
ಬಾಸ್ಕೆಟ್ ಬಾಲ್ ಕಂಬ ಬಿದ್ದು 16 ವರ್ಷದ ರಾಷ್ಟ್ರಮಟ್ಟದ ಆಟಗಾರ ಸಾವು
ಚಂಡೀಗಢ: ಎರಡು ಪ್ರತ್ಯೇಕ ಘಟನೆಗಳಲ್ಲಿ ಬಾಸ್ಕೆಟ್ ಬಾಲ್ ಕಂಬ ಬಿದ್ದು ಹದಿಹರೆಯದ ಇಬ್ಬರು ಆಟಗಾರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಹರಿಯಾಣದ ರೋಹ್ತಕ್‌ನಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರ ಹಾರ್ದಿಕ್ ರಾಥಿ (16) ಅವರು ಮಂಗಳವಾರ ಏಕಾಂಗಿಯಾಗಿ ಅಭ್ಯಾಸದಲ್ಲಿ ತೊಡಗಿದ್ದ ವೇಳೆ, ಚೆಂಡನ್ನು ‘ಬಾಸ್ಕೆಟ್’ಗೆ ಹಾಕುವ ವೇಳೆ ಕಬ್ಬಿಣದ ಕಂಬ ಅವರ ಎದೆಯ ಮೇಲೆ ಬಿದ್ದಿದೆ. ಇತರ ಆಟಗಾರರು ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರೊಳಗೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಖನ್ ಮಜ್ರಾ ಗ್ರಾಮದ ಕ್ರೀಡಾ ಸಂಕೀರ್ಣದಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಹಾರ್ದಿಕ್ ಅವರು ಕೆಲ ತಿಂಗಳ ಮೊದಲು ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು. ‘ಕಂಬ ತುಕ್ಕುಹಿಡಿದಿತ್ತು. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅವರ ಬೇಜವಾಬ್ದಾರಿಯಿಂದಾಗಿ ಭರವಸೆ ಮೂಡಿಸಿದ್ದ ಆಟಗಾರನನ್ನು ನನ್ನ ಕುಟುಂಬ ಮಾತ್ರವಲ್ಲ, ದೇಶವೇ ಕಳೆದುಕೊಂಡಿದೆ’ ಎಂದು ಅವರ ಸೋದರ ಖಡಕ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಮೀಪದ ಝಜ್ಜಾರ್ ಜಿಲ್ಲೆಯ ಬಹಾದೂರಗಢದಲ್ಲಿ 15 ವರ್ಷ ವಯಸ್ಸಿನ ಅಮನ್ ಅವರು ಭಾನುವಾರ ಇಂಥದ್ದೇ ಪ್ರಕರಣದಲ್ಲಿ ತೀವ್ರ ಗಾಯಾಳಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಸ್ಥಳೀಯ ಠಾಣಾಧಿಕಾರಿ ಸಮರಜೀತ್ ಸಿಂಗ್ ತಿಳಿಸಿದ್ದಾರೆ.
ಹರಿಯಾಣದಲ್ಲಿ ಕ್ರೀಡಾ ಸೌಕರ್ಯಗಳು ಶಿಥಿಲಗೊಂಡಿವೆ ಎಂದು ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಮುಗಿಬಿದ್ದಿವೆ. ಈ ಬಗ್ಗೆ ಮಾಹಿತಿ ಪಡೆದು ನಂತರವಷ್ಟೇ ಪ್ರತಿಕ್ರಿಯಿಸುತ್ತೇನೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎರಡೂ ಪ್ರಕರಣಗಳಲ್ಲಿ ಕಬ್ಬಿಣದ ಕಂಬಗಳು ಉರುಳಲು ಕಾರಣವಾದ ಅಂಶಗಳ ಬಗ್ಗೆ, ಉಪಕರಣಗಳ ಸ್ಥಿತಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
‘ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಗ್ರಾಮಗಳಲ್ಲೂ ಕ್ರೀಡಾ ಸೌಕರ್ಯ ನಿರ್ಮಿಸಲಾಗಿತ್ತು. ಆದರೆ ಬಿಜೆಪಿ ಆಡಳಿತಕ್ಕೆ ಬಂದ ನಂತರ ಅವುಗಳ ನಿರ್ವಹಣೆ ಮಾಡುತ್ತಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ದೂರಿದ್ದಾರೆ. ‘ಇದು ಸಾವಲ್ಲ, ವ್ಯವಸ್ಥೆಯಿಂದ ನಡೆ ಕೊಲೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರೀಡಾಂಗಣಗಳಲ್ಲಿರುವ ಕ್ರೀಡಾ ಪರಿಕರಗಳು ಶಿಥಿಲಾವಸ್ಥೆಯಲ್ಲಿವೆ ಎಂದು ರೋಹ್ತಕ್‌ನ ಕಾಂಗ್ರೆಸ್ ಸಂಸದ ದೀಪೆಂದರ್ ಸಿಂಗ್ ಹೂಡಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.