ADVERTISEMENT

ಬಿಬಿಸಿ ಕಚೇರಿ ತಪಾಸಣೆ :ಆದಾಯ ತೆರಿಗೆ ಅಧಿಕಾರಿಗಳಿಂದ ಸತತ 3ನೇ ದಿನ ಕಾರ್ಯಾಚರಣೆ

ಸಂಪಾದಕೀಯ ವಿಭಾಗದ ಸಿಬ್ಭಂದಿಯನ್ನೂ ತನಿಖೆಗೆ ಒಳಪಡಿಸಿದ ಆದಾಯ ತೆರಿಗೆ ಇಲಾಖೆ

ಏಜೆನ್ಸೀಸ್
Published 16 ಫೆಬ್ರುವರಿ 2023, 19:15 IST
Last Updated 16 ಫೆಬ್ರುವರಿ 2023, 19:15 IST
   

ನವದೆಹಲಿ: ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ನ (ಬಿಬಿಸಿ) ದೆಹಲಿ ಮತ್ತು ಮುಂಬೈ ಕಚೇರಿಯಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆಯ ಅಧಿಕಾರಿಗಳು ನಡೆಸುತ್ತಿರುವ ‘ಪರಿಶೀಲನೆ’ ಮೂರನೇ ದಿನವಾದ ಗುರುವಾರವೂ ಮುಂದುವರಿದಿದೆ. ಬಿಬಿಸಿಯ ಸಂಪಾದಕೀಯ ಮತ್ತು ಆಡಳಿತ ವಿಭಾಗದ ಸಿಬ್ಬಂದಿಯ ಮೊಬೈಲ್‌ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ತಪಾಸಣೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಮಂಗಳವಾರ ‘ಪರಿಶೀಲನೆ’ ಆರಂಭವಾಗಿದೆ. ಐ.ಟಿ ಅಧಿಕಾರಿಗಳು ಅಂದಿನಿಂದಲೂ ಬಿಬಿಸಿ ಕಚೇರಿಯಲ್ಲಿಯೇ ಇದ್ದಾರೆ. ನಿದ್ದೆಯನ್ನೂ ಅಲ್ಲಿಯೇ ಮಾಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹಣಕಾಸು ವಹಿವಾಟುಗಳ ಕುರಿತಂತೆ ಬಿಬಿಸಿ ಸಿಬ್ಬಂದಿಯನ್ನು ತಡರಾತ್ರಿಯವರೆಗೂ ತನಿಖೆಗೆ ಒಳಪಡಿಸಲಾಗಿದೆ ಎಂದೂ ಹೇಳಿದ್ದಾರೆ.

‘ಲ್ಯಾಪ್‌ಟಾಪ್‌ಗಳನ್ನು ತೆರೆಯುವಂತೆ ಮತ್ತು ಫೋನ್‌ಗಳನ್ನು ಕೊಡುವಂತೆ ಅವರು (ಅಧಿಕಾರಿಗಳು) ಕೇಳಿದರು. ಬಳಿಕ ಫೋನ್‌ಗಳನ್ನು ಹಿಂದಿರುಗಿಸಿದರು’ ಎಂದು ಒಂದು ಮೂಲವು ತಿಳಿಸಿದೆ. ಈ ಉಪಕರಣಗಳನ್ನು ತೆರೆಯುವುದಕ್ಕಾಗಿ ಪಾಸ್‌ವರ್ಡ್‌ ನೀಡುವಂತೆ ಹೇಳಿದ್ದಾಗಿ ಇನ್ನೊಂದು ಮೂಲವು ಹೇಳಿದೆ.

ADVERTISEMENT

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆ ಮತ್ತು ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರವು ಪ‍್ರಸಾರವಾದ ಕೆಲವೇ ವಾರಗಳಲ್ಲಿ ಈ ದಿಢೀರ್ ‘ಪರಿಶೀಲನೆ’ ನಡೆದಿದೆ.

ಬಿಬಿಸಿ ಕಚೇರಿಯ ಕಾರ್ಯಾಚರಣೆ ಕುರಿತು ಆದಾಯ ತೆರಿಗೆ ಇಲಾಖೆಯು ಈವರೆಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದು ದ್ವೇಷ ಸಾಧನೆ ಅಲ್ಲ, ‘ವರ್ಗಾವಣೆ ವೆಚ್ಚ’ (ಸಂಸ್ಥೆಯು ತನ್ನ ಅಂಗ ಸಂಸ್ಥೆಗಳಿಗೆ ಸೇವೆ, ಸರಕು, ತಂತ್ರಜ್ಞಾನ, ಸಿಬ್ಬಂದಿ ನೀಡುವಾಗ ಅದಕ್ಕೆ ನಿಗದಿ ಮಾಡುವ ದರ) ಮತ್ತು ಲಾಭ ವರ್ಗಾವಣೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಬಿಸಿ ಕಚೇರಿಯಲ್ಲಿ ಒಟ್ಟು 45 ತಾಸಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಲಾಗಿದೆ. ಎಲೆಕ್ಟ್ರಾನಿಕ್‌ ಮತ್ತು ಮುದ್ರಿತ ಪ್ರತಿಗಳ ನಕಲು ತೆಗೆದುಕೊಳ್ಳಲಾಗಿದೆ. ಕಾರ್ಯಾಚರಣೆಯು ಇನ್ನೂ ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ಈಗ ಹೇಳಲಾಗದು. ಎಷ್ಟು ಸಮಯ ಬೇಕು ಎಂಬುದನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳೇ ನಿರ್ಧರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಬಿಬಿಸಿಗೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಕಳೆದ ವಾರ ವಜಾ ಮಾಡಿತ್ತು. ಇದು ವಿಚಾರಣೆಗೆ ಅರ್ಹವಾದ ಅರ್ಜಿಯೇ ಅಲ್ಲ ಎಂದು ಕೋರ್ಟ್ ಹೇಳಿತ್ತು. ಸಾಕ್ಷ್ಯಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿಕೊಳ್ಳುವುದಕ್ಕೆ ತಡೆ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಏಪ್ರಿಲ್‌ಗೆ ನಿಗದಿಯಾಗಿದೆ.

ಸಾಕ್ಷ್ಯಚಿತ್ರವನ್ನು ಜಾಲತಾಣಗಳಲ್ಲಿ ಹಂಚಿಕೆ ಮಾಡಬಾರದು ಎಂಬ ನಿರ್ದೇಶನವನ್ನು ಸರ್ಕಾರವು ಜನವರಿ 21ರಂದು ನೀಡಿತ್ತು.

ಮಾಧ್ಯಮ ಸಂಘಟನೆಗಳು ಈ ‘ಪರಿಶೀಲನೆ’ ಕಾರ್ಯಾಚರಣೆಯನ್ನು ಖಂಡಿಸಿವೆ. ‘ಈ ಕಿರುಕುಳವನ್ನು ನಿಲ್ಲಿಸಬೇಕು ಮತ್ತು ಪತ್ರಕರ್ತರು ಭೀತಿ ಅಥವಾ ಪಕ್ಷಪಾತರಹಿತವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು’ ಎಂದು ಮುಂಬೈ ಪ್ರೆಸ್‌ ಕ್ಲಬ್‌ ಒತ್ತಾಯಿಸಿದೆ.

ಭಾರತವಿರೋಧಿ ಶಕ್ತಿಗಳಿಂದ ಸುಪ್ರೀಂ ಕೋರ್ಟ್ ‘ಸಾಧನ’ವಾಗಿ ಬಳಕೆ: ಪಾಂಚಜನ್ಯ

ಭಾರತ ವಿರೋಧಿ ಶಕ್ಷಿಗಳು ಸುಪ್ರೀಂ ಕೋರ್ಟ್ ಅನ್ನು ‘ಸಾಧನ’ವಾಗಿ ಬಳಸಿಕೊಳ್ಳುತ್ತಿವೆ ಎಂದು ಆರ್‌ಎಸ್‌ಎಸ್‌ ನಂಟಿನ ವಾರಪತ್ರಿಕೆ ‘ಪಾಂಚಜನ್ಯ’ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರಕ್ಕೆ ನಿರ್ಬಂಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ಆಧಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್‌ ನೀಡಿದ್ದನ್ನು ಪತ್ರಿಕೆಯು ಟೀಕಿಸಿದೆ.

ಉಗ್ರಗಾಮಿಗಳನ್ನು ಮಾನವ ಹಕ್ಕುಗಳ ಹೆಸರಿನಲ್ಲಿ ‘ರಕ್ಷಣೆ’ ಮಾಡಲಾಗಿತ್ತು. ಪರಿಸರದ ಹೆಸರು ಹೇಳಿ ಭಾರತದ ‘ಪ್ರಗತಿ’ಗೆ ತಡೆ ಒಡ್ಡಲಾಗಿತ್ತು. ಭಾರತದ ವಿರುದ್ಧವೇ ಅಪಪ್ರಚಾರ ನಡೆಸಲು ಭಾರತವಿರೋಧಿ ಶಕ್ತಿಗಳಿಗೆ ಹಕ್ಕು ಬೇಕು ಎಂದು ಈಗ ಪ್ರತಿಪಾದಿಸಲಾಗುತ್ತಿದೆ ಎಂದು ‘ಪಾಂಚಜನ್ಯ’ದ ಸಂಪಾದಕೀಯದಲ್ಲಿ ಹೇಳಲಾಗಿದೆ.

‘ನಮ್ಮ ದೇಶದ ಹಿತಾಸಕ್ತಿಯನ್ನು ರಕ್ಷಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಸೃಷ್ಟಿಸಲಾಗಿದೆ. ಆದರೆ, ಭಾರತವಿರೋಧಿ ಶಕ್ತಿಗಳು ತಮ್ಮ ದಾರಿ ಸುಗಮ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಅನ್ನು ಬಳಸಿಕೊಳ್ಳುತ್ತಿವೆ. ಸುಪ್ರೀಂ ಕೋರ್ಟ್ ಭಾರತದ ತೆರಿಗೆದಾರರ ಹಣದಲ್ಲಿ ನಡೆಯುತ್ತಿದೆ ಮತ್ತು ಭಾರತದ ಕಾನೂನಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ’ ಎಂದೂ ಸಂಪಾದಕೀಯಲ್ಲಿ ವಿವರಿಸಲಾಗಿದೆ.

ಬಿಬಿಸಿ ಸಾಕ್ಷ್ಯಚಿತ್ರವು ಭಾರತದ ಹೆಸರು ಕೆಡಿಸುವುದಕ್ಕಾಗಿ ಮಾಡಿರುವ ಅಪಪ್ರಚಾರ. ಅದರಲ್ಲಿ ಇರುವುದೆಲ್ಲವೂ ಸುಳ್ಳು ಮತ್ತು ಕಟ್ಟುಕತೆ ಎಂದು ಪತ್ರಿಕೆಯು ಪ್ರತಿಪಾದಿಸಿದೆ.

‘ನಮ್ಮ ಪ್ರಜಾ‍ಪ್ರಭುತ್ವ, ನಮ್ಮ ಔದಾರ್ಯ ಮತ್ತು ನಮ್ಮ ನಾಗರಿಕ ಮಾನದಂಡ’ದ ಪ್ರಯೋಜನವನ್ನು ರಾಷ್ಟ್ರವಿರೋಧಿ ಶಕ್ತಿಗಳೆಲ್ಲವೂ ಪಡೆದುಕೊಳ್ಳುತ್ತಿವೆ ಎಂದು ಸಂಪಾದಕೀಯ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.