ADVERTISEMENT

ಮಗುವಿಗೆ ಉಸಿರುಕೊಟ್ಟು ಪ್ರಸೂತಿ ಕೋಣೆಯಲ್ಲೇ ಪ್ರಾಣಬಿಟ್ಟ ವೈದ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 8:50 IST
Last Updated 18 ಜನವರಿ 2019, 8:50 IST
   

ಕೋಲ್ಕತ್ತ: ಸಾಹಸಸಿಂಹ ವಿಷ್ಣುವರ್ಧನ್‌ ಅಭಿನಯದ ಬಂಧನ ಸಿನಿಮಾದ ಕ್ಲೈಮ್ಯಾಕ್ಸ್‌ ನೆನಪಿದೆಯಾ?– ’ವೈದ್ಯ ಹರೀಶ್‌ ತನ್ನ ಆರೋಗ್ಯವನ್ನೂ ಲೆಕ್ಕಿಸದೆ ಪ್ರಸೂತಿ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿ ತಾಯಿ ಮತ್ತು ಮಗುವಿನ ಪ್ರಾಣವನ್ನು ಉಳಿಸುತ್ತಾರೆ. ಶಿಶುವಿನ ಹುಟ್ಟಿನೊಂದಿಗೆ ವೈದ್ಯನ ಉಸಿರು ಕೊನೆಯಾಗುತ್ತದೆ.’

ಇಂಥದ್ದೇ ಒಂದು ಘಟನೆ ಮೇದಿನಿಪುರದ ಪಟಾಂಡದಲ್ಲಿ ನಡೆದಿದೆ. 48 ವರ್ಷ ವಯಸ್ಸಿನ ವೈದ್ಯ ಪ್ರಸೂತಿ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಾರೆ. ಅವರು ಕುಸಿಯುವುದಕ್ಕೆ ಕೆಲವೇ ನಿಮಿಷಗಳ ಮುನ್ನ ಸಹಜ ಹೆರಿಗೆ ಮೂಲಕ ಮಗುವನ್ನು ಹೊರತಂದಿದ್ದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿಭಾಸ್‌ ಖುಟಿಯಾ ಹೆರಿಗೆ ಮಾಡಿಸುವುದರಲ್ಲಿ ನಿರತರಾಗಿದ್ದರು. ಸೊನಾಲಿ ಕುಲಿಯಾ ಮಾಜಿ ಸಹಜ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡುತ್ತಿದ್ದಂತೆ ಮಗುವಿನ ಆರೋಗ್ಯದ ಕಡೆಗೆ ವೈದ್ಯ ಗಮನ ಹರಿಸಿದರು. ಮಗು ದೇಹದಲ್ಲಿ ಚಲನೆ ಇಲ್ಲದ್ದನ್ನು ಗಮನಿಸಿ, ಶಿಶುವಿನ ದೇಹವನ್ನು ಬೆಚ್ಚಡಿಗುವ ವ್ಯವಸ್ಥೆ ಮಾಡಿ, ಕ್ರಿಯಾಶೀಲವಾಗುವಂತೆ ಮಾಡಿದರು. ಮಗುವಿನ ಜೀವ ಉಳಿಸಿದ ಕೆಲವೇ ಕ್ಷಣಗಳಲ್ಲಿ ವೈದ್ಯ ಖುಟಿಯಾ ಕುಸಿದು ಬಿದ್ದರು.

ADVERTISEMENT

ಕೈಯಲ್ಲಿ ಮಗುವನ್ನು ಹಿಡಿದುಕೊಂಡೆ ಖುಟಿಯಾ ಕುಸಿದಿದ್ದರು. ಸಮೀಪದಲ್ಲಿಯೇ ಇದ್ದ ಏಕೈಕ ನರ್ಸ್‌, ಅವರ ಕೈಗಳಿಂದ ಮಗುವನ್ನು ತೆಗೆದುಕೊಂಡು ಸುರಕ್ಷಿತವಾಗಿ ಟೇಬಲ್ ಮೇಲೆ ಮಲಗಿಸಿದರು. ಇತರೆ ಸಿಬ್ಬಂದಿ ಸಹಾಯದಿಂದ ವೈದ್ಯ ಖುಟಿಯಾ ಅವರನ್ನು ಸಮೀಪದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾಗಲೇ ಖುಟಿಯಾ ತೀವ್ರ ಹೃದಯಾಘಾತದಿಂದ ಮೃತ ಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದರು.

ಹತ್ತು ವರ್ಷಗಳಿಗೂ ಹೆಚ್ಚು ಸಮಯದಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖುಟಿಯಾ, ಯಾವುದೇ ಸಮಯದಲ್ಲಿ ರೋಗಿಗಳು ಬಂದರೂ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಬಂಗಾಳದ ಗ್ರಾಮೀಣ ಭಾಗದಲ್ಲಿ ಹೆರಿಗೆಗೆ ತೊಂದರೆಯಾಗಬಾರದೆಂದು ಸ್ವತಃ ಸ್ವಸೂತಿ ಕೋಣೆಯನ್ನು ಸಿದ್ಧಪಡಿಸಿದ್ದರು. ಖುಟಿಯಾ ಆಪ್ತರು ಹೇಳುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವರು ದಿನದ 24 ಗಂಟೆಯೂ ಲಭ್ಯವಿರುತ್ತಿದ್ದರು. ಅವರಿಗೆ ಆಂಜಿಯೋಗ್ರಫಿ ಮಾಡಿಸಿಕೊಳ್ಳುವಂತೆ ಇತರೆ ವೈದ್ಯರು ಸಲಹೆ ನೀಡಿದ್ದರು ಎನ್ನಲಾಗಿದೆ.

(ಬಂಧನ ಸಿನಿಮಾದ ಕ್ಲೈಮ್ಯಾಕ್ಸ್‌ ದೃಶ್ಯ)

ಮಂಗಳವಾರ ಬೆಳಿಗ್ಗೆ 10:25ಕ್ಕೆಸೊನಾಲಿ ಕುಲಿಯಾ ಅವರನ್ನು ಪ್ರಸೂತಿ ಕೋಣೆಗೆ ಕರೆತರಲಾಗಿತ್ತು. 11 ಗಂಟೆಗೆ ಸೊನಾಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗು ಕ್ರಿಯಾಶೀಲವಾಗಿರಲಿಲ್ಲ ಹಾಗೂ ಅಳುತ್ತಿರಲಿಲ್ಲ. ವೈದ್ಯ ಖುಟಿಯಾ ಮಗುವನ್ನು ವಾರ್ಮರ್‌ನಲ್ಲಿಟ್ಟು, ಮಗುವಿನ ಹೃದಯವನ್ನು ಪಂಪ್‌ ಮಾಡಿ ಉಸಿರು ಹೊರತರಿಸುವ ಪ್ರಯತ್ನದಲ್ಲಿದ್ದರು. ಕೆಲವೇ ಕ್ಷಣಗಳಲ್ಲಿ ಮಗು ಅಳಲು ಪ್ರಾರಂಭಿಸಿತು, ಅದೇ ಕ್ಷಣದಲ್ಲಿ ಖುಟಿಯಾ ಕುಸಿದು ಬಿದ್ದರು ಎಂದು ಪ್ರಸೂತಿ ಕೋಣೆಯಲ್ಲಿ ಸಹೋದ್ಯೋಗಿ ಹೇಳಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.