ADVERTISEMENT

ಭೀಮಾ ಕೋರೆಗಾಂವ್‌ ಪ್ರಕರಣ: ಗೊನ್ಸಲ್ವೆಸ್‌, ಫೆರಾರೆಗೆ ಸುಪ್ರೀಂ ಕೋರ್ಟ್‌ ಜಾಮೀನು

ಅಶಿಶ್‌ ತ್ರಿಪಾಠಿ
Published 28 ಜುಲೈ 2023, 10:11 IST
Last Updated 28 ಜುಲೈ 2023, 10:11 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಭೀಮಾ ಕೋರೆಗಾಂವ್‌ ಪ್ರಕರಣ ಸಂಬಂಧ ಕಳೆದ 5 ವರ್ಷಗಳಿಂದ ಬಂಧನದಲ್ಲಿದ್ದ ಇಬ್ಬರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ವರ್ನಾ‌ನ್ ಗೊನ್ಸಲ್ವೆಸ್‌ ಹಾಗೂ ಅರುಣ್‌ ಫೆರಾರೆ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಅನುರಾಧ ಬೋಸ್ ಹಾಗೂ ಸುಧಾಂಶು ಧುಲಿಯಾ ಅವರಿದ್ದ ಪೀಠ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.

ADVERTISEMENT

ಇವರಿಬ್ಬರು ಮಹಾರಾಷ್ಟ್ರ ತೊರೆಯಕೂಡದು ಹಾಗೂ ಪಾಸ್‌ಪೋರ್ಟ್‌ಗಳನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಸೂಚನೆ ನೀಡಿದೆ.

ಇಬ್ಬರಿಗೂ ತಲಾ ಒಂದು ಮೊಬೈಲ್‌ ಬಳಕೆ ಮಾಡಲು ಅನುಮತಿ ನೀಡಲಾಗಿದ್ದು, ಅವರು ಉಳಿಯುವ ವಿಳಾಸದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಬೇಕು. ಇಬ್ಬರ ಫೋನ್‌ ಲೋಕೇಷನ್‌ ನಿತ್ಯವೂ ಆನ್ ಇರಬೇಕು, ವಾರಕ್ಕೊಮ್ಮೆ ತನಿಖಾಧಿಕಾರಿಗೆ ವರದಿ ನೀಡಬೇಕು ಎಂದು ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್‌ ಹೇಳಿದೆ.

ಏನಿದು ಪ್ರಕರಣ?

2017ರ ಡಿಸೆಂಬರ್ 31 ರಂದು ಪುಣೆಯಲ್ಲಿ ಏಳ್ಗಾರ್‌ ಪರಿಷತ್‌ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಮಾವೋವಾದಿಗಳು ಹಣಕಾಸಿನ ಬೆಂಬಲ ನೀಡಿದ್ದಾರೆ ಎಂದು ಪುಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಅಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಭಾಷಣದಿಂದ ಉದ್ದೀಪನಗೊಂಡು ಮರುದಿನ ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರ ನಡೆದಿತ್ತು ಎಂದು ಪೊಲೀಸರು ಆಪಾದಿಸಿದ್ದರು.

ಆರೋಪಿಗಳ ಮೇಲೆ ಯುಎಪಿಎ ಕಾಯ್ದೆಯಡಿ ದೂರು ದಾಖಲಿಸಲಾಗಿತ್ತು.

2021ರ ಡಿಸೆಂಬರ್‌ನಲ್ಲಿ ಇವರಿಬ್ಬರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.