ADVERTISEMENT

ಉಪಚುನಾವಣೆ: ರಾಜಸ್ಥಾನದಲ್ಲಿ ಕಾಂಗ್ರೆಸ್‌, ಮಿಜೋರಾಂನಲ್ಲಿ ಎಮ್‌ಎನ್‌ಎಫ್‌ ಗೆಲುವು

ಪಿಟಿಐ
Published 14 ನವೆಂಬರ್ 2025, 11:21 IST
Last Updated 14 ನವೆಂಬರ್ 2025, 11:21 IST
   

ಜೈಪುರ: ರಾಜಸ್ಥಾನದ ಬರನ್ ಜಿಲ್ಲೆಯ ಅಂತಾ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಜೈನ್ ಭಾಯ 69,571 ಮತಗಳನ್ನು ಪಡೆದು ತಮ್ಮ ಹತ್ತಿರದ ಪ್ರತಿಸ್ಪರ್ಧಿ, ಬಿಜೆಪಿ ಅಭ್ಯರ್ಥಿ ಮೋರ್ಪಾಲ್ ಸುಮನ್ ಅವರ ವಿರುದ್ಧ 15,612 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಉಪಚುನಾವಣೆಯಲ್ಲಿ 53,959 ಮತಗಳನ್ನು ಪಡೆದುಕೊಂಡರು. ಭಾಯ ಅವರು ಮತ ಎಣಿಕೆ ಆರಂಭವಾದಾಗಿನಿಂದಲೂ ಮುನ್ನಡೆ ಹಿಡಿದಿಟ್ಟುಕೊಂಡಿದ್ದರು. ಉಪಚುನಾವಣೆಯಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದರು.

ಉಪಚುನಾವಣೆಗೆ ಕಾರಣವೇನು?

ಅಂತಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ಬಿಜೆಪಿಯ ಕನ್ವರ್ ಲಾಲ್ ಮೀನಾ ಕ್ರಿಮಿನಲ್ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾದ ಬಳಿಕ ಅವರನ್ನು ವಿಧಾಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಲಾಯಿತು. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಭಾಯ ಅವರನ್ನು ಕನ್ವರ್ ಲಾಲ್ ಮೀನಾ ಸೋಲಿಸಿದ್ದರು.

ADVERTISEMENT

ಚುನಾವಣೆ ಬಳಿಕ ಮಾತನಾಡಿದ ಭಾಯ, ಮತದಾರರ ಮನಸ್ಥಿತಿಯಲ್ಲಿನ ಬದಲಾವಣೆಯೇ ತಮ್ಮ ಗೆಲುವಿಗೆ ಕಾರಣ ಎಂದಿದ್ದಾರೆ. ‘ಕಳೆದ ಚುನಾವಣೆಯಲ್ಲಿ ಬಿಜೆಪಿಯ ಆಶ್ವಾಸನೆಗಳಿಂದ ಜನರು ದಾರಿ ತಪ್ಪಿದ್ದರು. ಆದರೆ ಈ ಬಾರಿ ಅವರು ನಮಗೆ ಆಶೀರ್ವದಿಸಿದ್ದಾರೆ’ ಎಂದು ಅವರು ಹೇಳಿದರು.

ಮಿಜೋರಾಂನಲ್ಲಿ ಗೆದ್ದ ಎಮ್‌ಎನ್‌ಎಫ್ ಅಭ್ಯರ್ಥಿ

ಮಿಜೋರಾಂನ ಡಂಪಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಅಲ್ಲಿನ ವಿರೋಧ ಪಕ್ಷವಾದ ಮಿಜೋ ನ್ಯಾಷನಲ್‌ ಫ್ರಂಟ್‌(ಎಮ್‌ಎನ್‌ಎಫ್‌) ನಾಯಕ ಹಾಗೂ ಮಾಜಿ ಸಚಿವ ಆರ್‌. ಲಾಲ್ತಾಂಗ್ಲಿಯಾನಾ ಅವರು 562 ಮತಗಳಿಂದ ಝೆಡ್‌ಪಿಎಮ್‌ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.