ADVERTISEMENT

ನಿರ್ದಯಿ ಪೊಲೀಸ್‌ ಬಲ ಪ್ರಯೋಗಕ್ಕೆ ದಾರಿಯಾಗಲಿದೆ ಹೊಸ ಕಾನೂನು: ಕಪಿಲ್‌ ಸಿಬಲ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 13:28 IST
Last Updated 12 ಆಗಸ್ಟ್ 2023, 13:28 IST
ಕಪಿಲ್‌ ಸಿಬಲ್‌
ಕಪಿಲ್‌ ಸಿಬಲ್‌   

ನವದೆಹಲಿ: ‘ಬ್ರಿಟಿಷರ ಕಾಲದ ಅಪರಾಧ ಕಾನೂನುಗಳಿಗೆ ಬದಲಾಗಿ ತರಲಾಗುತ್ತಿರುವ ಭಾರತೀಯ ನ್ಯಾಯ ಸಂಹಿತೆ ಮಸೂದೆಯು ದೇಶದಲ್ಲಿ ರಾಜಕೀಯ ಉದ್ದೇಶಕ್ಕಾಗಿ ನಿರ್ದಯಿ ಪೋಲೀಸ್ ಬಲ ಪ್ರಯೋಗಕ್ಕೆ ದಾರಿ ಮಾಡಿಕೊಡಲಿದೆ’ ಎಂದು ಕೇಂದ್ರದ ಮಾಜಿ ಕಾನೂನು ಸಚಿವ ಕಪಿಲ್‌ ಸಿಬಲ್‌ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.   

ಇಂಥ ಕಾನೂನುಗಳ ಜಾರಿಯ ಮೂಲಕ ವಿರೋಧಿಗಳ ಸದ್ದಡಗಿಸುವುದು ಕೇಂದ್ರ ಸರ್ಕಾರದ ಗುಪ್ತ ಕಾರ್ಯಸೂಚಿಯಾಗಿದೆ ಎಂದು ಅವರು ಆರೋಪಿಸಿದರು.   

ಭಾರತೀಯ ನ್ಯಾಯ ಸಂಹಿತೆಯಲ್ಲಿ ಪೊಲೀಸ್‌ ಕಸ್ಟಡಿ ಅವಧಿಯನ್ನು 15 ರಿಂದ 60 ಅಥವಾ 90 ದಿನಕ್ಕೆ ಅನುಮತಿಸಲಾಗಿದೆ. ದೇಶದ ಭದ್ರತೆಗೆ ಧಕ್ಕೆ ತರುವ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲು ಹೊಸ ಸೆಕ್ಷನ್‌ಗಳನ್ನು (ಮರುವ್ಯಾಖ್ಯಾನ) ರೂಪಿಸಲಾಗಿದೆ. ಇವೆಲ್ಲವೂ ವಿರೋಧಿಗಳ ಧ್ವನಿ ನಿಗ್ರಹಿಸುವ ಕಾರ್ಯಸೂಚಿಯನ್ನು ಹೊಂದಿವೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ. 

ADVERTISEMENT

ಭಾರತೀಯ ನ್ಯಾಯ ಸಂಹಿತೆಯಲ್ಲಿ ಸರ್ಕಾರದ ಕ್ರಮಗಳ ವಿರುದ್ಧದ ಟೀಕೆ ಮತ್ತು ಆಗ್ರಹಗಳನ್ನೂ ‘ಭಾರತದ ಒಗ್ಗಟ್ಟು, ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಕೃತ್ಯಗಳು’ ಎಂದು ವಿವರಿಸಲಾಗಿದೆ. 

ಆರ್‌ಎಸ್‌ಎಸ್‌, ಕುರುಲ್ಕರ್‌ ರಕ್ಷಣೆಗಾಗಿ ಕಾನೂನು ರದ್ದು: ರಾವುತ್‌  

ಬ್ರಿಟಿಷರ ಕಾಲದ ದೇಶದ್ರೋಹದ ಕಾನೂನನ್ನು, ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸಂಪೂರ್ಣವಾಗಿ ತೆಗೆದುಹಾಕುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಬಡಾಯಿ ಕೊಚ್ಚಿಕೊಳ್ಳಬಾರದು. ಯಾಕೆಂದರೆ ಈಗ ರೂಪಿಸಲಾಗುತ್ತಿರುವ ಕಾನೂನು ಬ್ರಿಟಿಷ್‌ ಕಾಲದ ಕಾನೂನುಗಳಿಗಿಂತಲೂ ಹೆಚ್ಚು ಭಯ ಹುಟ್ಟಿಸುತ್ತಿವೆ. ರಾಜಕೀಯ ವಿರೋಧಿಗಳ ಬಾಯಿಮುಚ್ಚಿಸುವಂತಿವೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್‌ ರಾವುತ್‌ ಲೇವಡಿ ಮಾಡಿದ್ದಾರೆ.

ಆರ್‌ಎಸ್‌ಎಸ್‌ ಕಾರ್ಯಕರ್ತರು ಮತ್ತು ಹನಿಟ್ರ್ಯಾಪ್‌ಗೆ ಒಳಗಾಗಿ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪ ಎದುರಿಸುತ್ತಿರುವ  ಡಿಆರ್‌ಡಿಒ ವಿಜ್ಞಾನಿ ಪ್ರದೀಪ್‌ ಕುರುಲ್ಕರ್‌ ಅವರನ್ನು ರಕ್ಷಿಸಲೆಂದೇ ಹಿಂದಿನ ದೇಶದ್ರೋಹ ಕಾನೂನು ರದ್ದು ಮಾಡಿದಂತೆ ಕಾಣುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.