ಭುವನೇಶ್ವರ: ಮಹಾರಾಷ್ಟ್ರದಲ್ಲಿ ಮಾಡಿದಂತೆ ಮುಂಬರುವ ಬಿಹಾರ ಚುನಾವಣೆಯನ್ನು ಹೈಜಾಕ್ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ನಗರದಲ್ಲಿ ನಡೆದ 'ಸಂವಿಧಾನ್ ಬಚಾವೋ ಸಮಾವೇಶ'ವನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಬಿಜೆಪಿ 'ಹೈಜಾಕ್' ಮಾಡುವುದನ್ನು ತಡೆಯಲು ಇಂಡಿಯಾ ಮೈತ್ರಿಕೂಟ ನಿರ್ಧರಿಸಿದೆ ಎಂದು ರಾಹುಲ್ ತಿಳಿಸಿದ್ದಾರೆ.
'ಮಹಾರಾಷ್ಟ್ರದಂತೆಯೇ, ಬಿಹಾರದಲ್ಲೂ ಚುನಾವಣೆಯನ್ನು ಹೈಜಾಕ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಈ ಮೂಲಕ ಬಿಜೆಪಿ ಚುನಾವಣೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಗೆಲುವು ಸಾಧಿಸಲು ಪ್ರಯತ್ನಿಸುತ್ತಿದೆ. ದೇಶಾದ್ಯಂತ ಬಿಜೆಪಿ ನಮ್ಮ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ' ಎಂದು ರಾಹುಲ್ ಗಂಭೀರವಾಗಿ ಆರೋಪಿಸಿದ್ದಾರೆ.
ಭಾರತದ ಚುನಾವಣಾ ಆಯೋಗವು ತನ್ನ ಕರ್ತವ್ಯವನ್ನು ಮಾಡದೆ ಬಿಜೆಪಿಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಐವರು ಬಂಡವಾಳಶಾಹಿಗಳಿಗಾಗಿ ಬಿಜೆಪಿ ಸರ್ಕಾರವನ್ನು ನಡೆಸುತ್ತಿದೆಯೇ ಹೊರತು ದೇಶದ ಸಾಮಾನ್ಯ ಜನರಿಗೆ ಅಲ್ಲ ಎಂದು ರಾಹುಲ್ ಕಿಡಿಕಾರಿದ್ದಾರೆ.
'ಜಲ್, ಜಂಗಲ್, ಜಮೀನ್' (ನೀರು, ಅರಣ್ಯ ಮತ್ತು ಭೂಮಿ) ಬುಡಕಟ್ಟು ಜನಾಂಗಕ್ಕೆ ಸೇರಿದ್ದು. ಅವರಿಗಾಗಿಯೇ ಉಳಿಯಬೇಕು. ಒಡಿಶಾದಲ್ಲಿ ಬಿಜೆಪಿ ಸರ್ಕಾರವು 1996ರ ಪಂಚಾಯತ್ ಕಾಯ್ದೆಯನ್ನು ಅನುಷ್ಠಾನಗೊಳಿಸಿಲ್ಲ. ಬಿಜೆಡಿ ತನ್ನ ಅಧಿಕಾರಾವಧಿಯಲ್ಲಿ ಮಾಡಿದ್ದಂತೆಯೇ ಒಡಿಶಾವನ್ನು ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.
ಕಾಂಗ್ರೆಸ್ ಪೆಸಾ ಮತ್ತು ಬುಡಕಟ್ಟು ಮಸೂದೆಯನ್ನು ತಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬುಡಕಟ್ಟು ಜನಾಂಗದವರಿಗೆ ಅವರ ಭೂಮಿ ಸಿಗುವಂತೆ ಮಾಡುತ್ತದೆ ಎಂದು ಗಾಂಧಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.