ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: 25 ವರ್ಷದ ಗಾಯಕಿ ಮೈಥಿಲಿ ಠಾಕೂರ್‌ ಕಣಕ್ಕೆ?

ಪಿಟಿಐ
Published 7 ಅಕ್ಟೋಬರ್ 2025, 7:43 IST
Last Updated 7 ಅಕ್ಟೋಬರ್ 2025, 7:43 IST
<div class="paragraphs"><p>ಮೈಥಿಲಿ ಠಾಕೂರ್‌</p></div>

ಮೈಥಿಲಿ ಠಾಕೂರ್‌

   

ಚಿತ್ರಕೃಪೆ: ಎಕ್ಸ್‌

ಜಬಲ್ಪುರ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಾನಪದ ಗಾಯಕಿ ಮೈಥಿಲಿ ಠಾಕೂರ್‌ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ADVERTISEMENT

ಈ ಕುರಿತು ಪಿಟಿಐನೊಂದಿಗೆ ಮಾತನಾಡಿದ ಗಾಯಕಿ, ತಮ್ಮ ಹುಟ್ಟೂರು ಮಧುಬನಿ ಜಿಲ್ಲೆಯ ಬೇಣಿಪಟ್ಟಿಯಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಮೈಥಿಲಿ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಿಹಾರ ಸಂಘಟನಾ ಉಸ್ತುವಾರಿ ವಿನೋದ್ ತಾವ್ಡೆ ಮತ್ತು ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರನ್ನು ಭೇಟಿಯಾಗಿದ್ದಾರೆ. ಆ ಬಳಿಕ ಗಾಯಕಿ ರಾಜಕೀಯಕ್ಕೆ ಇಳಿಯುವ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ.

25 ವರ್ಷದ ಮೈಥಿಲಿ ಠಾಕೂರ್‌ ಹಲವು ಸಂಗೀತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಮಧುರ ಕಂಠದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದು, 2024ರಲ್ಲಿ ಪ್ರಧಾನಿಯವರಿಂದ ‘ನ್ಯಾಷನಲ್ ಕ್ರಿಯೆಟರ್‌ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ.

‘ರಾಜಕೀಯಕ್ಕೆ ಬರುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ, ಆದರೆ ನನ್ನ ಹಳ್ಳಿ ಪ್ರದೇಶಕ್ಕೆ ಹೋಗಲು ನಾನು ಬಯಸುತ್ತೇನೆ ಏಕೆಂದರೆ ನನಗೆ ಅದರೊಂದಿಗೆ ವಿಶೇಷ ಸಂಬಂಧವಿದೆ. ರಾಜಕೀಯ ಪಯಣವನ್ನು ನನ್ನ ಊರಿನಿಂದ ಪ್ರಾರಂಭಿಸುವುದರಿಂದ ನನಗೆ ಕಲಿಯಲು ಅವಕಾಶ ಸಿಗುತ್ತದೆ. ಜನರನ್ನು ಭೇಟಿಯಾಗುವುದು, ಅವರೊಂದಿಗೆ ಮಾತನಾಡುವುದು ಸಾಧ್ಯವಾಗುತ್ತದೆ’ ಎಂದಿದ್ದಾರೆ.

‘ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಿದ್ಧನಿದ್ದೇನೆ.  ತಾವ್ಡೆ ಮತ್ತು ರೈ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಬಿಹಾರದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದೇನೆ’ ಎಂದು ಮೈಥಿಲಿ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಸುವುದಾಗಿ ಚುನಾವಣಾ ಆಯೋಗ ಹೇಳಿದೆ. ನ.6 ಮತ್ತು 11 ರಂದು ಚುನಾವಣೆ ನಡೆಯಲಿದ್ದು, ನ.14ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.