ADVERTISEMENT

ಪತ್ರಕರ್ತನ ವರದಿಗೆ ಎಚ್ಚೆತ್ತ ಸರ್ಕಾರ; ಬೆಚ್ಚಿದ ಮಾಫಿಯಾ ಮಾಡಿದ್ದು ಹೀನ ಕೃತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2025, 9:59 IST
Last Updated 7 ಜನವರಿ 2025, 9:59 IST
<div class="paragraphs"><p>ಮುಕೇಶ್ ಚಂದಾರ್ಕರ್‌</p></div>

ಮುಕೇಶ್ ಚಂದಾರ್ಕರ್‌

   

ರಾಯ್‌ಪುರ: ಅಕ್ರಮವಾಗಿ ಮದ್ಯ ಮಾರುತ್ತಿದ್ದ ವ್ಯಕ್ತಿ ಪತ್ರಕರ್ತನಾಗಿ ಬದಲಾದ, ನಕ್ಸಲರಿಂದ ಅಪಹರಣಕ್ಕೊಳಗಾದ ಯೋಧನನ್ನು ಬಿಡಿಸಿಕೊಂಡು ಬಂದ 32 ವರ್ಷದ ಮುಕೇಶ್ ಚಂದಾರ್ಕರ್‌ ಬಯಲು ಮಾಡಿದ ಹಗರಣದ ಸುದ್ದಿಗೆ ಕೆಂಡವಾದ ಸಂಬಂಧಿಕರೇ ಭೀಕರವಾಗಿ ಕೊಲೆಗೈದರು. ಇಷ್ಟು ಭೀಕರ ಕೊಲೆಯನ್ನು ನಾನು ಈವರೆಗೂ ನೋಡಿಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿರುವುದೇ ಈ ಕ್ರೌರ್ಯವನ್ನು ಸಾರುತ್ತದೆ.

ಮುಕೇಶ್ ಹತ್ಯೆಗೆ ಇಡೀ ದೇಶವೇ ಬೆಚ್ಚಿದೆ. ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದೆ. ಮುಕೇಶ್ ಸಾವಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸುತ್ತಿದೆ.

ADVERTISEMENT

ಮುಕೇಶ್ ಜನಿಸಿದ್ದು ಛತ್ತೀಸಗಢದ ಬಿಜಾಪುರ ಜಿಲ್ಲೆಯ ಬಸಗುಡಾ ಗ್ರಾಮ. 2000 ಇಸವಿಯಲ್ಲಿ ಸಶಸ್ತ್ರ ಮೀಸಲು ಪಡೆ ಹಾಗೂ ಮಾವೋವಾದಿಗಳ ನಡುವಿನ ಭೀಕರ ಕಾಳಗಕ್ಕೆ ಈ ಗ್ರಾಮ ಸಾಕ್ಷಿಯಾಗಿತ್ತು. ನಿರ್ವಸತಿಗರಾದ ಇವರ ಕುಟುಂಬ ನಂತರ ಬಿಜಾಪುರದಲ್ಲಿ ಆಶ್ರಯ ಪಡೆಯಿತು. ತಂದೆಯ ಸಾವಿನ ನಂತರ, ತಾಯಿ ಅಂಗನವಾಡಿ ಸಹಾಯಕಿಯಾದರು. ಮುಕೇಶ್ ಹಾಗೂ ಅಣ್ಣ ಯುಕೇಶ್ ಅಲ್ಲಿಯೇ ಬೆಳೆದರು. 2013ರಲ್ಲಿ ಕ್ಯಾನ್ಸರ್‌ನಿಂದ ತಾಯಿಯೂ ಮೃತಪಟ್ಟರು. 

₹2,200 ಬಾಡಿಗೆಯ ಮಣ್ಣಿನ ಮನೆಯಲ್ಲಿ ಜೀವನ

‘ನನ್ನ ಕುಟುಂಬಕ್ಕೆ ಹಾಲು ಖರೀದಿಸಲು ಸಾಧ್ಯವಾಗದಷ್ಟು ಬಡತನವಿತ್ತು. ಶಿಕ್ಷಣಕ್ಕಾಗಿ ನನ್ನನ್ನು ದಾಂತೇವಾಡದಲ್ಲಿರುವ ಶಾಲೆಗೆ ತಾಯಿ ಕಳಿಸುತ್ತಿದ್ದರು. ಬದುಕು ಸಾಗಿಸಲು ಮಹುವಾ ಎಂಬ ಸ್ಥಳೀಯ ಮದ್ಯವನ್ನು ಮಾರುತ್ತಿದ್ದೆ. ಬೈಕ್‌ಗಳ ಮೆಕಾನಿಕ್‌ ಆಗಿಯೂ ದುಡಿದಿದ್ದೇನೆ. ಅಣ್ಣ ಯುಕೇಶ್ ಪತ್ರಕರ್ತನಾಗಿದ್ದ. ಅವನಂತೆಯೇ ನಾನೂ ಆಗಬೇಕೆಂದು ತಯಾರಾದೆ. ಸಹರಾ, ಬನ್ಸಲ್‌, ನ್ಯೂಸ್‌18, ಎನ್‌ಡಿಟಿವಿ ವರದಿಗಾರನಾಗಿ ಕೆಲಸ ಮಾಡಿದೆ. ನಕ್ಸಲ್‌ ಪೀಡಿತ ಪ್ರದೇಶಗಳಿಂದ ನೇರ ವರದಿ ಮಾಡುತ್ತಿದ್ದೆ’ ಎಂದು ಮುಕೇಶ್ ಬದುಕಿದ್ದಾಗ ಹೇಳಿದ್ದು ಈಗ ಹರಿದಾಡುತ್ತಿದೆ.

‘ಪತ್ರಿಕೋದ್ಯಮವನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ್ದ ಮುಕೇಶ್, ಅಪಾಯವನ್ನು ಸದಾ ಬೆನ್ನಿಗೆ ಕಟ್ಟಿಕೊಂಡೇ ಬದುಕುತ್ತಿದ್ದ. ಬಸ್ತಾರ್ಗೆ ನಾವು ಆಗಾಗ್ಗೆ ಹೋಗಿ ಬರುತ್ತಿದ್ದೆವು. ಆದರೆ ಮುಕೇಶ್ ಅಲ್ಲಿಯೇ ಇರುತ್ತಿದ್ದ. ಬಹಳಷ್ಟು ಪತ್ರಕರ್ತರನ್ನು ನಕ್ಸಲರು ಇರುವ ಸ್ಥಳಕ್ಕೆ ಕರೆದೊಯ್ಯುತ್ತಿದ್ದ. ಇಷ್ಟೇ ಅಲ್ಲ, ಕಷ್ಟದಲ್ಲಿರುವ, ದನಿ ಇಲ್ಲದವರಿಗೆ ಧ್ವನಿಯಾಗಿದ್ದ. ಇಷ್ಟೆಲ್ಲಾ ದುಡಿಯುತ್ತಿದ್ದರೂ, ಮುಕೇಶ್‌ ಮಾತ್ರ ₹2,200 ಮಾಸಿಕ ಬಾಡಿಗೆಯ ಮಣ್ಣಿನ ಮನೆಯಲ್ಲಿ ಬದುಕುತ್ತಿದ್ದ. ಆದಿವಾಸಿಗಳ ವಿಷಯ, ನೀರು, ಅರಣ್ಯ ಹಾಗೂ ಜಮೀನು ವಿಷಯದಲ್ಲಿ ಗ್ರಾಮಸ್ಥರ ಹೋರಾಟವನ್ನು ಸರ್ಕಾರಕ್ಕೆ ಮುಟ್ಟುವಂತೆ ವರದಿ ಮಾಡುತ್ತಿದ್ದ ಮುಕೇಶ್, ನಕಲಿ ಎನ್‌ಕೌಂಟರ್‌, ನಾಗರಿಕರ ಹತ್ಯೆ, ಕಳಪೆ ಮೂಲಸೌಕರ್ಯ, ಅಪೌಷ್ಟಿಕತೆ, ಆರೋಗ್ಯ ಕೇಂದ್ರಗಳ ಅವ್ಯವಸ್ಥೆ ಇತ್ಯಾದಿ ವಿಷಯಗಳ ಮೇಲೆ ನಿರಂತರವಾಗಿ ವರದಿ ಮಾಡುತ್ತಲೇ ಇದ್ದ’ ಎಂದು ಮುಕೇಶ್ ಜೊತೆ ಕೆಲಸ ಮಾಡಿದ ಪತ್ರಕರ್ತರು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಕೊಲೆಗೆ ಕಾರಣವಾಯಿತು ಕಳಪೆ ರಸ್ತೆ ಕುರಿತ ವರದಿ

ಮುಕೇಶ್‌ ಅವರ 'ಬಸ್ತಾರ್ ಜಂಕ್ಷನ್‌' ಎಂಬ ಯೂಟ್ಯೂಬ್ ಚಾನಲ್ ಅನ್ನು 1.66 ಲಕ್ಷ ಜನ ಸಬ್‌ಸ್ಕ್ರೈಬರ್ ಮಾಡಿಕೊಂಡಿದ್ದಾರೆ. 2021ರಲ್ಲಿ ಕೋಬ್ರಾ ಸೈನಿಕರೊಬ್ಬರನ್ನು ಅಪಹರಿಸಿದ್ದ ಮಾವೋವಾದಿಗಳೊಂದಿಗೆ ಸಂದಾನ ನಡೆಸಿ, ಅವರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಮುಕೇಶ್ ಪ್ರಮುಖ ಪಾತ್ರ ವಹಿಸಿದ್ದರು.

ಬಿಜಾಪುರದಲ್ಲಿ ₹120 ಕೋಟಿ ವೆಚ್ಚದ ರಸ್ತೆ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು 2024ರ ಡಿ. 25ರಂದು ಮುಕೇಶ್ ಸುದ್ದಿ ಮಾಡಿದ್ದರು. ಇದು ಎನ್‌ಡಿಟಿವಿಯಲ್ಲಿ ಪ್ರಸಾರವಾಯಿತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತು. ಈ ರಸ್ತೆಯ ನಿರ್ಮಾಣದ ಗುತ್ತಿಗೆ ಪಡೆದವರು ಮುಕೇಶ್ ಅವರ ಸೋದರ ಸಂಬಂಧಿ ಸುರೇಶ್ ಚಂದ್ರಾಕರ್. ಮುಕೇಶ್ ವರದಿಯಿಂದ ಕುಪಿತನಾದ ಈತ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಕೊಲೆ ಆರೋಪಿಗಳು

ಕೊಲೆಯ ಭೀಕರತೆಗೆ ಬೆಚ್ಚಿದ ವೈದ್ಯ

ಮುಕೇಶ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಪ್ರಕಾರ, ತಲೆಯಲ್ಲಿ 15 ಕಡೆ ಮೂಳೆಗಳು ಮುರಿದಿದ್ದವು. ಕುತ್ತಿಗೆ ಮುರಿದಿತ್ತು. ಹೃದಯವನ್ನು ಕಿತ್ತು ಹೊರಕ್ಕೆ ತೆಗೆಯಲಾಗಿತ್ತು. ಯಕೃತ್ ನಾಲ್ಕು ಭಾಗಗಳಾಗಿದ್ದವು. ಎದೆಯ ಐದು ಮೂಳೆಗಳು ಮುರಿದಿವೆ. ನನ್ನ 12 ವರ್ಷದ ವೃತ್ತಿ ಜೀವನದಲ್ಲಿ ಇಂಥ ಘೋರ ಹತ್ಯೆ ಕಂಡಿಲ್ಲ’ ಎಂದು ಭೀಕರತೆಯನ್ನು ವಿವರಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಚಂದಾರ್ಕರ್‌ ಸೇರಿ ಒಟ್ಟು ಮೂರು ಜನರನ್ನು ಹೈದರಾಬಾದ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.