ನವದೆಹಲಿ: ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯು ‘ಭಾರಿ ವೈಫಲ್ಯ’ ಕಂಡಿದೆ ಎಂದು ಕಾಂಗ್ರೆಸ್ ಶುಕ್ರವಾರ ಟೀಕಿಸಿದೆ.
‘ಸರ್ವಪಕ್ಷಗಳ ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳುಹಿಸುವ ಮೂಲಕ ಸರ್ಕಾರ ಸಾಧಿಸಿದ್ದಾದರು ಏನು? ಈ ನಡೆಯಿಂದ ದೇಶಕ್ಕಾಗಿರುವ ಲಾಭವೇನು’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಮೋದಿ ನೇತೃತ್ವದ ಸರ್ಕಾರ ಅನುಸರಿಸುತ್ತಿರುವ ‘ವಿಫಲ ವಿದೇಶಾಂಗ ನೀತಿ’ ಫಲವಾಗಿ ಜಾಗತಿಕ ಮಟ್ಟದಲ್ಲಿ ಭಾರತ ಅವಮಾನಕ್ಕೆ ಒಳಗಾಗಿದೆ’ ಎಂದೂ ಆರೋಪಿಸಿದೆ.
‘ಜಿ–7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಭಾರತಕ್ಕೆ ಕೆನಡಾ ಆಹ್ವಾನ ನೀಡಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಏರ್ಪಟ್ಟ ಕದನ ವಿರಾಮದ ಶ್ರೇಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತ ಏಕಾಂಗಿಯಾಗಿದೆ. ನಮ್ಮ ಮಿತ್ರ ದೇಶಗಳು ಕೂಡ ನಮ್ಮಿಂದ ದೂರವಾಗುತ್ತಿವೆ’ ಎಂದು ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಹೇಳಿದ್ದಾರೆ.
ಇಂದಿರಾ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನೇಕ ದೊಡ್ಡ ರಾಷ್ಟ್ರಗಳನ್ನು ಈಗ ಭಾರತದ ಶತ್ರು ಪಾಳಯದಲ್ಲಿ ಕಾಣಬಹುದು. ಪಾಕಿಸ್ತಾನವನ್ನು ಭಾರತ ಸಂಪೂರ್ಣವಾಗಿ ಕಡೆಗಣಿಸಿದೆ. ಆದರೆ, ಈಗ ಆ ರಾಷ್ಟ್ರ ನಾಯಕನಂತೆ ವರ್ತಿಸುತ್ತಿದೆ’ ಎಂದು ಹೇಳಿದರು.
‘ಮೋದಿ ಅವರು 11 ವರ್ಷಗಳಿಂದ ಅಧಿಕಾರದಲ್ಲಿದ್ದು, 90ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿದ್ದಾರೆ. ಸರ್ಕಾರದ ವಿಫಲ ವಿದೇಶಾಂಗ ನೀತಿಯಿಂದಾಗಿ ನಮಗೆ ಏನೂ ಲಾಭವಾಗಿಲ್ಲ’ ಎಂದು ಆರೋಪಿಸಿದರು.
ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರು ಎಲ್ಲಿದ್ದಾರೆ? ಅವರನ್ನು ಬಂಧಿಸುವವರೆಗೆ ಅಂದಿನ ದಾಳಿಯಲ್ಲಿ ಹತರಾದವರ ಕುಟುಂಬಗಳಿಗೆ ನ್ಯಾಯ ಸಿಗುವುದಿಲ್ಲಸುಪ್ರಿಯಾ ಶ್ರೀನೇತ್ ಕಾಂಗ್ರೆಸ್ ವಕ್ತಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.