ADVERTISEMENT

ಕೋಲ್ಕತ್ತ | ಪ್ರಿಯತಮೆ ಪತಿಯ ಹತ್ಯೆಗೈದು, ಕಾಲುವೆಗೆ ಎಸೆದ ಆರೋಪ: ಬಿಎಲ್‌ಒ ಬಂಧನ

ಪಿಟಿಐ
Published 14 ಫೆಬ್ರುವರಿ 2026, 11:01 IST
Last Updated 14 ಫೆಬ್ರುವರಿ 2026, 11:01 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಕೋಲ್ಕತ್ತ (ಪಶ್ಚಿಮ ಬಂಗಾಳ): ವಿವಾಹೇತರ ಸಂಬಂಧದ ಕಾರಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಸೇರಿ ಇಬ್ಬರನ್ನು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಬದುರಿಯಾದ ಕಾಲುವೆಯಲ್ಲಿ ನಾಸಿರ್ ಅಲಿ(30) ಅವರ ಛಿದ್ರಗೊಂಡ ದೇಹದ ಭಾಗಗಳು ಪತ್ತೆಯಾಗಿದ್ದವು. ಪ್ರಕರಣ ಸಂಬಂಧ ಬಿಎಲ್‌ಒ ರಿಜ್ವಾನ್ ಹಸನ್ ಮೊಂಡಲ್ ಮತ್ತು ಅವರ ಸಹಚರ ಸಾಗರ್ ಗೈನ್ ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಮೊಂಡಲ್, ನಾಸಿರ್‌ ಅಲಿಯ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಚರ್ಚಿಸುವ ನೆಪದಲ್ಲಿ ಸೋಮವಾರ ಸಂಜೆ ನಿರ್ಜನ ಸ್ಥಳದಲ್ಲಿ ತನ್ನನ್ನು ಭೇಟಿಯಾಗುವಂತೆ ನಾಸಿರ್‌ಗೆ ಹೇಳಿದ್ದ.

ಆದರೆ ಸೋಮವಾರ ರಾತ್ರಿಯಿಂದ ನಾಸಿರ್‌ ಅಲಿ ಕಾಣೆಯಾಗಿದ್ದರು. ಮರುದಿನ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಶುಕ್ರವಾರ ಬೆಳಿಗ್ಗೆ ಕಾಲುವೆಯಲ್ಲಿ ದೇಹದ ಭಾಗಗಳು ಪತ್ತೆಯಾಗಿವೆ. ಮೊಂಡಲ್‌ನ ಚಲನವಲನಗಳ ಬಗ್ಗೆ ಅನುಮಾನಗೊಂಡ ಪೊಲೀಸರು ಆತನ ಫೋನ್ ಕರೆಗಳನ್ನು ಪರಿಶೀಲಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಅಲಿಯನ್ನು ಕೊಂದು ಆತನ ದೇಹದ ಭಾಗಗಳನ್ನು ಕಾಲುವೆಯಲ್ಲಿ ಎಸೆದ ಆರೋಪದ ಮೇಲೆ ಮೊಂಡಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಲು ಮೊಂಡಲ್‌ಗೆ ಸಹಾಯ ಮಾಡಿ ಜತೆಗೆ ದೇಹವನ್ನು ಛಿದ್ರಗೊಳಿಸಿ, ಆ ಭಾಗಗಳನ್ನು ಕಾಲುವೆಗೆ ಎಸೆದ ಆರೋಪದ ಮೇಲೆ ಸಾಗರ್‌ ಗೈನ್‌ನನ್ನೂ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.