ಅಮಿತ್ ಶಾ
– ಪಿಟಿಐ ಚಿತ್ರ
ಸರನ್: ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿ ಮೊಹಮ್ಮದ್ ಶಹಾಬುದ್ದೀನ್ ಅವರ ಮಗ ಒಸಾಮಾ ಶಹಾಬ್‌ಗೆ ಟಿಕೆಟ್ ನೀಡಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ವಿರೋಧ ಪಕ್ಷ ಆರ್‌ಜೆಡಿಯನ್ನು ಟೀಕಿಸಿದ್ದಾರೆ. ಅಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಹಾರದ ಜನರ ಸುರಕ್ಷತೆಯನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು ಎಂದು ಪ್ರಶ್ನಿಸಿದ್ದಾರೆ.
ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ಎನ್‌ಡಿಎ 20 ವರ್ಷಗಳಲ್ಲಿ ಅತಿ ದೊಡ್ಡ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿಕೊಂಡಿದ್ದಾರೆ.
ಆರ್‌ಜೆಡಿ ಸಿವಾನ್ ಜಿಲ್ಲೆಯ ರಘುನಾಥಪುರ ವಿಧಾನಸಭಾ ಕ್ಷೇತ್ರದಿಂದ ಶಹಾಬ್ ಅವರನ್ನು ಕಣಕ್ಕಿಳಿಸಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ 20 ವರ್ಷಗಳಲ್ಲಿ ಬಿಹಾರವನ್ನು 'ಜಂಗಲ್ ರಾಜ್' ಹಣೆಪಟ್ಟಿಯಿಂದ ಮುಕ್ತಗೊಳಿಸಿದ್ದಾರೆ ಎಂದು ಶಾ ಹೇಳಿದರು.
‘ಈ ವರ್ಷ ಬಿಹಾರದ ಜನರು ನಾಲ್ಕು ದೀಪಾವಳಿಗಳನ್ನು ಆಚರಿಸುತ್ತಿದ್ದಾರೆ. ದೀಪಾವಳಿಯ ದಿನದಂದು ರೂಢಿಯಂತೆ ಹಬ್ಬ, ಎನ್‌ಡಿಎ ಸರ್ಕಾರವು 'ಜೀವಿಕಾ ದೀದೀಸ್' ಅವರ ಖಾತೆಗಳಿಗೆ ₹10,000 ಗಳನ್ನು ವರ್ಗಾಯಿಸಿದ ದಿನದಂದು, ಜಿಎಸ್‌ಟಿ ಕಡಿತಗೊಳಿಸಿದ ದಿನದಂದು ಮತ್ತು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ನವೆಂಬರ್ 14ರಂದು ದೀಪಾವಳಿ ಆಚರಿಸುತ್ತಾರೆ’ ಎಂದು ಹೇಳಿದರು.
ಬಿಹಾರದ ಜನರ ವಸಯನ್ನು ಎನ್‌ಡಿಎ ಸರ್ಕಾರ ಯಶಸ್ವಿಯಾಗಿ ಕಡಿತಗೊಳಿಸಿದೆ ಎಂದಿದ್ದಾರೆ.
ಬಿಹಾರದಲ್ಲಿ ಎಷ್ಟೊಂದು ಮೂಲಸೌಕರ್ಯ ಕೆಲಸಗಳು ನಡೆದಿವೆ ಎಂದರೆ, ಬಿಹಾರದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಪ್ರಯಾಣಿಸಲು ಐದು ಗಂಟೆಗಳು ಸಹ ಬೇಕಾಗಿಲ್ಲ. ಈ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಒಟ್ಟಾಗಿ ಮಾಡಿದ್ದಾರೆ. ನಮ್ಮ ಸರ್ಕಾರ ಇಲ್ಲಿಗೆ ಬರುವ ಮೊದಲು ವಲಸೆ, ಸುಲಿಗೆ, ಕೊಲೆ ಮತ್ತು ಅಪಹರಣಗಳು ಸಾಮಾನ್ಯವಾಗಿದ್ದವು ಎಂದಿದ್ದಾರೆ.
ಕೇಂದ್ರದಲ್ಲಿ ಯುಪಿಎ ಆಳ್ವಿಕೆಯಲ್ಲಿ ಭಯೋತ್ಪಾದಕರು ರಕ್ತದೊಂದಿಗೆ ಹೋಳಿ ಆಡುತ್ತಿದ್ದರು. ಆದರೆ, ಮೋದಿ ಸರ್ಕಾರ ಪಾಕಿಸ್ತಾನದೊಳಗಿನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.