ADVERTISEMENT

ಬಿಹಾರ: ಡಿಸಿಎಂ ವಿಜಯ್ ಸಿನ್ಹಾ ವರ್ತನೆಗೆ ಅಧಿಕಾರಿಗಳ ಕಿಡಿ

ಪಿಟಿಐ
Published 28 ಡಿಸೆಂಬರ್ 2025, 15:45 IST
Last Updated 28 ಡಿಸೆಂಬರ್ 2025, 15:45 IST
ವಿಜಯ್‌ ಸಿನ್ಹಾ
ವಿಜಯ್‌ ಸಿನ್ಹಾ   

ಪಟ್ನಾ: ಬಿಹಾರ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ವಿಜಯ್ ಸಿನ್ಹಾ ಅವರ ಭಾಷಾ ಪ್ರಯೋಗ ಹಾಗೂ ಅಧಿಕಾರಿಗಳ ಜತೆ ಅವರ ವರ್ತನೆಯನ್ನು ಆಕ್ಷೇಪಿಸಿ, ರಾಜ್ಯ ಕಂದಾಯ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರಿಗೆ ಪ್ರತಿಭಟನಾ ಪತ್ರ ಸಲ್ಲಿಸಿದ್ದಾರೆ. 

ಕಂದಾಯ ಹಾಗೂ ಭೂ ಸುಧಾರಣಾ ಖಾತೆಗಳ ಸಚಿವರಾಗಿರುವ ಸಿನ್ಹಾ, ಜನತಾ ದರ್ಬಾರ್‌ ವೇಳೆ ಬಳಸುವ ಪದಗಳು ಕಂದಾಯ ಇಲಾಖೆಯ ಅಧಿಕಾರಿಗಳ ಗೌರವಕ್ಕೆ ಧಕ್ಕೆ ತಂದಿವೆ. ಅಲ್ಲದೇ, ಸಾರ್ವಜನಿಕರ ಎದುರು ಅಧಿಕಾರಿಗಳನ್ನು ನಗೆಪಾಟಲಿಗೀಡಾಗುವಂತೆ ಮಾಡಿದೆ ಎಂದು ಬಿಹಾರ ಕಂದಾಯ ಸೇವಾ ಒಕ್ಕೂಟದ (ಬಿಐಆರ್‌ಎಸ್‌ಎ) ಸದಸ್ಯರೂ ಆಗಿರುವ ಅಧಿಕಾರಿಗಳು ಪತ್ರದಲ್ಲಿ ದೂರಿದ್ದಾರೆ.

‘ನಿನ್ನನ್ನು ಇಲ್ಲಿಯೇ ಅಮಾನತುಗೊಳಿಸುತ್ತೇನೆ’, ‘ಜನರ ಎದುರಿಗೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು’ ಎಂದು ಅಧಿಕಾರಿಗಳನ್ನು ಸಿನ್ಹಾ ಅವರು ದಾರ್ಷ್ಟ್ಯದಿಂದ ಪ್ರಶ್ನಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿನ್ಹಾ ಅವರ ಈ ಹೇಳಿಕೆಗಳು ಇರುವ ವಿಡಿಯೊಗಳನ್ನೂ ಉಲ್ಲೇಖಿಸಿದ್ದಾರೆ. 

ADVERTISEMENT

ಸಾರ್ವಜನಿಕರ ಎದುರಲ್ಲಿ ಅಧಿಕಾರಿಗಳನ್ನು ಕೋರ್ಟ್‌ ಮಾರ್ಷಿಯಲ್‌ ಮಾಡುವ ರೀತಿ ವಿಚಾರಣೆ ನಡೆಸುವುದು ಪ್ರಜಾಪ್ರಭುತ್ವದ ಕೆಲಸದ ಶೈಲಿಯಲ್ಲ. ಇದು ನಾಟಕೀಯ ಶೈಲಿಯ ಆಡಳಿತ ಎಂದೆನಿಸಿಕೊಳ್ಳುತ್ತದೆ. ನಿಂತಲ್ಲೇ ನ್ಯಾಯ ಒದಗಿಸುವ ಪದ್ಧತಿಯು ಇವರಿಂದಾಗಿ ಸರ್ವಾಧಿಕಾರದಂತೆ ಕಾಣುತ್ತಿದೆ. ಸಿನ್ಹಾ ಅಧಿಕಾರಿಗಳನ್ನು ಅವಮಾನಿಸದೇ, ಸಚಿವರ ಹುದ್ದೆಗೆ ತಕ್ಕಂತೆ ಸಭ್ಯವಾಗಿ ನಡೆಸಿಕೊಳ್ಳಲು ಸೂಚಿಸಬೇಕು ಎಂದೂ ಪತ್ರದಲ್ಲಿ ಕೋರಲಾಗಿದೆ. 

ಇತ್ತ ಸಿನ್ಹಾ ಅವರು ಯಾವುದೇ ಪಶ್ಚಾತ್ತಾಪ ತೋರದೆ, ‘ನನ್ನ ಮೇಲೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ. ನಾನು ಅಧಿಕಾರದಲ್ಲಿ ಇರುವವರೆಗೂ ಜನರಿಗಾಗಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.