
ಬಿಹಾರದ ಪಟ್ನಾದಲ್ಲಿ ನಿತೀಶ್ ಕುಮಾರ್ ಬೆಂಬಲಿಗರ ವಿಜಯೋತ್ಸವ
ಪಿಟಿಐ ಚಿತ್ರ
ಪಟ್ನಾ: ಮತದಾನ ಪೂರ್ಣಗೊಂಡ ದಿನ ಸಂಜೆ ವಿವಿಧ ಸಮೀಕ್ಷಾ ತಂಡಗಳು ಪ್ರಕಟಿಸುವ ಚುನಾವಣೋತ್ತರ ಫಲಿತಾಂಶಗಳನ್ನೂ ಮೀರಿ ಬಿಹಾರ ಜನತೆ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿ ಮುನ್ನಡೆಯಲ್ಲಿ ಕರೆದೊಯ್ದಿದೆ.
ನ. 6 ಹಾಗೂ ನ. 11ರಂದು 243 ಕ್ಷೇತ್ರಗಳ ಬಿಹಾರದ ವಿಧಾನಸಭೆಗೆ ಚುನಾವಣೆ ನಡೆದಿತ್ತು. ನ. 11ರಂದು ಸಂಜೆಯಿಂದ ಸುಮಾರು 11 ಸಂಸ್ಥೆಗಳು ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸಿದ್ದವು. ಬಹುತೇಕ ಸಮೀಕ್ಷೆಗಳು ಎನ್‌ಡಿಎಗೆ ಸ್ಪಷ್ಟ ಬಹುಮತ ನೀಡಿದ್ದವು. 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಎನ್‌ಡಿಎ ಪಡೆಯಲಿದೆ ಎಂದೇ ಹೇಳಿದ್ದವು.
130ರಿಂದ 172 ಕ್ಷೇತ್ರಗಳಲ್ಲಿ ಎನ್‌ಡಿಎ ಬಹುಮತ ಪಡೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದರೆ, ಪೋಲ್ ಡೈರಿ ಎಂಬ ಸಮೀಕ್ಷೆಯು ಎನ್‌ಡಿಎ 209 ಕ್ಷೇತ್ರಗಳಲ್ಲಿ ಗೆಲಲ್ಲಿದೆ ಎಂದು ಹೇಳಿ ಅಚ್ಚರಿ ಮೂಡಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ 160ಕ್ಕಿಂತ ಹೆಚ್ಚು ಸ್ಥಾನಗಳನ್ನು ಎನ್‌ಡಿಎ ಪಡೆಯಲಿದೆ ಎಂದಿದ್ದರು.
ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ಎನ್‌ಡಿಎ 205 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನಷ್ಟು ಅಂತಿಮ ಫಲಿತಾಂಶ ಪ್ರಕಟವಾಗಿದೆ. ಆ ಮೂಲಕ ಮತದಾರರು ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ್ದಾರೆ.
ಮತಗಟ್ಟೆ ಸಮೀಕ್ಷೆ ನಡೆಸುವ ಸಂಸ್ಥೆಗಳಿಗೆ ಅಚ್ಚರಿ ಮೂಡಿಸಿರುವುದೇನು ಇದೇ ಮೊದಲಲ್ಲ. ಹಿಂದೆ ಹರಿಯಾಣದಲ್ಲಿ ನಡೆದ ಚುನಾವಣೆ ಮತ್ತು ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲೂ ಮತಗಟ್ಟೆ ಸಮೀಕ್ಷೆಯ ನಿರೀಕ್ಷೆ ಮೀರಿದ ಫಲಿತಾಂಶ ಪ್ರಕಟಗೊಂಡಿವೆ.
90 ಸ್ಥಾನಗಳ ಹರಿಯಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಬಿಜೆಪಿ ಗೆಲುವು ದಾಖಲಿಸುವ ಮೂಲಕ ಅಚ್ಚರಿ ಮೂಡಿಸಿತ್ತು.
44ರಿಂದ 54 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಹಾಗೂ ಬಿಜೆಪಿ 15ರಿಂದ 29 ಕ್ಷೇತ್ರಗಳಷ್ಟು ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಫಲಿತಾಂಶ ಪ್ರಕಟವಾದಾಗ ಬಿಜೆಪಿ 48 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ ಪಕ್ಷವು 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.