ತೇಜಸ್ವಿ ಯಾದವ್, ಒಳಚಿತ್ರದಲ್ಲಿ ನಿತೀಶ್ ಕುಮಾರ್
ಪಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಶಿಷ್ಟಾಚಾರ ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಶನಿವಾರ ಆರೋಪಿಸಿದ್ದಾರೆ.
ಕಳೆದ ವರ್ಷ 'ಭಾರತ ರತ್ನ' ಪುರಸ್ಕಾರ ಸ್ವೀಕರಿಸಿರುವ ಮಾಜಿ ಸಿಎಂ, ದಿವಂಗತ ಕರ್ಪೂರಿ ಠಾಕೂರ್ ಅವರ ಜನ್ಮದಿನ ಸಮಾರಂಭದಲ್ಲಿ ಪಾಳ್ಗೊಳ್ಳಲು ಧನಕರ್ ಅವರು ಜನವರಿ 24 ರಂದು ಸಮಸ್ತಿಪುರಕ್ಕೆ ಬಂದಿದ್ದರು. ಅವರನ್ನು ಸ್ವಾಗತಿಸಲು ವಿಫಲವಾಗಿರುವುದು ನಿತೀಶ್ ಕುಮಾರ್ ಅವರ ಮಾನಸಿಕ ಅಸಮರ್ಥತೆ ತೋರುತ್ತದೆ ಎಂದು ಟೀಕಿಸಿದ್ದಾರೆ.
'ಮುಖ್ಯಮಂತ್ರಿ ಅವರು ಶಿಷ್ಟಾಚಾರ ಅನುಸರಿಸಲಾಗದ ಸ್ಥಿತಿಗೆ ತಲುಪಿದ್ದಾರೆ. ಮಾನಸಿಕವಾಗಿ ಅಸ್ವಸ್ಥರಾಗಿರುವ ಅವರು, ಉಪರಾಷ್ಟ್ರಪತಿ ಅವರನ್ನು ಬರಮಾಡಿಕೊಳ್ಳಲು ವಿಫಲರಾಗಿದ್ದಾರೆ' ಎಂದು ಆರ್‌ಜೆಡಿ ನಾಯಕ ಯಾದವ್ ಹೇಳಿದ್ದಾರೆ.
ಕರ್ಪೂರಿ ಠಾಕೂರ್ ಜನ್ಮದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ನಿತ್ಯಾನಂದ ರೈ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಆದರೆ, ನಿತೀಶ್ ಅವರು ತಮ್ಮ ರಾಜಕೀಯ ಗುರು ಎಂದು ಪರಿಗಣಿಸುವ ಕರ್ಪೂರಿ ಠಾಕೂರ್ ಅವರಿಗೆ ಗೌರವ ಸಲ್ಲಿಸಲು ತಡವಾಗಿ ಸಮಸ್ತಿಪುರಕ್ಕೆ ಭೇಟಿ ನೀಡಿದ್ದರು. ಹೀಗಾಗಿ, ಸಮಾರಂಭದಲ್ಲಿ ಅವರ ಅನುಪಸ್ಥಿತಿ ಎದ್ದುಕಂಡಿತ್ತು.
ಪಾಟ್ನಾ ಹೊರವಲಯದಲ್ಲಿ ಕಳೆದವಾರ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಮಾಜಿ ಶಾಸಕ ಅನಂತ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ವೇಳೆ ಯಾದವ್, ನಿತೀಶ್ ವಿರುದ್ಧ ಆರೋಪ ಮಾಡಿದ್ದಾರೆ.ಬಂಧಿತ ಅನಂತ್ ಸಿಂಗ್ ಅವರ ಪತ್ನಿ ಆರ್‌ಜೆಡಿಯಿಂದ ಸ್ಪರ್ಧಿಸಿ ಶಾಸಕಿಯಾಗಿದ್ದರು. ಇದೀಗ ಅವರು ಎನ್‌ಡಿಎ ಬಣ ಸೇರಿಕೊಂಡಿದ್ದಾರೆ. ಹಾಗಾಗಿ, 'ಯಾವುದೇ ಸಮಯದಲ್ಲಿ ಅನಂತ್ ಅವರ ಬಿಡುಗಡೆ ಆಗಬಹುದು' ಎಂದು ಯಾದವ್ ದೂರಿದ್ದಾರೆ.
ಹೆಚ್ಚು ಕಾಲ ಬಿಹಾರ ಸಿಎಂ ಆಗಿರುವ ನಿತೀಶ್ ಅವರಿಗೆ 70 ವರ್ಷ ವಯಸ್ಸಾಗಿದೆ. ಅವರ ಜೆಡಿಯು ಪಕ್ಷದ ಹಲವು ಯುವ ಮುಖಂಡರು, ತಮ್ಮ ನಾಯಕನಿಗೆ ವಯಸ್ಸಾಯಿತು ಎನ್ನುತ್ತಿದ್ದಾರೆ ಎಂದೂ ಯಾದವ್ ಹೇಳಿದ್ದಾರೆ.
ಜನ್ ಸುರಾಜ್ ಪಕ್ಷದ ಸಂಸ್ಥಾಪಕ, ಜೆಡಿಯುನ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರೂ ಶುಕ್ರವಾರ ಇಂಥದೇ ಹೇಳಿಕೆ ನೀಡಿದ್ದರು.
ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದ ವೇಳೆ, 'ಒಂದು ತುಂಡು ಕಾಗದವನ್ನೂ ನೋಡದೆ, ತಮ್ಮ ಸಂಪುಟದಲ್ಲಿರುವ ಸಚಿವರು ಮತ್ತು ಅವರ ಖಾತೆಗಳನ್ನು ಗುರುತಿಸುವಂತೆ ನಿತೀಶ್ ಕುಮಾರ್ ಅವರಿಗೆ ಸವಾಲು ಹಾಕುತ್ತೇನೆ. ಅವರು ಅದರಲ್ಲಿ ಯಶಸ್ವಿಯಾದರೆ, ಅವರ ವಿರುದ್ಧದ ಹೋರಾಡುವುದನ್ನು ನಿಲ್ಲಿಸುತ್ತೇನೆ' ಎಂದು ಕಿಶೋರ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.