ADVERTISEMENT

ಸಲಿಂಗ ವಿವಾಹಕ್ಕೆ ಗ್ರಾಮಸ್ಥರ ಬೆಂಬಲ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಿಯಾ–ರಾಖಿ

ಪಿಟಿಐ
Published 8 ನವೆಂಬರ್ 2025, 10:21 IST
Last Updated 8 ನವೆಂಬರ್ 2025, 10:21 IST
Shwetha Kumari
   Shwetha Kumari

ಕುಲ್ತಾಲಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಕುಲ್ತಾಲಿ ಬ್ಲಾಕ್‌ನ ಜಲಬೇರಿಯಾದಲ್ಲಿರುವ ಪಲೇರ್ ಚಕ್ ದೇವಸ್ಥಾನದಲ್ಲಿ ಮಂಗಳವಾರ ಸಲಿಂಗ ವಿವಾಹ ನೆರವೇರಿದೆ. ಮಹಿಳಾ ಸಲಿಂಗ ಜೋಡಿ ರಿಯಾ ಸರ್ದಾರ್‌ ಮತ್ತು ರಾಖಿ ನಸ್ಕರ್‌ ಮದುವೆಯಾಗಿದ್ದಾರೆ.

ನೃತ್ಯಪಟುಗಳಾದ ರಿಯಾ ಮತ್ತು ರಾಖಿ, ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯವಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪ್ರೇಮಾಂಕುರವಾಗಿತ್ತು. ಗ್ರಾಮಸ್ಥರ ಬೆಂಬಲದೊಂದಿಗೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

ನವೆಂಬರ್ 4ರಂದು ದೇವಸ್ಥಾನದಲ್ಲಿ ಮದುವೆ ಸಮಾರಂಭ ನಡೆದಿದೆ. ವಧುವಿನಂತೆ ಅಲಂಕಾರಗೊಂಡ ರಿಯಾ, ವರನಂತೆ ತಯಾರಾದ ರಾಖಿ ಪರಸ್ಪರ ಹೂ ಮಾಲೆ ಬದಲಾಯಿಸಿಕೊಂಡಿದ್ದಾರೆ.

ADVERTISEMENT

‘ನಾವು ಜೀವನ ಸಂಗಾತಿಗಳಾಗಿ ಪ್ರತಿಜ್ಞೆ ಮಾಡಿದ್ದೇವೆ’ ಎಂದು ವಿವಾಹದ ಬಳಿಕ ಸುದ್ದಿಗಾರರಿಗೆ ರಿಯಾ ಹೇಳಿದ್ದಾರೆ. ಇವರು ಮಂದಿರಬಜಾರ್‌ನ ರಾಮೇಶ್ವರಪುರದ ನಿವಾಸಿಯಾಗಿದ್ದಾರೆ.

‘ನಾವು ಪ್ರಾಪ್ತ ವಯಸ್ಸಿಗೆ ಬಂದಿದ್ದೇವೆ. ನಮ್ಮ ಜೀವನವನ್ನು ನಾವೇ ನಿರ್ಧರಿಸಬಹುದಾಗಿದೆ. ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಲಿಂಗ ಏಕೆ ಮುಖ್ಯ?’ ಎಂದು ಬಕುಲ್ತಲಾ ನಿವಾಸಿ ರಾಖಿ ಪ್ರಶ್ನಿಸಿದ್ದಾರೆ.

‘ನನ್ನ ಕುಟುಂಬದ ವಿರೋಧದ ನಡುವೆಯೂ ರಿಯಾಳನ್ನು ಮದುವೆಯಾಗಲು ನಾನು ನಿರ್ಧರಿಸಿದ್ದೆ’ ಎಂದೂ ಅವರು ತಿಳಿಸಿದ್ದಾರೆ.

ಇನ್ನು, ‘ನಮ್ಮ ಇಬ್ಬರು ಹೆಣ್ಣು ಮಕ್ಕಳು ಹೊಸ ಜೀವನಕ್ಕೆ ಕಾಲಿಡುವ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಲು ಇಲ್ಲಿಗೆ ಬಂದಿದ್ದೇವೆ’ ಎಂದು ಸ್ಥಳೀಯ ನಿವಾಸಿ ಮಿಲನ್‌ ಸರ್ದಾರ್‌ ತಿಳಿಸಿದ್ದಾರೆ.

‘ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಇದು ಸುಂದರ ಕ್ಷಣವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಅಂಕುರ್ ಬಸು ಅವರು ಹೇಳಿದ್ದಾರೆ.

ಈ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಸಲಿಂಗ ವಿವಾಹಕ್ಕೆ ದೇಶದ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತ ವಿಚಾರಣೆ ಬಾಕಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.