ಸುಪ್ರೀಂ ಕೋರ್ಟ್
ನವದೆಹಲಿ: ಬೆಂಗಳೂರಿನಲ್ಲಿ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ಬೆನ್ನಲ್ಲೇ, ವರದಕ್ಷಿಣೆ ನಿಷೇಧ ಕಾಯ್ದೆ, ಕೌಟುಂಬಿಕ ದೌರ್ಜನ್ಯ (ಮಹಿಳೆಯರ ರಕ್ಷಣೆ) ಕಾಯ್ದೆಯಲ್ಲಿ ಸುಧಾರಣೆ ತರಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
ವಕೀಲ ವಿಶಾಲ್ ತಿವಾರಿ ಎಂಬುವವರು ಈ ಪಿಐಎಲ್ ಸಲ್ಲಿಸಿದ್ದಾರೆ.
ಈ ಕಾಯ್ದೆಗಳ ಪರಾಮರ್ಶೆಯಾಗಬೇಕು ಹಾಗೂ ಇವುಗಳ ದುರುಪಯೋಗ ತಡೆಗಟ್ಟಲು ಕಾಯ್ದೆಯಲ್ಲಿ ಸುಧಾರಣೆ ತರಬೇಕು. ಈ ಉದ್ದೇಶಕ್ಕಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ವಕೀಲರು ಹಾಗೂ ಕಾನೂನು ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕು ಎಂದು ಅರ್ಜಿದಾರ ತಿವಾರಿ ಕೋರಿದ್ದಾರೆ.
ಮದುವೆ ಸಂದರ್ಭದಲ್ಲಿ ನೀಡುವ ಉಡುಗೊರೆಗಳು ಹಾಗೂ ಇತರ ವಸ್ತುಗಳ ಕುರಿತು ನೋಂದಣಿ ಮಾಡಿಸಲು ನಿರ್ದೇಶನ ನೀಡಬೇಕು ಎಂದೂ ಪಿಐಎಲ್‌ನಲ್ಲಿ ಕೋರಲಾಗಿದೆ.
ಐಪಿಸಿ ಸೆಕ್ಷನ್ 498ಎ ದುರ್ಬಳಕೆ ಕುರಿತಂತೆ 2010ರ ಪ್ರಕರಣವೊಂದಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಅನುಷ್ಠಾನಗೊಳಿಸಬೇಕು ಎಂದೂ ಮನವಿ ಮಾಡಲಾಗಿದೆ.
ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಐಪಿಸಿಯ ಸೆಕ್ಷನ್ 498ಎ, ವಿವಾಹಿತ ಮಹಿಳೆಯನ್ನು ವರದಕ್ಷಿಣೆಗಾಗಿ ಹಾಗೂ ಕೌಟುಂಬಿಕ ಕಿರುಕುಳದಿಂದ ರಕ್ಷಿಸುವ ಉದ್ದೇಶ ಹೊಂದಿವೆ. ಆದರೆ, ಪತಿಯ ಕುಟುಂಬದಿಂದ ತಮ್ಮ ಅನಗತ್ಯ ಮತ್ತು ಕಾನೂನುಬಾಹಿರ ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಈ ಕಾಯ್ದೆಗಳನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಪಿಐಎಲ್‌ನಲ್ಲಿ ವಿವರಿಸಲಾಗಿದೆ.
‘ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಅತುಲ್ ಸುಭಾಷ್ ಅವರು 80 ನಿಮಿಷಗಳ ವಿಡಿಯೊ ಮಾಡಿದ್ದು, ತಮ್ಮ ಪರಿತ್ಯಕ್ತ ಪತ್ನಿ ಹಾಗೂ ಆಕೆಯ ಕುಟುಂಬ ತನ್ನ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದೆ ಮತ್ತು ಹಣ ವಸೂಲಿ ಮಾಡಿದೆ ಎಂಬ ಹೇಳಿಕೆ ದಾಖಲಿಸಿದ್ದಾರೆ. 24 ಪುಟಗಳ ಡೆತ್ ನೋಟ್‌ನಲ್ಲಿ ನ್ಯಾಯಾಂಗ ವ್ಯವಸ್ಥೆ ಬಗ್ಗೆಯೂ ಅತುಲ್ ಟೀಕೆ ಮಾಡಿದ್ದಾರೆ’ ಎಂದು ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.