ADVERTISEMENT

ಬಿಹಾರ: NDA ಮೈತ್ರಿಕೂಟಕ್ಕೆ ಪ್ರಚಂಡ ಜಯ; 'ನಿಮೋ' ಸುನಾಮಿ – ಮಹಾಮೈತ್ರಿ ಧೂಳೀಪಟ 

ಮ್ಯಾಜಿಕ್‌ ಮಾಡದ ಪ್ರಶಾಂತ್ ಕಿಶೋರ್‌

ಮಂಜುನಾಥ್ ಹೆಬ್ಬಾರ್‌
Published 14 ನವೆಂಬರ್ 2025, 23:11 IST
Last Updated 14 ನವೆಂಬರ್ 2025, 23:11 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್</p></div>

ಪ್ರಧಾನಿ ನರೇಂದ್ರ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

   

ಕೃಪೆ: ಪಿಟಿಐ

ನವದೆಹಲಿ: ಬಿಹಾರದ ರಾಜಕೀಯ ಕಣದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌– ಪ್ರಧಾನಿ ನರೇಂದ್ರ ಮೋದಿ (ನಿ–ಮೋ) ಜೋಡಿಯ ಸುನಾಮಿಯ ಅಲೆಗೆ ಎನ್‌ಡಿಎ ಮೈತ್ರಿಕೂಟವು ಪ್ರಚಂಡ ದಿಗ್ವಿಜಯ ಸಾಧಿಸಿದೆ. ವಿಪಕ್ಷ ನಾಯಕ ರಾಹುಲ್‌ ಗಾಂಧಿ– ತೇಜಸ್ವಿ ಯಾದವ್‌ ಜೋಡಿ ನೇತೃತ್ವದ ಮಹಾಮೈತ್ರಿಕೂಟ ತರಗೆಲೆಯಂತೆ ಧೂಳೀಪಟಗೊಂಡಿದೆ. 

ADVERTISEMENT

ಮೋದಿ–ನಿತೀಶ್‌ ಜೋಡಿಯ ಪ್ರಭಾವಳಿಯ ನೆರವಿನಿಂದ ಮೈತ್ರಿಕೂಟವು 203 ಸ್ಥಾನಗಳನ್ನು ಗೆದ್ದು ಬೀಗಿದೆ. 2010ರಲ್ಲಿ ನಿತೀಶ್– ಬಿಜೆಪಿಯ ಸುಶೀಲ್‌ ಕುಮಾರ್ ಜೋಡಿ ಮಾಡಿದ ಸಾಧನೆಯನ್ನು ಪುನರಾವರ್ತಿಸಿದೆ. ಕಳೆದ ಚುನಾವಣೆಯಲ್ಲಿ 12 ಸಾವಿರ ಮತಗಳ ಕಿರು ಅಂತರದಿಂದ ಸೋತ ಬಿಹಾರವನ್ನು ಈ ಸಲ ಗೆಲ್ಲಲೇಬೇಕೆಂಬ ಛಲದಿಂದ ಹೋರಾಡಿದ ಮಹಾಮೈತ್ರಿಯ ಮಹದಾಸೆ ಭಗ್ನಗೊಂಡಿದೆ. ಎನ್‌ಡಿಎ–ಮಹಾಮೈತ್ರಿಯ ನೇರ ಸ್ಪರ್ಧೆಯ ಕಣದಲ್ಲಿ ತ್ರಿಕೋನ ಸ್ಪರ್ಧೆಯ ಭರವಸೆ ಮೂಡಿಸಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್ ಅವರ ಜನ ಸುರಾಜ್‌ ಪಕ್ಷವು ನೀರಗುಳ್ಳೆಯಂತೆ ಒಡೆದು ಹೋಗಿದೆ. 10ನೇ ಬಾರಿಗೆ ಮುಖ್ಯಮಂತ್ರಿ ಗಾದಿಗೆ ಏರಲು ನಿತೀಶ್ ಅಣಿಯಾಗಿದ್ದಾರೆ. 

ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಮತಕಳ್ಳತನದ ವಿರುದ್ಧದ ಕಾಂಗ್ರೆಸ್‌ ಹೋರಾಟಗಳು ಮತದಾರರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗಿವೆ. ಚುನಾವಣಾ ಪೂರ್ವದಲ್ಲಿ ಜಾರಿಗೆ ತಂದ ಕಲ್ಯಾಣ ಕಾರ್ಯಕ್ರಮಗಳು ಮೂರನೇ ಎರಡರಷ್ಟು ಬಹುಮತವನ್ನು ಎನ್‌ಡಿಎ ಮೈತ್ರಿಕೂಟಕ್ಕೆ ತಂದುಕೊಟ್ಟಿವೆ. ಚುನಾವಣೆಗೆ ಕೆಲವೇ ದಿನಗಳು ಇರುವಾಗ ಸರ್ಕಾರದ ಖಜಾನೆಯಿಂದ ₹10 ಸಾವಿರ ‘ಗ್ಯಾರಂಟಿ’ ಪಡೆದ ಮಹಿಳಾ ಮತದಾರರು ಮೈತ್ರಿಕೂಟವನ್ನು ಗೆಲ್ಲಿಸಿದರು. ‘ಸುಶಾಸನ ಬಾಬು’ವಿನ ಯೋಜನೆಗಳು ಮೈತ್ರಿಕೂಟದ ದೈತ್ಯ ಗೆಲುವಿಗೆ ಕಾರಣವಾಗಿದೆ. ‘ಮತ ಕಳವು ಝೆನ್‌–ಜಿಗಳ ಹಕ್ಕನ್ನು ಮೊಟಕುಗೊಳಿಸಲಿದೆ’ ಎಂಬ ರಾಹುಲ್‌ ಅವರ ಮಾತುಗಳು ಮತಗಳಾಗಿ ಪರಿವರ್ತನೆ ಹೊಂದಲಿಲ್ಲ. ಹೊಸ ಮತದಾರರು ಎನ್‌ಡಿಎ ಮೇಲೆ ವಿಶ್ವಾಸ ಇಟ್ಟರು.  

‘ಡಬಲ್‌ ಎಂಜಿನ್‌ ಸರ್ಕಾರ’ ಎಂಬ ಸಂಕಥನವು ಮೈತ್ರಿಗೆ ಭರಪೂರ ಮತಗಳನ್ನು ತಂದುಕೊಟ್ಟಿದೆ. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ರಾಜ್ಯಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರವು ಕಳೆದ ಒಂದೂವರೆ ವರ್ಷಗಳಲ್ಲಿ ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ನೀಡಿ ಚುನಾವಣಾ ಕಣ ಸಜ್ಜುಗೊಳಿಸಿದ್ದನ್ನು ಇಲ್ಲಿ ನೆನಪಿಸಬಹುದು.  

ಈ ಹಿಂದೆ ನಿತೀಶ್ ತಮ್ಮ ಮಿತ್ರಪಕ್ಷ ಬಿಜೆಪಿಯನ್ನು ಅಂಕೆಯಲ್ಲಿಟ್ಟುಕೊಂಡಿದ್ದರು. ಮಹಾಮೈತ್ರಿಕೂಟ ತೊರೆದು ಬಿಜೆಪಿಯ ಗೆಳೆತನಕ್ಕೆ ಮರಳಿದ ನಂತರ ನಿತೀಶ್ ಅವರನ್ನು ಕೇಸರಿ ಪಕ್ಷ ತನ್ನ ಅಂಕೆಯಲ್ಲಿ ಇರಿಸಿಕೊಂಡಿದೆ. 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶೇ 90 ಸ್ಟ್ರೈಕ್‌ ರೇಟ್‌ನಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಂದಿನ ಚುನಾವಣೆಗಳಲ್ಲಿ ತನ್ನ ಶಕ್ತಿಯನ್ನೇ ನೆಚ್ಚಲು ನಿರ್ಧರಿಸಿರುವ ಕೇಸರಿ ಪಕ್ಷ, ಅದಕ್ಕಾಗಿ ನೆಲವನ್ನು ‘ಫಲವತ್ತು’ ಮಾಡಿಕೊಂಡಿದೆ. ಪದೇ ಪದೇ ಮೈತ್ರಿಕೂಟ ಬದಲಿಸಿ ‘ಪಲ್ಟು ಕುಮಾರ್’ ಎಂಬ ಹಣೆಪಟ್ಟಿ ಹೊತ್ತಿರುವ ನಿತೀಶ್ ಅವರು ಅತ್ತಿತ್ತ ಹೊರಳಾಡದಂತಹ ಸನ್ನಿವೇಶ ಸೃಷ್ಟಿಯಾಗಿದೆ. 

ಮೋದಿ ಅವರ ಮಾತುಗಳನ್ನು ಮತದಾರರು ಕಣ್ಣುಮುಚ್ಚಿ ನಂಬುತ್ತಾರೆ ಎಂಬುದನ್ನು ಈ ಚುನಾವಣೆ ಮತ್ತೊಮ್ಮೆ ಸಾಬೀತುಪಡಿಸಿದೆ. ಗೆಲುವಿನ ಅಂಚು ತಲುಪಿ ತಿಣುಕಾಡುವ ಮೈತ್ರಿ ಸರ್ಕಾರಗಳನ್ನು ಅವರು ಗೆಲ್ಲಿಸಬಲ್ಲರು ಎಂಬುದನ್ನು ಈ ಫಲಿತಾಂಶ ರುಜುವಾತುಪಡಿಸಿದೆ. ಆರ್‌ಜೆಡಿ ಅಧಿಕಾರಕ್ಕೆ ಬಂದರೆ ಜಂಗಲ್‌ ರಾಜ್ ಮರಳಲಿದೆ ಎಂಬ ಭಾವನೆಯನ್ನು ಜನರ ಮತದಲ್ಲಿ ಬಿತ್ತುವಲ್ಲಿ ಮೋದಿ ಯಶಸ್ವಿಯಾದರು. ಜಾತಿ ಕಲಹದ ನಾಡಿನಲ್ಲಿ ಬಿತ್ತಿದ ಈ ಬೀಜವು ಮೈತ್ರಿಕೂಟಕ್ಕೆ ನಿರೀಕ್ಷೆಗೆ ಮೀರಿದ ಫಲಸನ್ನು ತಂದುಕೊಟ್ಟಿದೆ. ಹಿಂದುತ್ವದ ಹೆಸರಿನ ಧ್ರುವೀಕರಣವೇ ಬಿಜೆಪಿ ಕೂಟಕ್ಕೆ ಚುನಾವಣೆಗಳನ್ನು ಗೆಲ್ಲಿಸಿಕೊಡುವ ಬಹುಮುಖ್ಯ ಅಂಶ ಎಂಬುದನ್ನು ಈ ಬಾರಿಯ ಫಲಿತಾಂಶವು ಮತ್ತೊಮ್ಮೆ ಸಾಬೀತು ಮಾಡಿದೆ.

ಮಹಾಮೈತ್ರಿಗೆ ಓವೈಸಿ ಹೊಡೆತ 

24 ಕ್ಷೇತ್ರಗಳಿರುವ ಸೀಮಾಂಚಲ ಪ್ರದೇಶದಲ್ಲಿ ಅಸಾದುದ್ದೀನ್‌ ಓವೈಸಿ ಅವರ ಎಐಎಂಐಎಂ ಪಕ್ಷವು ಐದು ಕ್ಷೇತ್ರಗಳಲ್ಲಿ ಜಯ ಸಾಧಿಸಿತು. ಒಂದು ಡಜನ್‌ ಕ್ಷೇತ್ರಗಳಲ್ಲಿ ಮಹಾಮೈತ್ರಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು. 

ಆರ್‌ಜೆಡಿ ನೇತೃತ್ವದ ಮಹಾಮೈತ್ರಿಗೆ ಪಾರಂಪರಿಕವಾಗಿ ಸೀಮಾಂಚಲ ಪ್ರದೇಶ ಭದ್ರ ಕೋಟೆ. 2020ರ ಚುನಾವಣೆಯಲ್ಲಿ ಓವೈಸಿ ಅವರ ಪಕ್ಷವು ಮಹಾಮೈತ್ರಿಯ ಕೋಟೆಗೆ ಪ್ರವೇಶಿಸಿ ವಿಪಕ್ಷಗಳ ಕೂಟಕ್ಕೆ ಹೊಡೆತ ನೀಡಿತ್ತು. ಈ ಸಲ ಅದಕ್ಕಿಂತ ತೀವ್ರ ಹಾನಿ ಮಾಡಿದೆ. ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪಕ್ಷವು ಹಲವು ಕಡೆಗಳಲ್ಲಿ ಮಹಾಮೈತ್ರಿಯ ಮತಗಳಿಗೆ ಕನ್ನ ಹಾಕಿತು.

ಬಿಹಾರದಲ್ಲಿ ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವುದು ನೇಪಾಳ ಹಾಗೂ ಪಶ್ಚಿಮ ಬಂಗಾಳ ಗಡಿಯಲ್ಲಿರುವ ಸೀಮಾಂಚಲ ಸೀಮೆಯಲ್ಲಿ. ಕಿಶನ್‌ಗುಂಜ್, ಅರಾರಿಯಾ, ಕತಿಹಾರ್ ಮತ್ತು ಪೂರ್ಣಿಯಾ ಒಳಗೊಂಡ ನಾಲ್ಕು ಜಿಲ್ಲೆಗಳಲ್ಲಿ ಈ ಸಲ ಮಹಾಮೈತ್ರಿಗೆ ಸಿಕ್ಕಿದ್ದು ಮೂರು ಸೀಟುಗಳಷ್ಟೇ. ಓವೈಸಿ ಪಕ್ಷವು ತ್ರಿಕೋನ ಸ್ಪರ್ಧೆಯನ್ನು ಹುಟ್ಟು ಹಾಕಿದ್ದರಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಅನುಕೂಲವಾಯಿತು. ಆರ್‌ಜೆಡಿ ಹಾಗೂ ಕಾಂಗ್ರೆಸ್‌ನ ಉನ್ನತ ನಾಯಕರು ಸೋಲು ಕಂಡರು. ಇದೀಗ ಓವೈಸಿ ಅವರು 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕಡೆಗೆ ದೃಷ್ಟಿ ನೆಟ್ಟಿದ್ದಾರೆ.

ಬಿಹಾರದಲ್ಲಿ ಎನ್‌ಡಿಎ ಗೆಲುವು ಜನಪರ ಆಡಳಿತಕ್ಕೆ ಸಿಕ್ಕ ಮನ್ನಣೆ. ಬಿಜೆಪಿಯ ಈ ಗೆಲುವಿನ ಯಾತ್ರೆಯು ಬಿಹಾರದ ಗಂಗಾನದಿ ದಾಟಿ ಪಶ್ಚಿಮ ಬಂಗಾಳ ಪ್ರವೇಶಿಸಲಿದ್ದು, ಅಲ್ಲಿನ ಜಂಗಲ್‌ರಾಜ್‌ ಆಡಳಿತವನ್ನು ಕಿತ್ತೊಗೆಯಲಾಗುವುದು.
– ನರೇಂದ್ರ ಮೋದಿ, ಪ್ರಧಾನಿ
ರಾಜ್ಯದ ಜನರು ನಮ್ಮ ಸರ್ಕಾರದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ
ನಾನು ರಾಜ್ಯದ ಎಲ್ಲ ಗೌರವಾನ್ವಿತ ಮತದಾರರಿಗೂ ನಮಸ್ಕರಿಸುತ್ತೇನೆ ಹಾಗೂ ಹೃದಯಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ.
– ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

ಕಷ್ಟಪಟ್ಟ ನೆಲಗಳಲ್ಲಿ ಪ್ರಚಂಡ ದಿಗ್ವಿಜಯ 

2017ರ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತಿಣುಕಾಡಿ ಗೆದ್ದಿತ್ತು. 2022ರ ಚುನಾವಣೆಯಲ್ಲಿ ಮೂರನೇ ಎರಡಷ್ಟು ಬಹುಮತ ಗಳಿಸಿತ್ತು. ಮಧ್ಯಪ್ರದೇಶದಲ್ಲಿ ಸತತ ನಾಲ್ಕನೆಯ ಸಲ ಗೆಲ್ಲಲು ಕಮಲ ಪಾಳಯವು 2018ರಲ್ಲಿ ಕಡೆಯ ಗಳಿಗೆಯ ತನಕ ವೀರೋಚಿತ ಹೋರಾಟ ನಡೆಸಿತ್ತು. 2023ರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತ್ತು.

ಮಹಾರಾಷ್ಟ್ರದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಕಳಪೆ ಸಾಧನೆ ಮಾಡಿತ್ತು. ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ಮೈತ್ರಿಕೂಟವನ್ನು ಗುಡಿಸಿ ಹಾಕಿತ್ತು. ಛತ್ತೀಸಗಢ ಹಾಗೂ ದೆಹಲಿ ವಿಧಾನಸಭಾ ಚುನಾವಣೆಗಳಲ್ಲೂ ಇಂತಹುದೇ ಫಲಿತಾಂಶ ಬಂದಿತ್ತು. ಇದೀಗ ಬಿಹಾರದ ಸರದಿ.

2020ರ ಚುನಾವಣೆಯಲ್ಲಿ ಗೆಲುವಿಗೆ ಏದುಸಿರು ಬಿಟ್ಟಿದ್ದ ಎನ್‌ಡಿಎ ಮೈತ್ರಿಕೂಟವು ಈ ಬಾರಿ ಪ್ರತಿಪಕ್ಷವನ್ನು ನಾಮಾವಶೇಷ ಮಾಡಿದೆ. ಅಧಿಕಾರಕ್ಕೇರಲು ಕಷ್ಟ ಪಟ್ಟ ನೆಲಗಳಲ್ಲಿ‍ ಮತ್ತೆ ಭರ್ಜರಿ ಗೆಲುವು ಸಾಧಿಸುವ ಹೊಸ ಹವ್ಯಾಸ ಬಿಜೆಪಿಯದ್ದು. ಬಿಜೆಪಿ ನಾಯಕರಿಗೆ ಗೆಲುವೊಂದೇ ಮಂತ್ರ.

ಪಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು

ಬಿಜೆಪಿ ಅಧ್ಯಕ್ಷರ ನೇಮಕ ಇನ್ನು ಸಲೀಸು
ಬಿಹಾರದಲ್ಲಿ ಗೆದ್ದು ಬೀಗಿರುವ ಬಿಜೆಪಿಯು ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕದ ಕಡೆಗೆ ಗಮನ ಹರಿಸುವುದು ಖಚಿತ. ಒಂದು ವರ್ಷದಿಂದ ನನೆಗುದಿಗೆ ಬಿದ್ದಿರುವ ಈ ಪ್ರಕ್ರಿಯೆಗೆ ವೇಗ ಸಿಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ಕಡೆಗೆ ಗಮನ ಹರಿಸುವ ಸಂಭವ ಇದೆ.
ಬಿಹಾರ ಚುನಾವಣೆ ಫಲಿತಾಂಶ ನಿಜಕ್ಕೂ ಅಚ್ಚರಿ ಮೂಡಿಸಿದೆ. ಆರಂಭದಿಂದಲೂ, ನ್ಯಾಯಸಮ್ಮತವಾಗಿರದ ಈ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲು ಆಗಲಿಲ್ಲ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ
ಚುನಾವಣಾ ಆಯೋಗ ಹಾಗೂ ಬಿಜೆಪಿಯು ತನ್ನ ರಾಷ್ಟ್ರೀಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ಕೈ ಜೋಡಿಸಿ ಕೆಲಸ ಮಾಡಿದ್ದರಿಂದ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವು ಆಘಾತ ಉಂಟು ಮಾಡಿಲ್ಲ.
– ಸಂಜಯ್‌ ರಾವುತ್‌, ಶಿವಸೇನಾ (ಯುಬಿಟಿ) ನಾಯಕ

ಕಾಂಗ್ರೆಸ್‌ ಭವಿಷ್ಯವೇನು?

ಒಂದು ಕಾಲದಲ್ಲಿ ಬಿಹಾರವನ್ನು ಆಳಿದ್ದ ಕಾಂಗ್ರೆಸ್‌ ಪಕ್ಷವು ಈ ಚುನಾವಣೆಯಲ್ಲಿ ಒಂದಂಕಿ ಸ್ಥಾನಗಳನ್ನು ಪಡೆದು ತತ್ತರಿಸಿಹೋಗಿದೆ. ತಳ ಮಟ್ಟದಲ್ಲಿ ಆಮೂಲಾಗ್ರವಾಗಿ ಪಕ್ಷ ಸಂಘಟಿಸದಿದ್ದರೆ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷದ ಭವಿಷ್ಯ ಕಡುಕಠಿಣವಾಗಿರಲಿದೆ ಎಂದು ಎಂಬ ಸ್ಪಷ್ಟ ಸಂದೇಶವನ್ನು ಈ ಚುನಾವಣೆ ರವಾನಿಸಿದೆ. 

ದೇಶದ ಪ‍್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌, ಈಗ ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಮಾತ್ರ ಅಧಿಕಾರದಲ್ಲಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಪಕ್ಷವು ಆ ಬಳಿಕ ನಡೆದ 10 ವಿಧಾನಸಭಾ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಎಲ್ಲಿಯೂ ಗೆದ್ದಿಲ್ಲ. ಎಂಟರಲ್ಲಿ ದಯನೀಯವಾಗಿ ಸೋತಿದೆ. ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌ನಲ್ಲಿ ಗೆದ್ದಿರುವುದು ಮಿತ್ರ ಪಕ್ಷಗಳ ಊರುಗೋಲಿನ ನೆರವಿನಿಂದ.

ಲೋಕಸಭಾ ಚುನಾವಣೆಯ ಬಳಿಕ ರಾಹುಲ್ ಅವರ ‘ಸಂವಿಧಾನ ಉಳಿಸಿ’ ಕಸುವು ಕಳೆದುಕೊಂಡಿದೆ. ದೇಶದಾದ್ಯಂತ ಜಾತಿ ಗಣತಿ ನಡೆಸಬೇಕೆಂಬ ಅವರ ಹೋರಾಟ ಮತಗಳನ್ನು ತಂದುಕೊಟ್ಟಿಲ್ಲ. ಬಿಹಾರ ಚುನಾವಣೆಗೆ ಮುನ್ನ ಆರಂಭಿಸಿದ ‘ಮತ ಕಳವು’ ಅಭಿಯಾನ ಜನರಲ್ಲಿ ಜಾಗೃತಿ ಮೂಡಿಸಿದೆ ಅಷ್ಟೇ, ಮತಗಳಾಗಿ ಪರಿವರ್ತನೆಯಾಗಿಲ್ಲ.

ಬಿಹಾರದಲ್ಲಿ ಪಕ್ಷ ಪುನಶ್ಚೇತನಗೊಳಿಸಲು ರಾಹುಲ್ ಅವರು ಆಗಸ್ಟ್ ತಿಂಗಳಲ್ಲಿ ಮತ ಅಧಿಕಾರ ಯಾತ್ರೆ ನಡೆಸಿ ಸಂಚಲನ ಸೃಷ್ಟಿಸಿದರು. ನಾಯಕರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಆ ಬಳಿಕ ವಿದೇಶ ಯಾತ್ರೆಗಳಲ್ಲಿ ತಲ್ಲೀನರಾದರು. ಸೀಟು ಹಂಚಿಕೆ ಸಂದರ್ಭದಲ್ಲಿ ಮೈತ್ರಿಕೂಟದ ನಾಯಕರ ಕೈಗೇ ಸಿಗಲಿಲ್ಲ. ಮತ್ತೆ ಬಿಹಾರದತ್ತ ಮುಖ ಮಾಡಿದ್ದು ಮೊದಲ ಹಂತದ ಮತದಾನಕ್ಕೆ ಒಂದು ವಾರ ಇರುವಾಗ. ಪುರುಸೊತ್ತು ಇದ್ದಾಗ ರಾಜಕಾರಣ ಮಾಡುವ ಇಂತಹ ಧೋರಣೆ ಕಾಂಗ್ರೆಸ್‌ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಇನ್ನಷ್ಟು ಅಪ್ರಸ್ತುತಗೊಳಿಸಬಹುದು. ಪಕ್ಷದ ಪುನಶ್ಚೇತನದ ಮೇಲೆ ಅದು ಕರಿ ಛಾಯೆ ಬೀರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.