ಬಿಲ್ವಾರ್(ರಾಜಸ್ಥಾನ):ಹಣ, ಚಿನ್ನ, ಬೆಳ್ಳಿ, ವಜ್ರದಂತಹ ಅಮೂಲ್ಯ ವಸ್ತುಗಳನ್ನು ಲಾಕರ್, ಬಿರುವಿನಲ್ಲಿಟ್ಟು ಬೀಗ ಹಾಕಿ ಭದ್ರಮಾಡಿ ಕಾಯ್ದುಕೊಳ್ಳುವುದು ಸಾಮಾನ್ಯ. ಆದರೆ, ಈಗ ನೀರಿಗೂ ಬೀಗ ಹಾಕಿ ಕಾಯ್ದುಕೊಳ್ಳುವ ಸಮಯ ಬಂದಿದೆ. ನೀರಿಗೆ ಎಲ್ಲಿಲ್ಲದ ಮಹತ್ವ. ಹನಿ ನೀರು ಅಮೂಲ್ಯ ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ.
–ಹೌದು, ಇದು ಸತ್ಯ. ನಂಬಲೇ ಬೇಕು. ಇಂಥಹ ಪರಿಸ್ಥಿತಿ ರಾಜನಸ್ಥಾನದಲ್ಲಿ ಎದುರಾಗಿದೆ. ಅದರಲ್ಲೂ ತಾಪಮಾನ ದಿನೇ ದಿನೇ ಹೆಚ್ಚುತ್ತಲೇ ಸಾಗಿದ್ದು, ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಬಿಸಿಗಾಳಿಗೆ ಜನ ತತ್ತರಿಸಿದ್ದಾರೆ. ಹನಿ ನೀರಿಗೂ ಪರದಾಡುವ ಸ್ಥಿತಿಯಿಂದಾಗಿ ಜನರು ನೀರು ಸಂಗ್ರಹಿಸಿರುವ ಡ್ರಮ್‌ಗಳಿಗೆ ಬೀಗ ಹಾಕಿ ಕಾವಲು ಕಾಯ್ದುಕೊಳ್ಳುತ್ತಿದ್ದಾರೆ!
ಪಂಚಾಯ್ತಿ, ನಗರಸಭೆ, ಪುರಸಭೆ ಆಡಳಿತಗಳಿಂದ 10 ದಿನಗಳಿಗೊಮ್ಮೆ ಪೂರೈಕೆಯಾಗುವ ನೀರನ್ನು ಡ್ರಮ್‌ಗಳಲ್ಲಿ ಸಂಗ್ರಹಿಸಿ ಬೀಗ ಹಾಕಿಟ್ಟುಕೊಳ್ಳುತ್ತಿದ್ದಾರೆ ಹುರ್ದಾ ಪಂಚಾಯ್ತಿಯ ಪರಸರಾಂಪುರ ಗ್ರಾಮಸ್ಥರು.
ಈ ಗ್ರಾಮಕ್ಕೆ ಟ್ಯಾಂಕರ್‌ನಲ್ಲಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅದೂ 10 ದಿನಗಳಿಗೊಮ್ಮೆ.
‘ಗ್ರಾಮದಲ್ಲಿ ನೀರನ ಸಮಸ್ಯೆ ತೀವ್ರವಾಗಿದ್ದು, 10 ದಿನಗಳಿಗೊಮ್ಮೆ ನೀರು ಬರುತ್ತದೆ. ಇಂದು ನೀರು ಸಿಕ್ಕರೆ ಮತ್ತೆ 10 ದಿನ ಕಾಯಬೇಕು. ಆದ್ದರಿಂದ ಗ್ರಾಮದ ಬಹುತೇಕ ಜನರು ನೀರನ್ನು ಡ್ರಮ್‌ಗಳಲ್ಲಿ ಸಂಗ್ರಹಿಸಿ ಡ್ರಮ್‌ಗಳಿಗೆ ಬೀಗ ಹಾಕಿಟ್ಟು ಕಾಯ್ದುಕೊಳ್ಳುತ್ತಿದ್ದಾರೆ. ನೀರಿಗೆ ಚಿನ್ನ ಮತ್ತು ಬೆಳ್ಳಿಯಷ್ಟೇ ಬೆಲೆ ಬಂದಿದೆ’ ಎನ್ನುತ್ತಾರೆ ಗ್ರಾಮದ ಲಾಲಿ ದೇವಿ.
‘ನೀರನ್ನು ಬೀಗ ಹಾಕಿ ಇಡಲೇಬೇಕು. ಇಲ್ಲದಿದ್ದರೆ ಬೇರೆಯವರು ಕದ್ದೊಯ್ಯುತ್ತಾರೆ. ನಮ್ಮ ಮಕ್ಕಳಿಗೆ ನೀರನ್ನು ಎಲ್ಲಿಂದ ತಂದುಕೊಡುವುದು’ ಎಂದು ಪ್ರಶ್ನಿಸುತ್ತಾರೆ ಗಾರ್ಸಿಯಾ ದೇವಿ.
ಈ ಪ್ರದೇಶದಲ್ಲಿ ನೀರಿಗೆ ತೀವ್ರ ಕೊರತೆ ಇದೆ. ಶೀಘ್ರದಲ್ಲೇ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭಟ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಈ ಗ್ರಾಮದ ಸಮೀಪ ಗಣಿಗಾರಿಕೆ ನಡೆಯುತ್ತಿದ್ದು, ಅಂತರ್ಜಲಮಟ್ಟ ತೀವ್ರ ಕುಸಿಯಲು ಕಾರಣ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.