ADVERTISEMENT

1200 ಕಿ.ಮೀ ದೂರದಿಂದ ಸೈಕಲ್‌ನಲ್ಲಿ ತಂದೆಯ ಕರೆತಂದ ಜ್ಯೋತಿಗೆ ಇವಾಂಕಾ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 23 ಮೇ 2020, 4:54 IST
Last Updated 23 ಮೇ 2020, 4:54 IST
   
""

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಗುರುಗ್ರಾಮದಲ್ಲಿ ಸಿಕ್ಕಿಹಾಕಿಕೊಂಡಿದ್ದ ತಮ್ಮ ಗಾಯಾಳು ತಂದೆಯನ್ನು ಸೈಕಲ್‌ ಮೇಲೆ ಕೂರಿಸಿಕೊಂಡು 1200 ಕಿಲೋಮೀಟರ್‌ ದೂರದ ಬಿಹಾರದಲ್ಲಿರುವ ಸ್ವಗ್ರಾಮಕ್ಕೆ ಕರೆತಂದಿದ್ದ ಜ್ಯೋತಿಕುಮಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏಳು ದಿನಗಳವರೆಗೆ ಬೈಸಿಕಲ್ ಮೇಲೆ ಪ್ರಯಾಣ ಮಾಡಿದ್ದ ಜ್ಯೋತಿಕುಮಾರಿ ಅವರ ಸಾಹಸ, ಧೈರ್ಯ, ತಂದೆ ಮೇಲಿನ ಪ್ರೀತಿಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದನ್ನು ಗಮನಿಸಿರುವ ಟ್ರಂಪ್‌ ಪುತ್ರಿ ಇವಾಂಕಾ ಟ್ವೀಟ್‌ ಮಾಡಿದ್ದಾರೆ.

‘15 ವರ್ಷ ವಯಸ್ಸಿನ ಜ್ಯೋತಿ ಕುಮಾರಿ, ಗಾಯಗೊಂಡ ತನ್ನ ತಂದೆಯನ್ನು 7 ದಿನಗಳ ಅವಧಿಯಲ್ಲಿ 1,200 ಕಿ.ಮೀಗೂ ಹೆಚ್ಚು ದೂರವಿರುವ ತನ್ನ ಹಳ್ಳಿಗೆ ಸೈಕಲ್‌ನಲ್ಲಿ ಕರೆದೊಯ್ದಿದ್ದಾಳೆ. ಸುಂದರ ಪ್ರೀತಿ ಮತ್ತು ಸಹನೆಯ ಈ ಸಾಧನೆಯು ಭಾರತದ ಜನರ ಮತ್ತು ಸೈಕ್ಲಿಂಗ್‌ ಫೆಡರೇಷನ್‌ನ ಕಲ್ಪನೆಯನ್ನು ಕಟ್ಟಿಕೊಟ್ಟಿದೆ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇವಾಂಕಾ ಅವರ ಈ ಟ್ವೀಟ್‌ಗೆ ಭಾರಿ ಮೆಚ್ಚು ವ್ಯಕ್ತವಾಗಿದ್ದು, 61.5 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ. 18.4 ಸಾವಿರ ಬಾರಿ ರೀಟ್ವೀಟ್‌ ಆಗಿದೆ.

ಜ್ಯೋತಿ ಅವರ ಈ ಸಾಧನೆಯನ್ನು ಮನಗಂಡ ಭಾರತೀಯ ಸೈಕ್ಲಿಂಗ್‌ ಫೆಡರೇಷನ್‌ ಆಕೆಯನ್ನು ಟ್ರಯಲ್ಸ್‌ನಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ.

ಈ ಕುರಿತು ಮಾತನಾಡಿರುವ ಸೈಕ್ಲಿಂಗ್‌ ಫೆಡರೇಷನ್‌ನ ಮುಖ್ಯಸ್ಥ ಓಂಕಾರ್‌ ಸಿಂಗ್, ‘ಮುಂದಿನ ತಿಂಗಳಲ್ಲಿ ದೆಹಲಿಗೆ ಬರಬೇಕೆಂದು ಆಮಂತ್ರಣ ನೀಡಿದ್ದೇವೆ. ಲಾಕ್‌ಡೌನ್‌ ತೆರವುಗೊಳಿಸಿದ ನಂತರ ದೆಹಲಿಯ ಇಂದಿರಾಗಾಂಧಿ ಸೈಕ್ಲಿಂಗ್ ಅಕಾಡೆಮಿಯಲ್ಲಿ ಟ್ರಯಲ್ಸ್‌ ನೀಡಲು ವ್ಯವಸ್ಥೆ ಮಾಡಲಿದ್ದೇವೆ. ಅವರಿಗೆ ತಮ್ಮ ಗ್ರಾಮದಿಂದ ಬರಲು ಎಲ್ಲ ವ್ಯವಸ್ಥೆಯನ್ನೂ ನಾವೇ ಮಾಡುತ್ತೇವೆ. ವೆಚ್ಚವನ್ನೂ ನಮ್ಮ ಸಂಸ್ಥೆ ಭರಿಸುವುದು’ ಎಂದು ತಿಳಿಸಿದ್ದಾರೆ.

‘ಆ ಬಾಲಕಿಯಲ್ಲಿ ಉತ್ತಮ ಸಾಮರ್ಥ್ಯ ಇದೆ. ಅದೇನೋ ವಿಶೇಷ ಪ್ರತಿಭೆ ಇದೆ ಎನಿಸುತ್ತಿದೆ. 1200 ಕಿ.ಮೀ ಸೈಕಲ್ ಹೊಡೆಯುವುದು ಸುಲಭದ ಮಾತಲ್ಲ. ಆಕೆಯ ದೈಹಿಕ ಕ್ಷಮತೆಯ ಪರೀಕ್ಷೆ ಮಾಡುತ್ತೇವೆ. ನಮ್ಮ ಅಕಾಡೆಮಿಯಲ್ಲಿರುವ ಕಂಪ್ಯೂಟರೀಕೃತ ಸೈಕಲ್ ಮೇಲೆ ಪರೀಕ್ಷೆ ನೀಡಲು ಅವಕಾಶ ಕೊಡುತ್ತೇವೆ. ಏಳೆಂಟು ಮಾನದಂಡಗಳನ್ನು ನಿಗದಿ ಮಾಡಿದ್ದೇವೆ. ಅವುಗಳಲ್ಲಿ ಅವರು ಉತ್ತೀರ್ಣರಾದರೆ 15 ವರ್ಷದೊಳಗಿನವರ ಟ್ರೇನಿಗಳಲ್ಲಿ ಸ್ಥಾನ ಪಡೆಯುವರು. ಅಕಾಡೆಮಿಯಲ್ಲಿ ಈಗಾಗಲೇ 10 ಮಂದಿ ಸೈಕ್ಲಿಸ್ಟ್‌ಗಳು ಇದ್ದಾರೆ’ ಎಂದು ಸಿಂಗ್ ತಿಳಿಸಿದರು.

ಸೈಕ್ಲಿಂಗ್‌ ಟ್ರಯಲ್ಸ್‌ಗೆ ಕರೆ ಬಂದಿರುವ ಕುರಿತು ಮಾತನಾಡಿರುವ ಜ್ಯೋತಿ ಕುಮಾರಿ, ’ನನಗೆ ಬಹಳ ಸಂತೋಷವಾಗಿದೆ. ದೆಹಲಿಗೆ ಹೋಗಿ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತೇನೆ,’ ಎಂದು ತಿಳಿಸಿದ್ದಾರೆ.

ಜ್ಯೋತಿಯ ತಂದೆ ಮೋಹನ್ ಪಾಸ್ವಾನ್ ಅವರು ಗುರುಗ್ರಾಮದಲ್ಲಿ ರಿಕ್ಷಾ ಚಾಲಕರಾಗಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದರು. ಅದೇ ಸಂದರ್ಭದಲ್ಲಿ ಲಾಕ್‌ಡೌನ್ ಇತ್ತು. ಅವರು ಚಾಲನೆ ಮಾಡುತ್ತಿದ್ದ ರಿಕ್ಷಾವನ್ನು ಅದರ ಮಾಲೀಕರು ತೆಗೆದುಕೊಂಡು ಹೋದರು. ಅದರಿಂದಾಗಿ ಮೋಹನ್ ತಮ್ಮ ಗ್ರಾಮಕ್ಕೆ ಹೋಗಲು ಸಾಧ್ಯವಾಗದೇ ಕಷ್ಟದಲ್ಲಿದ್ದರು. ಮೇ 10ರಂದು ಜ್ಯೋತಿ ತಮ್ಮ ಸೈಕಲ್‌ನ ಹಿಂಬದಿಯಲ್ಲಿ ಅಪ್ಪನನ್ನು ಕೂರಿಸಿಕೊಂಡು ಗ್ರಾಮಕ್ಕೆ ತೆರಳಿದ್ದರು. 16ರಂದು ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.