ADVERTISEMENT

5 ವರ್ಷದಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ಲಸಿಕೆ ಪಡೆಯುತ್ತಲೇ ನಡೆದಾಡಿ, ಮಾತಾಡಿದ!

ಪ್ರಕರಣದ ಅಧ್ಯಯನಕ್ಕೆ ಮೂವರು ಸದಸ್ಯರ ವೈದ್ಯಕೀಯ ತಂಡ ರಚಿಸಿದ ಆರೋಗ್ಯ ಇಲಾಖೆ

ಪಿಟಿಐ
Published 13 ಜನವರಿ 2022, 16:13 IST
Last Updated 13 ಜನವರಿ 2022, 16:13 IST
ಕೋವಿಶೀಲ್ಡ್‌
ಕೋವಿಶೀಲ್ಡ್‌   

ಬೊಕಾರೊ (ಜಾರ್ಖಂಡ್‌): ಐದು ವರ್ಷಗಳ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಹಾಸಿಗೆ ಹಿಡಿದಿದ್ದ ಜಾರ್ಖಂಡ್‌ನ 55 ವರ್ಷದ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆಯುತ್ತಲೇ ನಡೆದಾಡಲು, ಮಾತನಾಡಲು ಆರಂಭಿಸಿದ್ದಾರೆ ಎಂದು ವೈದ್ಯರು ಗುರುವಾರ ಹೇಳಿದ್ದಾರೆ.

ಈ ಪವಾಡದಿಂದ ಆಶ್ಚರ್ಯಗೊಂಡಿರುವ ಸರ್ಕಾರವು ಪ್ರಕರಣದ ಅಧ್ಯಯನಕ್ಕಾಗಿ ಮೂರು ಸದಸ್ಯರ ವೈದ್ಯಕೀಯ ತಂಡವನ್ನು ರಚಿಸಿದೆ.

ಬೊಕಾರೊ ಜಿಲ್ಲೆಯ ಪೀಟರ್‌ವಾರ್ ಬ್ಲಾಕ್‌ನ ಉತ್ತರಾಸರಾ ಪಂಚಾಯತ್ ವ್ಯಾಪ್ತಿಯ ಸಲ್ಗಾಡಿ ಗ್ರಾಮದ ನಿವಾಸಿ ದುಲರ್‌ಚಂದ್ ಮುಂಡಾ ಐದು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡು ಹಾಸಿಗೆ ಹಿಡಿದಿದ್ದರು. ಅವರಿಗೆ ನಡೆದಾಡಲು, ಮಾತನಾಡಲು ಆಗುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ADVERTISEMENT

‘ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜನವರಿ 4 ರಂದು ಮುಂಡಾಗೆ ಕೋವಿಶೀಲ್ಡ್ ಲಸಿಕೆಯನ್ನು ಅವರ ಮನೆಯಲ್ಲೇ ನೀಡಿದರು. ಮರುದಿನ, ಮುಂಡಾ ಅವರನ್ನು ನೋಡಿದ ಕುಟುಂಬಸ್ಥರಿಗೆ ಆಶ್ಚರ್ಯ ಕಾದಿತ್ತು. ಮುಂಡಾ ನಡೆದಾಡಲಾರಂಭಿಸಿದ್ದರು, ಮಾತನಾಡಲಾರಂಭಿಸಿದ್ದರು. ವೈದ್ಯಕೀಯವಾಗಿ ಇದು ಅಧ್ಯಯನಯೋಗ್ಯ ಪ್ರಕರಣ’ ಎಂದು ಪೀಟರ್ವಾರ್ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ ಅಲ್ಬೆಲಾ ಕೆರ್ಕೆಟ್ಟಾ ತಿಳಿಸಿದ್ದಾರೆ.

‘ಈ ಪವಾಡದ ಬಗ್ಗೆ ಅಧ್ಯಯನ ನಡೆಸಲು ಮೂರು ಸದಸ್ಯರ ವೈದ್ಯಕೀಯ ತಂಡವನ್ನು ರಚಿಸಲಾಗಿದೆ’ ಎಂದು ಬೊಕಾರೊದ ಸಿವಿಲ್ ಸರ್ಜನ್ ಡಾ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.

ಬೆನ್ನುಮೂಳೆಯ ಸಮಸ್ಯೆಯಿಂದ ಮುಂಡಾ ಕಳೆದ ಒಂದು ವರ್ಷದಿಂದ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಸಲ್ಗಾಡಿ ಗ್ರಾಮದ ಗ್ರಾಮಸ್ಥರು ಸದ್ಯ ಈ ಬೆಳವಣಿಗೆಯಿಂದ ಆಶ್ಚರ್ಯಚಕಿತರಾಗಿದ್ದಾರೆ. ದೇವರೇ ಹೀಗೆ ಮಾಡಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.