ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ಕ್ರಿಕೆಟಿಗ ಮನೋಜ್ ತಿವಾರಿ ಸೇರಿ ಕಣದಲ್ಲಿ ಘಟಾನುಘಟಿಗಳು

ಏಜೆನ್ಸೀಸ್
Published 10 ಏಪ್ರಿಲ್ 2021, 3:11 IST
Last Updated 10 ಏಪ್ರಿಲ್ 2021, 3:11 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆಗೆ ಇಂದು 4ನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಪ್ತ ಪಾರ್ಥಾ ಚಟರ್ಜಿ ಮತ್ತಿತರ ಘಟಾನುಘಟಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.

ಉತ್ತರ ಬಂಗಾಳದ ಕೂಚ್ ಬೆಹಾರ್ ಮತ್ತು ಅಲಿಪುರ್ದುರ್, ದಕ್ಷಿಣದ 24 ಪರಗಣ, ಹೌರಾ ಮತ್ತು ಹೂಗ್ಲಿ ಜಿಲ್ಲೆಗಳ 1 ಕೋಟಿಗೂ ಹೆಚ್ಚು ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸುತ್ತಿದ್ದಾರೆ. 44 ಕ್ಷೇತ್ರಗಳಲ್ಲಿ ಕಣದಲ್ಲಿರುವ 370 ಅಭ್ಯರ್ಥಿಗಳ ಪೈಕಿ ಚಿತ್ರತಾರೆಯರು, ಸಂಸದರು, ಕ್ರಿಕೆಟರ್‌ ಸೇರಿದಂತೆ ಘಟಾನುಘಟಿಗಳಿದ್ದಾರೆ.

ಸುಮಾರು 16,000 ಮತಗಟ್ಟೆಗಳಿಗೆ ಚುನಾವಣಾ ಆಯೋಗವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸುಮಾರು 80,000 ಸಿಬ್ಬಂದಿಯನ್ನು ನೇಮಿಸಿದೆ.

ಈ ಹಂತದ ಚುನಾವಣೆಯ ಪ್ರಮುಖ ಹಣಾಹಣಿ ಇರುವುದು ಟೋಲಿಗಂಗೆ ಕ್ಷೇತ್ರದಲ್ಲಿ. ಬಂಗಾಳಿ ಚಲನಚಿತ್ರೋದ್ಯಮದ ಹೃದಯ ಎಂದೇ ಕರೆಯಲ್ಪಡುವ ಕೋಲ್ಕತ್ತಾದ ದಕ್ಷಿಣ ಭಾಗದ ಟೋಲಿಗಂಗೆಯಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರು ಹಾಲಿ ಶಾಸಕ ಅರುಪ್ ಬಿಸ್ವಾಸ್ ಅವರನ್ನು ಎದುರಿಸುತ್ತಿದ್ದಾರೆ.

ADVERTISEMENT

ಇದನ್ನೂ ಓದಿ.. ಕೇಂದ್ರೀಯ ಪಡೆಗಳ ವಿರುದ್ಧ ಹೇಳಿಕೆ: ಮಮತಾ ಬ್ಯಾನರ್ಜಿಗೆ ಎರಡನೇ ನೋಟಿಸ್‌‌

ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವ ಪಾರ್ಥಾ ಚಟರ್ಜಿ ಅವರು ಸತತ ನಾಲ್ಕನೇ ಬಾರಿಗೆ ಬೆಹಲಾ ಪಶ್ಚಿಮ ಕ್ಷೇತ್ರದಲ್ಲಿ ಆಯ್ಕೆ ಬಯಸಿದ್ದಾರೆ. ಇಲ್ಲಿ ಅವರು, ಬಿಜೆಪಿಯ ಅಭ್ಯರ್ಥಿ ಚಲನಚಿತ್ರ ನಟಿ ಶ್ರಬಂತಿ ಚಟರ್ಜಿಯನ್ನು ಎದುರಿಸುತ್ತಿದ್ದಾರೆ.

ಇನ್ನೊಬ್ಬ ನಟಿ ಪಾಯೆಲ್ ಸರ್ಕಾರ್ ಅವರು ಬೆಹಲಾ ಪೂರ್ವ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕ್ರಿಕೆಟಿಗ ಮನೋಜ್ ತಿವಾರಿ ಹೌರಾ ನಾರ್ತ್‌ನಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಮಮತಾ ಬ್ಯಾನರ್ಜಿ ಕ್ಯಾಬಿನೆಟ್‌ನ ಮಾಜಿ ಮಂತ್ರಿ, ತೃಣಮೂಲ ಕಾಂಗ್ರೆಸ್ ತೊರೆದಿರುವ ರಾಜೀವ್ ಬ್ಯಾನರ್ಜಿ ಅವರು ಹೌರಾ ಜಿಲ್ಲೆಯ ಡೊಮ್‌ಜೂರ್‌ನಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ಬಿಜೆಪಿ ಸಂಸದರಾದ ಲಾಕೆಟ್ ಚಟರ್ಜಿ ಮತ್ತು ನಿಸಿತ್ ಪ್ರಮಾಣಿಕ್ ಕ್ರಮವಾಗಿ ಹೂಗ್ಲಿ ಮತ್ತು ಕೂಚ್ ಬೆಹಾರ್ ಜಿಲ್ಲೆಗಳ ಚುಚುರಾ ಮತ್ತು ದಿನ್ಹಾಟಾ ಸ್ಥಾನಗಳಿಂದ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.