ಪಟ್ನಾ: ಇತ್ತೀಚೆಗೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷದಿಂದ ಉಚ್ಚಾಟಿಸಲ್ಪಟ ಲಾಲು ಪ್ರಸಾದ್ ಅವರ ಹಿರಿಯ ಪುತ್ರ, ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ತೇಜ್ ಪ್ರತಾಪ್ ಯಾದವ್ ಪ್ರಸ್ತುತ ಸಮಸ್ತಿಪುರ ಜಿಲ್ಲೆಯ ಹಸನ್‌ಪುರ ಕ್ಷೇತ್ರದ ಶಾಸಕರಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೌದು, ಈ ಬಾರಿ ನಾನು ಮಹುವಾ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ವಿರೋಧಿಗಳಿಗೆ ಈಗಾಗಲೇ ಭಯ ಶುರುವಾಗಿದೆ’ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ನಂತರ ನಿತೀಶ್ ಕುಮಾರ್ ಮುಖ್ಯಮಂತ್ರಿ ಹುದ್ದೆಯಲ್ಲಿ ಉಳಿಯುವುದಿಲ್ಲ. ಯುವ ಜನತೆ ಹೊಸ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹಾಗಾಗಿ ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಒತ್ತು ನೀಡುವ ನನ್ನೊಂದಿಗೆ ಯುವಕರು ನಿಲ್ಲುತ್ತಾರೆ ಎಂಬುದು ನನಗೆ ವಿಶ್ವಾಸವಿದೆ ಎಂದಿದ್ದಾರೆ.
ಇದೇ ವರ್ಷ ಮೇ 25ರಂದು ತೇಜ್ ಪ್ರತಾಪ್ ಅವರು ‘ಅನುಷ್ಕಾ ಎಂಬ ಮಹಿಳೆಯೊಂದಿಗೆ ನಾನು ಸಂಬಂಧ ಹೊಂದಿದ್ದೇನೆ’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ತನ್ನ ಅಕೌಂಟ್ ಹ್ಯಾಕ್ ಆಗಿದೆ ಎಂದೂ ಹೇಳಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ತೇಜ್ ಅವರನ್ನು ಪಕ್ಷದಿಂದ 6 ವರ್ಷಗಳವರೆಗೆ ಲಾಲೂ ಉಚ್ಚಾಟನೆ ಮಾಡಿದ್ದರು.
ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರಾಯ್ ಅವರ ಪುತ್ರಿ ಐಶ್ವರ್ಯ ಅವರನ್ನು ತೇಜ್ ವಿವಾಹವಾಗಿದ್ದು, ಈ ಹಿಂದೆ ಅವರ ಕೌಟುಂಬಿಕ ಕಲಹದಿಂದಲೂ ಲಾಲೂ ಮುಜುಗರಕ್ಕೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.