ADVERTISEMENT

ಡಿಜಿಟಲ್ ಸುದ್ದಿ ವೇದಿಕೆಗಳ ಜೊತೆ ಅಗ್ರಿಗೇಟರ್‌ ಆದಾಯ ಹಂಚಿಕೆಯಾಗಲಿ:ಅಪೂರ್ವ ಚಂದ್ರ

ಪಿಟಿಐ
Published 21 ಜನವರಿ 2023, 16:02 IST
Last Updated 21 ಜನವರಿ 2023, 16:02 IST
   

ನವದೆಹಲಿ: ಒರಿಜನಲ್ ಕಂಟೆಂಟ್‌ಗಳನ್ನು ಸೃಷ್ಟಿಸುವ ಡಿಜಿಟಲ್ ಸುದ್ದಿ ತಾಣಗಳ ಜೊತೆ ದೊಡ್ಡ ಟೆಕ್ ಕಂಪನಿಗಳು ತಮ್ಮ ಆದಾಯದ ಒಂದು ಭಾಗವನ್ನು ಹಂಚಿಕೊಳ್ಳಬೇಕು ಎಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಒತ್ತಿ ಹೇಳಿದ್ದಾರೆ.

ಶುಕ್ರವಾರ ಡಿಜಿಟಲ್ ಸುದ್ದಿ ಪ್ರಕಾಶಕರ ಸಂಘಗಳ (ಡಿಎನ್‌ಪಿಎ) ಸಮ್ಮೇಳನಕ್ಕೆ ಕಳುಹಿಸಿದ ಸಂದೇಶದಲ್ಲಿ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಮತ್ತು ಯುರೋಪಿಯನ್ ಒಕ್ಳೂಟಗಳಲ್ಲಿ ಈಗಾಗಲೇ ಕಾಯ್ದೆಗಳ ಮೂಲಕ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಸುದ್ದಿ ಸಂಗ್ರಹಕಾರರಾಗಿ(ಅಗ್ರಿಗೇಟರ್ಸ್) ಕಾರ್ಯನಿರ್ವಹಿಸುವ ದೊಡ್ಡ ಟೆಕ್ ಕಂಪನಿಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ನಡುವೆ ಆದಾಯದ ನ್ಯಾಯಯುತ ವಿಭಜನೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಿ ನಿಯಮಗಳನ್ನು ಬಲಪಡಿಸಲಾಗಿದೆ ಎಂದು ಹೇಳಿದ್ದಾರೆ.

‘ಸುದ್ದಿ ಪ್ರಕಟಣೆ ಉದ್ಯಮದ ಬೆಳವಣಿಗೆಗೆ, ಒರಿಜನಲ್ ಕಂಟೆಂಟ್ ಸೃಷ್ಟಿಸುವ ಎಲ್ಲ ಪ್ರಕಾಶಕರ ಡಿಜಿಟಲ್ ಸುದ್ದಿ ವೇದಿಕೆಗಳು, ಕಂಟೆಂಟ್‌ಗಳ ಸಂಗ್ರಹಕಾರರಾಗಿ ಕಾರ್ಯನಿರ್ವಹಿಸುವ ದೊಡ್ಡ ಟೆಕ್ ಪ್ಲಾಟ್‌ಫಾರ್ಮ್‌ಗಳಿಂದ ಆದಾಯದ ನ್ಯಾಯಯುತ ಪಾಲನ್ನು ಪಡೆಯುವುದು ಮುಖ್ಯವಾಗಿದೆ’ ಎಂದು ಡಿಎನ್‌ಪಿಎ ಸಮ್ಮೇಳನಕ್ಕೆ ಕಳುಹಿಸಿದ ಸಂದೇಶದಲ್ಲಿ ಹೇಳಿದ್ದಾರೆ.

ADVERTISEMENT

ಕೋವಿಡ್ ನಂತರ, ಡಿಜಿಟಲ್ ಸುದ್ದಿ ಉದ್ಯಮ ಮಾತ್ರವಲ್ಲದೆ ಮುದ್ರಣ ಮಾಧ್ಯಮವೂ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಚಂದ್ರ ಹೇಳಿದರು.

‘ಸಾಂಪ್ರದಾಯಿಕ ಸುದ್ದಿ ಉದ್ಯಮವು ಋಣಾತ್ಮಕವಾಗಿ ಪರಿಣಾಮ ಬೀರುವುದನ್ನು ಮುಂದುವರೆಸಿದರೆ, ನಮ್ಮ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮದ ಭವಿಷ್ಯಕ್ಕೂ ಹೊಡೆತ ಬೀಳುತ್ತದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ, ಇದು ಪತ್ರಿಕೋದ್ಯಮ ಮತ್ತು ವಿಶ್ವಾಸಾರ್ಹ ಕಂಟೆಂಟ್‌ಗಳ ಪ್ರಶ್ನೆಯಾಗಿದೆ’ಎಂದು ಅವರು ಹೇಳಿದ್ದಾರೆ.

ಸಾಂಪ್ರದಾಯಿಕ ಸುದ್ದಿ ಉದ್ಯಮವು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಇತಿಹಾಸವನ್ನು ಹೊಂದಿದೆ ಎಂದು ಚಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.