
ಹೋಶಿಯಾರಪುರ: ‘ಪಂಜಾಬ್‌ನ ನಿಜವಾದ ರಾಜಧಾನಿ ಚಂಡೀಗಢ. ಆದರೆ, ಅದನ್ನು ಅನ್ಯಾಯವಾಗಿ ನಿರಾಕರಿಸಲಾಗಿದೆ. ಅದನ್ನು ಪಡೆಯಲು ರಾಜ್ಯ ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡಲಿದೆ’ ಎಂದು ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್ ಹೇಳಿದ್ದಾರೆ.
ಗಣರಾಜ್ಯೋತ್ಸವ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ತ್ಯಾಗ, ಸಾಧನೆ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದರೂ ಪಂಜಾಬ್‌ಗೆ ತನ್ನದೇ ಆದ ರಾಜಧಾನಿ ಇಲ್ಲ. ಚಂಡೀಗಢ, ಪಂಜಾಬ್ ವಿಶ್ವವಿದ್ಯಾಲಯ ಮತ್ತು ನೀರಿನ ಹಕ್ಕುಗಳನ್ನು ಕಸಿದುಕೊಳ್ಳಲು ನಡೆಯುತ್ತಿರುವ ಪಿತೂರಿಗಳು ಯಶಸ್ವಿಯಾಗುವುದಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಸ್ತುತ, ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿದೆ.
‘ಪಂಜಾಬ್ ತನ್ನದೇ ಆದ ಹೈಕೋಟ್ ಹೊಂದಿಲ್ಲದಿರುವುದು ದುರದೃಷ್ಟಕರ. ಆದರೆ, ಈಶಾನ್ಯದ ಸಣ್ಣ ರಾಜ್ಯಗಳು ತಮ್ಮದೇ ಆದ ಹೈಕೋರ್ಟ್‌ಗಳನ್ನು ಹೊಂದಿವೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಪಂಜಾಬಿಗಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ದೇಶಕ್ಕಾಗಿ ನಾವು ಗರಿಷ್ಠ ತ್ಯಾಗಗಳನ್ನು ಮಾಡಿದರೂ, ನಮ್ಮ ರಾಜ್ಯಕ್ಕೆ ಅನ್ಯಾಯ ಮತ್ತು ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ನಮ್ಮ ಹಕ್ಕುಗಳನ್ನು ಪಡೆಯಲು ಇಂದಿಗೂ ಹೋರಾಡಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.