ADVERTISEMENT

ಅಮೆರಿಕ ಉಪಾಧ್ಯಕ್ಷ ಸ್ಥಾನದ ಸ್ಪರ್ಧಿ ಕಮಲಾಗೆ ತಮಿಳುನಾಡಿನ ಗ್ರಾಮದಲ್ಲಿ ಬ್ಯಾನರ್‌

ರಾಯಿಟರ್ಸ್
Published 27 ಅಕ್ಟೋಬರ್ 2020, 10:07 IST
Last Updated 27 ಅಕ್ಟೋಬರ್ 2020, 10:07 IST
ತಮಿಳುನಾಡಿನ ತುಲಸೇಂದ್ರಪುರಂನಲ್ಲಿ ಹಾಕಲಾಗಿರುವ ಕಮಲಾ ಹ್ಯಾರಿಸ್‌ ಅವರ ಬ್ಯಾನರ್‌ (ರಾಯಿಟರ್ಸ್‌ ಚಿತ್ರ)
ತಮಿಳುನಾಡಿನ ತುಲಸೇಂದ್ರಪುರಂನಲ್ಲಿ ಹಾಕಲಾಗಿರುವ ಕಮಲಾ ಹ್ಯಾರಿಸ್‌ ಅವರ ಬ್ಯಾನರ್‌ (ರಾಯಿಟರ್ಸ್‌ ಚಿತ್ರ)   

ತುಲಸೇಂದ್ರಪುರಂ: ತಮಿಳುನಾಡಿನ ತುಲಸೇಂದ್ರಪುರಂ ಎಂಬ ಗ್ರಾಮಕ್ಕೆ ಆಗಮಿಸುವವರನ್ನು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ಬೃಹತ್‌ ಬ್ಯಾನರ್‌ಗಳು ನಿತ್ಯ ಸ್ವಾಗತಿಸುತ್ತಿವೆ.

ಹಸಿರನ್ನೇ ಹೊದ್ದು ಮಲಗಿದಂತೆ ಕಾಣುವ ಈ ಗ್ರಾಮ ಚೆನ್ನೈ ನಗರದಿಂದ ದಕ್ಷಿಣಕ್ಕೆ ಸುಮಾರು 320 ಕಿ.ಮೀ (200 ಮೈಲಿ) ದೂರದಲ್ಲಿದೆ. ಎಲ್ಲರಿಗೂ ತಿಳಿದಂತೆ ಕಮಲಾ ಹ್ಯಾರಿಸ್‌ ಅವರ ತಾಯಿ ತಮಿಳುನಾಡಿನವರು. ಕಮಲಾ ಅಜ್ಜಪಿ.ವಿ. ಗೋಪಾಲನ್ ಶತಮಾನಕ್ಕೂ ಹಿಂದೆ ಜನಿಸಿದ ಊರು ಈ ತುಲಸೇಂದ್ರಪುರಂ.

ದಕ್ಷಿಣ ಏಷ್ಯಾ ಮೂಲದ ಮೊದಲ ಸೆನೆಟರ್‌ ಎನಿಸಿಕೊಂಡಿರುವ ಕಮಲಾ ಹ್ಯಾರಿಸ್‌ ಅವರ ಸಾಧನೆ ಬಗ್ಗೆ ತಮಿಳುನಾಡಿನಲ್ಲಿ ಅಭಿಮಾನವಿದೆ. ಸದ್ಯ ಅಮೆರಿಕ ಚುನಾವಣೆ ಫಲಿತಾಂಶಗಳಿಗಾಗಿ ಅವರೆಲ್ಲರೂ ಕಾತರದಿಂದ ಕಾದಿದ್ದಾರೆ.

ADVERTISEMENT

ಕಮಲಾ ಅವರ ಕುಟುಂಬಸ್ಥರು ಇದ್ದ ತುಲಸೇಂದ್ರಪುರಂನಲ್ಲಿ ಕಮಲಾ ಅವರಿಗೆ ಶುಭಾ ಹಾರೈಸಿ ಹತ್ತಾರು ಬ್ಯಾನರ್‌ಗಳನ್ನು ಹಾಕಲಾಗಿದೆ. ಅವುಗಳ ಪೈಕಿ ಒಂದರಲ್ಲಿ 'ತುಲಸೇಂದ್ರಪುರಂನಿಂದ ಅಮೆರಿಕಕ್ಕೆ' ಎಂಬ ಘೋಷಣೆ ಬರೆಯಲಾಗಿದೆ. ಪ್ರತಿ ಬ್ಯಾನರ್‌ಗಳಲ್ಲೂ ಕಮಲಾ ಅವರ ಮಂದಸ್ಮಿತ ಚಿತ್ರವನ್ನೂ ಬಳಸಲಾಗಿದೆ.

ತುಲಸೇಂದ್ರಪುರಂನವರಾದ ಕಮಲಾ ಹ್ಯಾರಿಸ್‌ ಅವರ ಮುತ್ತಜ್ಜ ಪಿ.ವಿ. ಗೋಪಾಲನ್ ಮತ್ತು ಅವರ ಕುಟುಂಬ ಸುಮಾರು 90 ವರ್ಷಗಳ ಹಿಂದೆ ಚೆನ್ನೈಗೆ ವಲಸೆ ಹೋಗಿ ಅಲ್ಲಿಯೇ ನೆಲೆಸಿತು. ಗೋಪಾಲನ್‌ ಸರ್ಕಾರದ ಹಿರಿಯ ಅಧಿಕಾರಿಯೂ ಆಗಿದ್ದರು.

ಕಮಲಾ ಹ್ಯಾರಿಸ್‌ ಅವರ ತಾಯಿ ತಮಿಳುನಾಡಿನವರು. ಅವರ ತಂದೆ, ಜಮೈಕಾದವರು. ಈ ಇಬ್ಬರೂ ಅಧ್ಯಯನಕ್ಕಾಗಿ ಅಮೆರಿಕಕ್ಕೆ ವಲಸೆ ಬಂದವಾರಗಿದ್ದರು. ಕಮಲಾ ತಾವು ಐದು ವರ್ಷದ ಬಾಲಕಿಯಾಗಿದ್ದಾಗ ತುಲಸೇಂದ್ರಪುರಂಗೆ ಭೇಟಿ ನೀಡಿದ್ದು, ಚೆನ್ನೈನ ಕಡಲತೀರಗಳಲ್ಲಿ ತನ್ನ ಅಜ್ಜನೊಂದಿಗೆ ಹೆಜ್ಜೆ ಹಾಕಿದ್ದನ್ನು ಚುನಾವಣೆ ಪ್ರಚಾರದ ವೇಳೆ ನೆನಪಿಸಿಕೊಂಡಿದ್ದಾರೆ.

ತುಲಸೇಂದ್ರಪುರಂ ಕಮಲಾ ಅವರ ಮುತ್ತಜ್ಜನ ಹುಟ್ಟೂರಾದರೂ, ಅವರು ಹುಟ್ಟಿ ಬೆಳೆದ ಮನೆ ಸದ್ಯ ಅಸ್ತಿತ್ವದಲ್ಲಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.