
ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಆಡಳಿತಾರೂಢ ಎನ್‌ಡಿಎ ರಾಜ್ಯದ 243 ಕ್ಷೇತ್ರಗಳ ಪೈಕಿ ಸುಮಾರು 200 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕಾರ ಉಳಿಸಿಕೊಳ್ಳುವತ್ತ ದಾಪುಗಾಲಿಟ್ಟಿದೆ. ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟ ಹೀನಾಯ ಸೋಲಿನತ್ತ ಮುಖಮಾಡಿದೆ. ಆದರೆ, ಮತ ಗಳಿಕೆ ಪ್ರಮಾಣದಲ್ಲಿ ಆರ್‌ಜೆಡಿ, ಬಿಜೆಪಿ ಮತ್ತು ಜೆಡಿಯುಗಿಂತ ಮುಂದಿದೆ ಎಂಬುದು ಚುನಾವಣಾ ಆಯೋಗದ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಮಧ್ಯಾಹ್ನ 2 ಗಂಟೆ ಸುಮಾರಿನ ಅಂಕಿ ಅಂಶದ ಪ್ರಕಾರ, 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆರ್‌ಜೆಡಿ ಶೇ 22.79ರಷ್ಟು ಮತಗಳಿಕೆ ಮಾಡಿದ್ದರೆ, ಬಿಜೆಪಿ ಶೇ 19.88 ಮತ್ತು ಜೆಡಿಯು ಶೇ 19ರಷ್ಟು ಮತ ಗಳಿಸಿವೆ. ಮತ ಗಳಿಕೆ ಹೆಚ್ಚಿದ್ದರೂ ಆರ್‌ಜೆಡಿ ಕೇವಲ 27 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಬಿಜೆಪಿ 91 ಮತ್ತು ಜೆಡಿಯು 81 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
2020ರಲ್ಲಿ ರಾಜ್ಯದ ಏಕೈಕ ದೊಡ್ಡ ಪಕ್ಷ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಆರ್‌ಜೆಡಿ, 2010ರ ಬಳಿಕ ಎರಡನೇ ಅತ್ಯಂತ ಹೀನಾಯ ಸೋಲಿನತ್ತ ಮುಖ ಮಾಡುತ್ತಿದೆ. 2010ರಲ್ಲಿ ಆರ್‌ಜೆಡಿ 22 ಕ್ಷೇತ್ರಗಳಲ್ಲಿ ಮಾತ್ರ ಜಯಿಸಿತ್ತು.
ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್ ಸಹ ಹಿನ್ನಡೆ ಅನುಭವಿಸಿದ್ದಾರ
ಮಹಾಘಟಬಂಧನ್‌ನ ಆರ್‌ಜೆಡಿ ಮಿತ್ರಪಕ್ಷಗಳಾದ ಕಾಂಗ್ರೆಸ್ ಕೇವಲ 4, ಸಿಪಿಐಎಂ 4 ಮತ್ತು ಸಿಪಿಐ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ದಾಖಲಿಸಿವೆ.
ಎನ್‌ಡಿಎ ಪ್ರಸ್ತುತ 201 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 91 ಸ್ಥಾನಗಳಲ್ಲಿ, ಜೆಡಿಯು 81 ಸ್ಥಾನಗಳಲ್ಲಿ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 21 ಸ್ಥಾನಗಳಲ್ಲಿ, ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಐದು ಸ್ಥಾನಗಳಲ್ಲಿ ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಮತ್ತು ಮುಖೇಶ್ ಸಹಾನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ತಾವು ಸ್ಪರ್ಧಿಸಿದ ಎಲ್ಲಾ ಸ್ಥಾನಗಳಲ್ಲಿಯೂ ಹಿನ್ನಡೆ ಅನುಭವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.