ADVERTISEMENT

ಜಿಡಿಪಿಗಿಂತ ಮೂಲಸೌಕರ್ಯ ಯೋಜನೆ ಗಾತ್ರ ಹಿಗ್ಗುತ್ತಿದೆ: ಚಿದಂಬರಂ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯೋತ್ವವದ ಭಾಷಣಕ್ಕೆ ಪ್ರತಿಕ್ರಿಯೆ

ಪಿಟಿಐ
Published 16 ಆಗಸ್ಟ್ 2021, 9:24 IST
Last Updated 16 ಆಗಸ್ಟ್ 2021, 9:24 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ:‌ ಹಿಂದಿನ ಸ್ವಾತಂತ್ರ್ಯೋತ್ಸವದ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಮೂಲ ಸೌಕರ್ಯ ಅಭಿವೃದ್ಧಿ‘ಗಾಗಿ ಲಕ್ಷ ಕೋಟಿ ಘೋಷಣೆ ಮಾಡಿರುವುದನ್ನು ಉಲ್ಲೇಖಿಸಿದ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ, ‘ಪ್ರತಿ ವರ್ಷ ದೇಶದ ಜಿಡಿಪಿಗಿಂತ ದೇಶದ ಮೂಲಸೌಕರ್ಯ ಅಭಿವೃದ್ಧಿಯ ಯೋಜನೆ ಗಾತ್ರವೇ ವೇಗವಾಗಿ ಬೆಳೆಯುತ್ತಿದ್ದು, ಅಷ್ಟಕ್ಕೇ ನಾವೆಲ್ಲ ‘ಸಂತೋಷಪಡಬೇಕಿದೆ‘ ಎಂದು ಟ್ವೀಟ್‌ ಮಾಡಿದ್ದಾರೆ.

ಮೋದಿಯವರು ಭಾನುವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣದಲ್ಲಿ ದೇಶದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ‘ಗತಿ ಶಕ್ತಿ‘ ಕಾರ್ಯಕ್ರಮ ಘೋಷಿಸಿದ್ದು, ಅದಕ್ಕಾಗಿ ₹100 ಲಕ್ಷ ಕೋಟಿ ಹಣ ಹೂಡಿಕೆ ಮಾಡುವುದಾಗಿ ಪ್ರಕಟಿಸಿದ್ದರು. ಈ ಯೋಜನೆ ಮೂಲಕ ಕೈಗಾರಿಕೆಗಳ ಉತ್ಪಾದಕತೆ ಹೆಚ್ಚಿಸುವ ಜೊತೆಗೆ ಉದ್ಯೋಗಾವಕಾಶಗಳ ಸೃಷ್ಟಿಯ ಗುರಿ ಹೊಂದಿದೆ ಎಂದು ಹೇಳಿದ್ದರು.

ಈ ಘೋಷಣೆಗೆ ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿರುವ ಚಿದಂಬರಂ ಅವರು, ಆಗಸ್ಟ್ 15, 2019 ರಂದು ಮೋದಿ ‘ಆಧುನಿಕ ಮೂಲ ಸೌಕರ್ಯಕ್ಕಾಗಿ ₹100 ಲಕ್ಷ ಕೋಟಿ ಹೂಡಿಕೆ ಮಾಡುವ ನಿರ್ಧಾರ ಪ್ರಕಟಿಸಿದರು. ಆ.15, 2020ರ ಭಾಷಣದಲ್ಲಿ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಲಿರುವ ‘ರಾಷ್ಟ್ರೀಯ ಮೂಲಸೌಕರ್ಯ ಯೋಜನೆ‘ಗಾಗಿ ₹100 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಪ್ರಕಟಿಸಿದ್ದರು. ಈ ವರ್ಷದ ಭಾಷಣದಲ್ಲಿ ‘ಗತಿ ಶಕ್ತಿ‘– ದೇಶದ ಮೂಲಸೌಕರ್ಯ ಯೋಜನೆಗಾಗಿ ₹100 ಲಕ್ಷ ಕೋಟಿ ಪ್ರಕಟಿಸಿದ್ದಾರೆ‘ ಎಂದು ಚಿದಂಬರಂ ಹೇಳಿದ್ದಾರೆ

ADVERTISEMENT

‘ಭಾರತಕ್ಕೆ ಮೂರು ಬಾರಿ ಇಂಥದ್ದೊಂದು ಹಾರೈಕೆ ದೊರೆತಿದೆ. ಭವಿಷ್ಯದಲ್ಲಿ ದೇಶದ ಮೂಲಸೌಕರ್ಯ ಅಭಿವೃದ್ಧಿಗಾಗಿ ಸದ್ಯ ನಮ್ಮ ಬಳಿ ₹300 ಲಕ್ಷ ಕೋಟಿಯ ಯೋಜನೆ ಇದೆ. ಪ್ರತಿ ವರ್ಷ ನಮ್ಮ ದೇಶದ ಜಿಡಿಪಿಗಿಂತ ಯೋಜನಾ ಗಾತ್ರವೇ ಹಿಗ್ಗುತ್ತಿದೆ. ನಾವು ಅಷ್ಟಕ್ಕೇ ಸಂತೋಷಪಡಬೇಕು‘ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.