ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದಲ್ಲಿ ಶಾಸಕರು ಹಾಗೂ ಸಚಿವರ ಮಾಸಿಕ ವೇತನವನ್ನು ₹40 ಸಾವಿರಕ್ಕೆ ಹೆಚ್ಚಿಸುವ ಮಸೂದೆಗೆ ಅಂಗೀಕಾರ ನೀಡಲಾಗಿದೆ.
ವಿರೋಧ ಪಕ್ಷವಾದ ಬಿಜೆಪಿ ಶಾಸಕರ ಗೈರುಹಾಜರಿಯಲ್ಲಿ ಶಾಸಕರ ವೇತನ (ತಿದ್ದುಪಡಿ) ಮಸೂದೆ 2023ಕ್ಕೆ ಸದನವು ಅಂಗೀಕಾರ ನೀಡಿತು.
ಮಸೂದೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಶಾಸಕರು ಮತ್ತು ಸಚಿವರ ವೇತನ ಹೆಚ್ಚಳದ ನಿರ್ಧಾರ ಸರಿಯಾಗಿದೆ. ಮತ್ತೆ ಅವಕಾಶ ಸಿಕ್ಕಿದರೆ ಮತ್ತಷ್ಟು ಹೆಚ್ಚಳಕ್ಕೆ ಕ್ರಮಕೈಗೊಳ್ಳುತ್ತೇನೆ’ ಎಂದು ಹೇಳಿದರು.
ಶಾಸಕರು ಪ್ರಸ್ತುತ ಮಾಸಿಕ ₹10 ಸಾವಿರ, ರಾಜ್ಯ ಖಾತೆ ಸಚಿವರು ₹10,900 ಹಾಗೂ ಉಸ್ತುವಾರಿ ಸಚಿವರು ₹11 ಸಾವಿರ ವೇತನ ಪಡೆಯುತ್ತಿದ್ದಾರೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ ಇದೆ. ಮಸೂದೆಯು ಕಾಯ್ದೆ ರೂಪ ಪಡೆದರೆ ಕ್ರಮವಾಗಿ ₹50 ಸಾವಿರ, ₹50,900 ಹಾಗೂ ₹ 51 ಸಾವಿರ ವೇತನ ಪಡೆಯಲಿದ್ದಾರೆ ಎಂದು ಮಮತಾ ಅವರು ಹೇಳಿದರು.
ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ, ‘ಬಿಜೆಪಿಯ ಹಲವು ಶಾಸಕರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ಅವರಿಗೆ ವೇತನದ ಅಗತ್ಯವಿಲ್ಲ. ಈಗ ಅನಗತ್ಯವಾಗಿ ರಂಪಾಟ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.