ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ‘ದೇಶದ ಬೀದಿಗಳಿಂದ ಭಿಕ್ಷುಕರ ನಿರ್ಮೂಲನೆಗೆ ಸರ್ಕಾರದ ಯೋಜನೆಯ ಜೊತೆಗೆ ಜನರ ಬೆಂಬಲ ಹಾಗೂ ಸಮುದಾಯದ ಭಾಗವಹಿಸುವಿಕೆಯ ಅಗತ್ಯವಿದೆ’ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಹೇಳಿದರು.
ಭಿಕ್ಷುಕರ ನಿಗಮದ ಸಂಸ್ಥಾಪಕ ಡಾ. ಚಂದ್ರ ಮಿಶ್ರಾ ಅವರ ‘ಕೊನೆಯ ಭಿಕ್ಷುಕ’ ಪುಸ್ತಕದ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಸಚಿವರು, ವಾರಾಣಸಿ ಮತ್ತು ಇಂದೋರ್‌ನಲ್ಲಿನ ಭಿಕ್ಷುಕರ ಪುನರ್ವಸತಿಯನ್ನು ಉದಾಹರಿಸಿದರು.
‘ವಾರಾಣಸಿಯಲ್ಲಿ ಭಿಕ್ಷುಕರಿಗೆ ವ್ಯಾಪಾರ ತರಬೇತಿ ನೀಡಿದ ನಂತರ ಅವರು ಭಿಕ್ಷೆ ಬೇಡುವುದನ್ನು ತೊರೆದು, ಉದ್ಯೋಗ ಆಧಾರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಇದೀಗ ನೋಂದಾಯಿತ ಜಿಎಸ್‌ಟಿ ಪಾವತಿದಾರರಾಗಿ ತಿಂಗಳಿಗೆ ₹35,000–₹40,000 ಸಂಪಾದಿಸುತ್ತಿದ್ದಾರೆ’ ಎಂದು ಅವರು ಹೇಳಿದರು.
‘ಅವರೀಗ ಸಮಾಜದ ಮೇಲೆ ಅವಲಂಬಿತರಾಗಿಲ್ಲ. ತಾವೇ ಉದ್ಯೋಗ ನೀಡುವಂತಾಗಿದ್ದಾರೆ’ ಎಂದರು.
‘ಇಂದೋರ್‌ನಲ್ಲಿ ಸ್ಥಳೀಯ ನಿವಾಸಿಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಪುನರ್ವಸತಿ ಪಡೆದ ಭಿಕ್ಷುಕರಿಗೆ ಶಿಕ್ಷಣ, ಆರೋಗ್ಯ ಹಾಗೂ ಕೌಶಲ ತರಬೇತಿ ನೀಡಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ವೀರೇಂದ್ರ ಹೇಳಿದರು.
ಸಚಿವಾಲಯದ ‘ಸ್ಮೈಲ್’ ಯೋಜನೆಯಡಿ ಭಿಕ್ಷುಕರು, ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ ಆಶ್ರಯ, ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ವಿ. ರಾಮಸುಬ್ರಮಣಿಯನ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.