
ಪಟ್ನಾ, ಬಿಹಾರ: ‘ಬಿಹಾರ ವಿಧಾನಸಭಾ ಫಲಿತಾಂಶವು ಜನರ ಆಶಯಗಳನ್ನು ಪ್ರತಿಬಿಂಬಿಸಿಲ್ಲ, ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ಅಕ್ರಮ ನಡೆದಿದ್ದು, ಪಕ್ಷವು ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ’ ಎಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ತಿಳಿಸಿದೆ.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 243 ವಿಧಾನಸಭಾ ಕ್ಷೇತ್ರಗಳ ಪೈಕಿ 202 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆದ್ದಿತ್ತು. ಆರ್‌ಜೆಡಿ ಅಭ್ಯರ್ಥಿಗಳು ಸ್ಪರ್ಧಿಸಿದ 143 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರು.
‘ಬಿಹಾರ ಫಲಿತಾಂಶವು ತಳಮಟ್ಟದ ಜನರ ಧ್ವನಿಯನ್ನು ಪ್ರತಿನಿಧಿಸುತ್ತಿಲ್ಲ. ಸರ್ಕಾರದ ವಿರುದ್ಧ ತೀವ್ರ ಜನಾಕ್ರೋಶದ ಹೊರತಾಗಿಯೂ, ಆಡಳಿತ ಪಕ್ಷಕ್ಕೆ ಇಂತಹ ಫಲಿತಾಂಶ ದೊರೆತಿದೆ. ಜನರು ಹಾಗೂ ರಾಜಕಾರಣಿಗಳು ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಆರ್‌ಜೆಡಿ ವಕ್ತಾರ ಶಕ್ತಿಸಿಂಗ್ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರ್‌ಜೆಡಿಯ ಎಲ್ಲ ಅಭ್ಯರ್ಥಿಗಳು ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷವು ಈ ವಿಚಾರದಲ್ಲಿ ನ್ಯಾಯಾಲಯದ ಮೊರೆಹೋಗಲಿದೆ ಎಂದು ಅಭ್ಯರ್ಥಿಯೊಬ್ಬರು ತಿಳಿಸಿದರು.
‘ಮತ ಎಣಿಕೆ ಆರಂಭವಾಗುವ ಮುನ್ನವೇ ಪ್ರತಿ ಇವಿಎಂಗಳಲ್ಲಿ 25 ಸಾವಿರ ಮತಗಳನ್ನು ಮುಂಚಿತವಾಗಿ ತೋರಿಸುತ್ತಿತ್ತು. ಹೀಗಿದ್ದರೂ ಕೂಡ ನಾವು 25 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದೇವೆ’ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಜಗದಾ ನಂದ್ ಸಿಂಗ್ ತಿಳಿಸಿದ್ದಾರೆ.
‘ಇವಿಎಂನಲ್ಲಿ ಅಕ್ರಮ ನಡೆದಿದೆ. ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ನಾವು ಆಗ್ರಹಿಸುತ್ತೇವೆ’ ಎಂದು ಮನೇರ್ ಕ್ಷೇತ್ರದ ನೂತನ ಶಾಸಕ ಭಾಯಿ ವಿರೇಂದ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.