ADVERTISEMENT

ಖ್ಯಾತ ಭಜನೆ ಗಾಯಕ ನರೇಂದ್ರ ಚಂಚಲ್‌ ನಿಧನ

ಪಿಟಿಐ
Published 22 ಜನವರಿ 2021, 16:40 IST
Last Updated 22 ಜನವರಿ 2021, 16:40 IST

ನವದೆಹಲಿ: ಖ್ಯಾತ ಭಜನೆ ಗಾಯಕ ನರೇಂದ್ರ ಚಂಚಲ್‌ (76) ಅವರು ಅನಾರೋಗ್ಯದ ಕಾರಣ ಶುಕ್ರವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

‘ಚಲೊ ಬುಲಾವ ಆಯಾ ಹೆ’, ‘ತುನೆ ಮುಜೆ ಬುಲಾಯಾ ಶೇರವಾಲಿಯೆ’ ಮುಂತಾದ ಭಜನೆಗಳ ಮುಖಾಂತರ ಅವರು ಹೆಸರುವಾಸಿಯಾಗಿದ್ದರು. ಅವರನ್ನು ನ.27ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿದುಳಿನ ವ್ಯಾಧಿಯಿಂದಾಗಿ ಅವರು ಶುಕ್ರವಾರ ಮಧ್ಯಾಹ್ನ ಮೃತಪಟ್ಟರು.

1940ರಲ್ಲಿ ಅಮೃತಸರದ ನಮಕ್‌ ಮಂಡಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಚಂಚಲ್‌ ಅವರು, ಧಾರ್ಮಿಕ ವಾತಾವರಣದಲ್ಲೇ ಬೆಳೆದಿದ್ದರು. ಹೀಗಾಗಿ ಸಣ್ಣ ಪ್ರಾಯದಿಂದಲೇ ಭಕ್ತಿಗೀತೆಗಳನ್ನು ಹಾಡುವುದಕ್ಕೆ ಅವರಲ್ಲಿ ಆಸಕ್ತಿ ಮೂಡಿತ್ತು.

ADVERTISEMENT

1973ರಲ್ಲಿ ಬಿಡುಗಡೆಯಾದ ರಿಷಿ ಕಪೂರ್‌ ನಟನೆಯ ಮೊದಲ ಚಿತ್ರ ‘ಬಾಬಿ’ಯಲ್ಲಿ, ಅವರು ಹಾಡಿದ್ದ ‘ಬೇಷಕ್‌ ಮಂದಿರ್‌ ಮಸ್ಜಿದ್‌’ ಹಾಡು ಅವರಿಗೆ ಹಿಂದಿ ಸಿನಿಮಾದಲ್ಲಿ ಖ್ಯಾತಿ ತಂದುಕೊಟ್ಟಿತ್ತು. ಈ ಹಾಡಿಗಾಗಿ 1974ರಲ್ಲಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಫಿಲ್ಮ್‌ಫೇರ್‌ ಪ್ರಶಸ್ತಿ ದೊರಕಿತ್ತು. 1983ರಲ್ಲಿ ರಾಜೇಶ್‌ ಖನ್ನಾ ಅಭಿನಯದ ‘ಅವತಾರ್‌’ ಚಿತ್ರದ ‘ಚಲೊ ಬುಲಾವ ಆಯಾ ಹೆ ಮಾತಾ ನೆ ಬುಲಾಯಾ ಹೆ’ ಹಾಡು ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟಿತ್ತು.

2009ರಲ್ಲಿ ತಮ್ಮ ಆತ್ಮಕಥೆ ‘ಮಿಡ್‌ನೈಟ್‌ ಸಿಂಗರ್‌’ ಕೃತಿಯನ್ನು ಅವರು ಬಿಡುಗಡೆಗೊಳಿಸಿದ್ದರು. ‘ತಮ್ಮ ಧ್ವನಿಯಿಂದಲೇ ಭಕ್ತಿಗೀತೆಗಳ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಚಂಚಲ್‌ ಅವರು ಮೂಡಿಸಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.