ADVERTISEMENT

Delhi Elections 205 | ದೆಹಲಿಯಲ್ಲಿ ಎಎಪಿ ವಿರೋಧಿ ಅಲೆ: ಅಮಿತ್‌ ಶಾ

ಪಿಟಿಐ
Published 1 ಫೆಬ್ರುವರಿ 2025, 15:38 IST
Last Updated 1 ಫೆಬ್ರುವರಿ 2025, 15:38 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ಎಎಪಿಯು ಭ್ರಷ್ಟಾಚಾರದಲ್ಲಿ ಮುಳುಗಿದೆ ಮತ್ತು ಅಕ್ರಮ ವಲಸಿಗರಿಗೆ ಆಶ್ರಯ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಆರೋಪಿಸಿದರು.

ದೆಹಲಿಯಲ್ಲಿ ಹಗರಣ, ವಂಚನೆ ಮತ್ತು ಅಕ್ರಮ ವಲಸಿಗರಿಗೆ ಆಶ್ರಯ ನೀಡುತ್ತಿರುವ ಎಎಪಿ ನೇತೃತ್ವದ ಸರ್ಕಾರದ ವಿರುದ್ಧದ ಅಲೆ ಎದ್ದಿದೆ ಎಂದು ಅವರು ಹೇಳಿದರು.

ಮುಸ್ತಫಾಬಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ವಿರುದ್ಧದ ಅಲೆ ಬಗ್ಗೆ ಪಕ್ಷದ ನಾಯಕರಿಗೆ ಅರಿವಿದೆ ಎಂದು ಹೇಳಿದರು.

ADVERTISEMENT

ಹಗರಣ, ವಿಪತ್ತು, ಮಾಫಿಯಾವನ್ನು ಬುಡಸಮೇತ ಕಿತ್ತು ಹಾಕುವ ಸಮಯ ಬಂದಿದೆ. ದೆಹಲಿ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಚಲಾಯಿಸಿ ಎಂದು ಅವರು ಮನವಿ ಮಾಡಿದರು.

ಬಿಜೆಪಿಗರಿಂದ ಗೂಂಡಾಗಿರಿ: ಕೇಜ್ರಿವಾಲ್‌

ರೋಹಿಣಿ ಪ್ರದೇಶದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರ‍್ಯಾಲಿ ಸಂದರ್ಭದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಎಎಪಿ ಶಾಸಕ ಮಹೇಂದ್ರ ಗೋಯಲ್‌ ಶನಿವಾರ ದೂರಿದ್ದಾರೆ.

ಈ ಬಗ್ಗೆ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ‘ಬಿಜೆಪಿಯು ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಕಾರಣ ‘ಗೂಂಡಾಗಿರಿ’ ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ‘ಗೋಯಲ್‌ ಅವರು ಸ್ಥಳೀಯರೊಂದಿಗೆ ಇತ್ತೀಚೆಗೆ ಮೃತಪಟ್ಟ ವ್ಯಕ್ತಿಯ ಹಳೆಯ ವಿಡಿಯೊ ಬಗ್ಗೆ ಮಾತನಾಡುತ್ತಿದ್ದರು. ಇದನ್ನು ತಿಳಿದ ಕುಟುಂಬಸ್ಥರು ಅವರ ಬಳಿ ಬಂದು ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಎರಡೂ ಕಡೆಯವರ ಮಧ್ಯೆ ವಾಗ್ವಾದ ನಡೆದಿದೆ. ನಂತರ ಅದು ವಿಕೋಪಕ್ಕೆ ತಿರುಗಿ ಬಡಿದಾಡಿಕೊಂಡಿದ್ದಾರೆ. ಎರಡೂ ಕಡೆಯಿಂದ ದೂರು ಪ್ರತಿದೂರು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಗೋಯಲ್‌ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವೈದ್ಯಕೀಯ ವರದಿ ಉಲ್ಲೇಖಿಸಿ ಅವರು ತಿಳಿಸಿದ್ದಾರೆ. ಆದರೆ ರಿಠಾಲಾ ಕ್ಷೇತ್ರದಲ್ಲಿ ನಡೆದ ರ‍್ಯಾಲಿಗೆ ಗೋಯಲ್‌ ಅವರು ಗಾಲಿ ಕುರ್ಚಿಯಲ್ಲಿ ಬಂದಿದ್ದರು. ತಲೆ ಮತ್ತು ದೇಹದ ಇತರ ಭಾಗಗಳಿಗೆ ಬ್ಯಾಂಡೇಜ್‌ ಹಾಕಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.