ADVERTISEMENT

ವೆಡ್ಡಿಂಗ್ ಫ್ರಂ ಹೋಂ: ಲಾಕ್‌ಡೌನ್ ಮಧ್ಯೆ ಡಿಜಿಟಲ್ ಮದುವೆ!

ಪಿಟಿಐ
Published 29 ಏಪ್ರಿಲ್ 2020, 15:06 IST
Last Updated 29 ಏಪ್ರಿಲ್ 2020, 15:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:‘ಜಬ್‌ ಲಡ್ಕ–ಲಡ್ಕಿ ಹೋ ರಾಜಿ ತೋ ಕ್ಯಾ ಕರೇಗಾ ಖಾಜಿ’ (ಹುಡುಗ–ಹುಡುಗಿ ಒಪ್ಪಿದ್ಮೇಲೆ ನ್ಯಾಯಾಧೀಶ ಏನು ಮಾಡಲು ಸಾಧ್ಯ) ಎನ್ನುವುದು ಜನಪ್ರಿಯ ಗಾದೆ. ಬಹುಶಃ ಈ ಗಾದೆ ಈಗ ತುಸು ಬದಲಾಗಹುದೇನೋ? ವಧು–ವರ ಒಪ್ಪಿದ ಮೇಲೆ ಲಾಕ್‌ಡೌನ್‌ಗೇನು ಕೆಲಸ ಅಂತ.

–ಹೌದು. ಲಾಕ್‌ಡೌನ್ ಮಧ್ಯೆ ಅನೇಕ ಜೋಡಿಗಳು ಡಿಜಿಟಲ್ ರೂಪದಲ್ಲಿ ಮದುವೆಯಾಗುತ್ತಿವೆ. ಅದ್ದೂರಿ ಮದುವೆಗಳೀಗ ಅಂತರ್ಜಾಲದ ಮೊರೆ ಹೊಕ್ಕಿವೆ.

ಮೂರೂವರೆ ವರ್ಷದಿಂದ ಪರಿಚಯವಿರುವ ಅವಿನಾಶ್ ಮತ್ತು ಕೃತಿ ಮಧ್ಯಪ್ರದೇಶದ ಸತ್ನಾದಲ್ಲಿ ಅದ್ದೂರಿಯಾಗಿ ವಿವಾಹವಾಗಬೇಕೆಂದು ಯೋಜನೆ ರೂಪಿಸಿದ್ದರು. ಮದುವೆಗೆ 8 ಸಾವಿರ ಜನರಿಗೆ ಆಮಂತ್ರಣ ನೀಡಬೇಕೆಂದೂ ಅಂದುಕೊಂಡಿದ್ದರು. ಆದರೆ, ದೇಶಾದ್ಯಂತ ಲಾಕ್‌ಡೌನ್ ಇರುವ ಕಾರಣ, ತಮ್ಮ ಅದ್ದೂರಿ ಮದುವೆ ಯೋಜನೆ ಕೈಬಿಟ್ಟ ಈ ಜೋಡಿ ಅಂತರ್ಜಾಲದಲ್ಲಿ ಈಗ ಡಿಜಿಟಲ್ ರೂಪದಲ್ಲಿ ಮದುವೆಯಾಗಿದ್ದಾರೆ.

ADVERTISEMENT

ಈ ಜೋಡಿ, ವಿಡಿಯೊ ಕರೆ ಮೂಲಕ ಮದುವೆಯ ವಿಧಿ–ವಿಧಾನಗಳನ್ನು ಪೂರೈಸಿದರು. ಬರೇಲಿಯಲ್ಲಿದ್ದ ವಧು ಕೀರ್ತಿ, ಮುಂಬೈನಲ್ಲಿದ್ದ ವರ ಅವಿನಾಶ್ ಅವರ ಮದುವೆಯ ಕಾರ್ಯಗಳನ್ನು ರಾಯ್ಪರದಲ್ಲಿದ್ದ ಪುರೋಹಿತರು ನಡೆಸಿಕೊಟ್ಟರು. ದೆಹಲಿಯಲ್ಲಿ ಕಲಾವಿದ ಮಂಗಳವಾದ್ಯ ನುಡಿಸಿದರು. ವಧು–ವರರ ಕುಟುಂಬದ ಸದಸ್ಯರು ಮತ್ತು ಸಂಬಂಧಿಗಳು ತಮ್ಮ ತಮ್ಮ ಮನೆಗಳಿಂದಲೇ ಆನ್‌ಲೈನ್ ಮೂಲಕ ಅಶೀರ್ವದಿಸಿದರು!

‘ಏನೇ ಆಗಲಿ ನಾವು ಏಪ್ರಿಲ್‌ನಲ್ಲೇ ಮದುವೆಯಾಗಬೇಕೆಂದು ನಿರ್ಧರಿಸಿದ್ದೆವು. ಲಾಕ್‌ಡೌನ್ ಕಾರಣ ವರ್ಚುವಲ್ ವಿವಾಹದ ಮೊರೆ ಹೋದೆವು. ಮೊದಲು ಇಬ್ಬರ ಮನೆಯಲ್ಲೂ ಒಪ್ಪಿಗೆ ಸಿಗಲಿಲ್ಲ. ಆದರೆ, ಯಾವುದೇ ವಿಧಿ–ವಿಧಾನ ಕೈಬಿಡುವುದಿಲ್ಲವೆಂದ ಮೇಲೆ ಒಪ್ಪಿ ಹರಸಿದರು’ ಎನ್ನುತ್ತಾರೆ ಅವಿನಾಶ್.

ಶಾದಿ ಡಾಟ್ ಕಾಮ್ ಆಯೋಜಿಸಿದ್ದ ಈ ಡಿಜಿಟಲ್ ಮದುವೆಯಲ್ಲಿ 10 ದೇಶಗಳ ಸುಮಾರು 200 ಮಂದಿ ಪಾಲ್ಗೊಂಡಿದ್ದರು.

ಇದೇ ರೀತಿ ಆನ್‌ಲೈನ್‌ನಲ್ಲಿ ಮದುವೆಯಾದ ಸುಷೇನ್ ಮತ್ತು ಕೀರ್ತಿ, ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದಾರೆ. ಇವರ ಮದುವೆಯನ್ನು 16 ಸಾವಿರಕ್ಕೂ ಮಂದಿ ಆನ್‌ಲೈನ್‌ನಲ್ಲಿ ವೀಕ್ಷಿಸಿದ್ದಾರಂತೆ!

‘ವೆಡ್ಡಿಂಗ್ ಫ್ರಂ ಹೋಂ ಎನ್ನುವುದು ಈಗ ಜನಪ್ರಿಯವಾಗುತ್ತಿದ್ದು, ಅಂತರ್ಜಾಲ ಸೌಲಭ್ಯವೊಂದಿದ್ದರೆ ಮನೆಯಿಂದಲೇ ಮದುವೆಯಾಗಬಹುದು. ಮುಹೂರ್ತದ ಬಗ್ಗೆ ನಂಬಿಕೆ ಇರುವ ಭಾರತೀಯರಿಗೆ ಅದೇ ಮುಹೂರ್ತದಲ್ಲಿ ಮದುವೆ ನಡೆಸಿಕೊಡುತ್ತೇವೆ’ ಎನ್ನುತ್ತಾರೆ ಶಾದಿ ಡಾಟ್ ಕಾಮ್‌ನ ಮಾರ್ಕೆಂಟಿಗ್ ನಿರ್ದೇಶಕ ಆದಿಶ್ ಜವೇರಿ.

ಕೋವಿಡ್‌–19ನ ಲಾಕ್‌ಡೌನ್ ಕಾರಣದಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ವ್ಯಾಪಾರ–ವಹಿವಾಟುಗಳು ಅಸ್ತವ್ಯಸ್ತಗೊಂಡಿವೆ. ಅದರಲ್ಲೂ ನೂರಾರು ಕೋಟಿಗಳ ಮದುವೆ ಉದ್ಯಮವೂ ಸ್ಥಗಿತಗೊಂಡಿವೆ. ಜ್ಯೋತಿಷ್ಯದ ಮೂಲಕ ಅನೇಕ ತಿಂಗಳುಗಳ ಮುನ್ನವೇ ಮದುವೆ ದಿನಾಂಕ ಗೊತ್ತುಪಡಿಸಿಕೊಂಡಿದ್ದ ಅನೇಕ ಜೋಡಿಗಳ ಮದುವೆ ಕಾರ್ಯಗಳು ನಡೆಯದಂತಾಗಿವೆ.

ಭಾರತದಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಮದುವೆ ವಿಷಯ ಪ್ರತಿಷ್ಠಿತ ಸಂಗತಿಯಾಗಿದ್ದು, ಇದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ದರಿರುತ್ತಾರೆ. ಅದರಲ್ಲೂ ಸೆಲೆಬ್ರಿಟಗಳ ಮದುವೆಗಳಾದರೆ ಈ ಮದುವೆ ಮತ್ತಷ್ಟು ಅದ್ದೂರಿಯಾಗಿ ನಡೆಯುತ್ತದೆ ಎನ್ನುತ್ತದೆ ಒಂದು ಅಧ್ಯಯನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.