವನ್ನು ರೈಟ್‌ ಆಫ್ ಮಾಡಿವೆ, 2022–23ರಲ್ಲಿ ರೈಟ್‌ ಆಫ್ ಆದ ವಸೂಲಾಗದ ಸಾಲದ ಮೊತ್ತ ₹2.16 ಲಕ್ಷ ಕೋಟಿ ಎಂದು ನಿರ್ಮಲಾ ಅವರು ಮಾಹಿತಿ ನೀಡಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾರ್ಗಸೂಚಿ ಹಾಗೂ ಆಡಳಿತ ಮಂಡಳಿ ಒಪ್ಪಿದ ನೀತಿಗೆ ಅನುಗುಣವಾಗಿ ಬ್ಯಾಂಕ್‌ಗಳು ತಾವು ನೀಡಿದ ಸಾಲವು ವಸೂಲಾಗದ ಸಾಲ ಎಂದು ವರ್ಗೀಕರಣ ಆದ ನಾಲ್ಕು ವರ್ಷಗಳ ನಂತರ, ಆ ಸಾಲವನ್ನು ರೈಟ್‌ ಆಫ್ ಮಾಡುತ್ತವೆ ಎಂದು ಸಚಿವೆ ವಿವರಿಸಿದ್ದಾರೆ.

ADVERTISEMENT

ರೈಟ್‌ ಆಫ್‌ ಅಂದರೆ ಸಾಲ ಪಡೆದವನ ಹೊಣೆಯೇನೂ ತಗ್ಗುವುದಿಲ್ಲ. ಆತನಿಗೆ ಇದರಿಂದ ಲಾಭವೇನೂ ಆಗುವುದಿಲ್ಲ. ಬ್ಯಾಂಕ್‌ಗಳು ಸಾಲ ವಸೂಲಾತಿ ಪ್ರಕ್ರಿಯೆಯನ್ನು ವಿವಿಧ ಮಾರ್ಗಗಳ ಮೂಲಕ ಮುಂದುವರಿಸುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ, 2024ರ ಡಿಸೆಂಬರ್ 31ರವರೆಗೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ತಲಾ ₹1,000 ಕೋಟಿಗಿಂತ ಹೆಚ್ಚು ಸಾಲ ಪಡೆದು ಅದನ್ನು ಸರಿಯಾಗಿ ಮರಳಿಸದ 29 ಕಂಪನಿಗಳು ದೇಶದಲ್ಲಿವೆ. ಈ ಕಂಪನಿಗಳ ಸಾಲ ಖಾತೆಯನ್ನು ‘ವಸೂಲಾಗದ ಸಾಲ’ ಎಂದು ವರ್ಗೀಕರಿಸಲಾಗಿದೆ. ಇಂತಹ ಕಂಪನಿಗಳಿಂದ ಮರುಪಾವತಿ ಆಗಬೇಕಿರುವ ಸಾಲದ ಒಟ್ಟು ಮೊತ್ತ ₹61,027 ಕೋಟಿ.

‘ವಸೂಲಾಗದ’ ಎಂದು ವರ್ಗೀಕೃತ ಆಗಿರುವ ಸಾಲ ಖಾತೆಗಳ ವಿಚಾರದಲ್ಲಿ ಬ್ಯಾಂಕ್‌ಗಳು ತಮ್ಮ ಆಡಳಿತ ಮಂಡಳಿಯ ಅನುಮೋದನೆ ಇರುವ ನೀತಿಗಳಿಗೆ ಅನುಗುಣವಾಗಿ ವಸೂಲಿ ಕ್ರಮ ಜರುಗಿಸುತ್ತವೆ. ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವುದು, ಸಾಲ ವಸೂಲಾತಿ ನ್ಯಾಯಮಂಡಳಿಯ ಮೊರೆ ಹೋಗುವುದು ಸೇರಿದಂತೆ ವಿವಿಧ ಆಯ್ಕೆಗಳು ಬ್ಯಾಂಕ್‌ಗಳಿಗೆ ಇರುತ್ತವೆ ಎಂದು ನಿರ್ಮಲಾ ಅವರು ಹೇಳಿದ್ದಾರೆ.

ರೈಟ್‌ ಆಫ್‌ ವಿವರ
‘8ನೇ ವೇತನ ಆಯೋಗ ರಚನೆ’
ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚಿಸಲು ತೀರ್ಮಾನಿಸಿದೆ ಎಂದು ನಿರ್ಮಲಾ ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ. ಆಯೋಗವು ಶಿಫಾರಸು ಸಲ್ಲಿಸಿದ ನಂತರ ಅದರ ಹಣಕಾಸಿನ ಪರಿಣಾಮಗಳು ಏನಿರಲಿವೆ ಎಂಬುದು ತಿಳಿಯಲಿವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.