ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: 38 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ?

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ 24ಕ್ಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 19:30 IST
Last Updated 19 ಸೆಪ್ಟೆಂಬರ್ 2025, 19:30 IST
.
.   

ಪಟ್ನಾ: ಬಿಹಾರ ವಿಧಾನಸಭೆಗೆ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವ ನಿರೀಕ್ಷೆಯಿದ್ದು, ಸೆ. 24ರಂದು ಪಟ್ನಾದಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆ ನಡೆಯಲಿದೆ.

ಪಕ್ಷದ ಪ್ರಧಾನ ಕಚೇರಿ ಸದಾಕತ್ ಆಶ್ರಮದಲ್ಲಿ ನಡೆಯುವ ಸಭೆಯಲ್ಲಿ 38 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಿಹಾರದಲ್ಲಿ 1990ರಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಪ್ರಸಕ್ತ ವಾತಾವರಣಷ್ಟೇ ಕಾಂಗ್ರೆಸ್‌ಗೆ ಆಶಾದಾಯಕವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಮತದಾರ ಅಧಿಕಾರ ಯಾತ್ರೆಯೇ ಇದಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಈ ಹಿಂದೆ 2020ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌, 19 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಮುಂಬರುವ ಚುನಾವಣೆಯಲ್ಲಿ 76 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಉದ್ದೇಶಿಸಿದ್ದು, ಬುಧವಾರ ನಡೆಯಲಿರುವ ಸಿಡಬ್ಲ್ಯುಸಿ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲಿದೆ.

‘ಪಕ್ಷದ ಪರಿಸ್ಥಿತಿಯು ಆಶಾದಾಯಕವಾಗಿರುವುದರಿಂದ ಗೆಲ್ಲುವ ಕ್ಷೇತ್ರಗಳನ್ನಷ್ಟೇ ಪಡೆಯುವ ಯತ್ನ ನಡೆದಿದೆ. ಕ್ಷೇತ್ರ ಹಾಗೂ ಸೀಟು ಹಂಚಿಕೆಯಲ್ಲಿ ರಾಜಿ ಮಾಡಿಕೊಳ್ಳಲು ಮಿತ್ರಪಕ್ಷಗಳು ಮುಂದಾಗಬೇಕು’ ಎಂದು ಬಿಹಾರ ಕಾಂಗ್ರೆಸ್‌ನ ಉಸ್ತುವಾರಿ ಕೃಷ್ಣ ಅಲ್ಲವಾರು ತಿಳಿಸಿದರು.

ಮುಕೇಶ್‌ ಸಾಹ್ನಿ ನೇತೃತ್ವದ ವಿಐಪಿಯು (ವಿಕಾಸ್‌– ಶೀಲ್ ಇನ್ಸಾನ್ ಪಾರ್ಟಿ) ಮಹಾಘಟಬಂಧನ್‌ನಲ್ಲಿದ್ದು, ಎಡಪಕ್ಷಗಳು ಸಹ ಈ ಹಿಂದಿನ ಚುನಾವಣೆಗಿಂತ ಹೆಚ್ಚಿನ ಸ್ಥಾನದ ಅಪೇಕ್ಷೆಯಲ್ಲಿವೆ.

ಪಟ್ನಾದಲ್ಲಿ ಸ್ವಾತಂತ್ರ್ಯ ನಂತರ ಮೊದಲ ಸಿಡಬ್ಲ್ಯುಸಿ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಮೊದಲ ಬಾರಿಗೆ ಪಟ್ನಾದಲ್ಲಿ ಸಿಡಬ್ಲ್ಯುಸಿ ನಡೆಯಲಿದೆ. 1940ರಲ್ಲಿ ನಡೆದಿದ್ದೇ ಕೊನೆ. 85 ವರ್ಷಗಳ ನಂತರ ಬಿಹಾರದ ರಾಜಧಾನಿಯಲ್ಲಿ ನಡೆಯುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ಮಾಜಿ ಸ್ಪೀಕರ್‌ ಮೀರಾ ಕುಮಾರಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.