ADVERTISEMENT

Bihar Elections 2025: ಬಿಹಾರ ‘ಮತ’ಕ್ಕೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 0:19 IST
Last Updated 7 ಅಕ್ಟೋಬರ್ 2025, 0:19 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

ನವದೆಹಲಿ: ಬಿಹಾರ ಚುನಾವಣೆಯಲ್ಲಿ ಕಳೆದ ಎರಡು ದಶಕಗಳಲ್ಲಿ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಈ ಅವಧಿಯಲ್ಲಿ ಮಿತ್ರರು ಶತ್ರುಗಳಾಗಿದ್ದಾರೆ, ಶತ್ರುಗಳು ಮಿತ್ರರಾಗಿದ್ದಾರೆ. ಮೈತ್ರಿಕೂಟದಲ್ಲಿದ್ದರೂ ವಿಧಾನಸಭೆಯ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಹೋರಾಟ ನಡೆಸಿವೆ. 2025ರ ಚುನಾವಣೆ ಇದಕ್ಕಿಂತ ಭಿನ್ನವಾಗಿರಲಿದೆಯಾ?

ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಹಾಗೂ ಜಾತಿ ಆಧಾರಿತ ಮೀಸಲಾತಿ ವಿಷಯಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ADVERTISEMENT

ಚುನಾವಣೆ ಘೋಷಣೆಗೆ ಮುನ್ನ ಮೈತ್ರಿ ಸರ್ಕಾರವು ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಸುಶಾಸನ ಹಾಗೂ ಹಿಂದುತ್ವ ಪ್ರತಿಪಾದಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ ವರ್ಚಸ್ಸನ್ನು ನೆಚ್ಚಿಕೊಂಡಿದೆ.

2000ರಿಂದ ಈಚೆಗೆ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆ ಇಲ್ಲ. ಕಳೆದೆರಡು ದಶಕಗಳಿಂದ ಬಿಹಾರ ರಾಜಕಾರಣದಲ್ಲಿ ನಿತೀಶ್‌ ಕುಮಾರ್‌ ‘ಕಿಂಗ್‌ ಮೇಕರ್‌’ ಆಗಿದ್ದಾರೆ. ಪದೇ ಪದೇ ಮೈತ್ರಿಕೂಟ ಬದಲಿಸಿದ್ದಾರೆ. ಮರೆಗುಳಿತನದಿಂದ ಬಳಲುತ್ತಿರುವ ಅವರು ಈ ಸಲ ನಿಸ್ತೇಜರಾಗಿರುವಂತೆ ತೋರುತ್ತಿದೆ. ಜತೆಗೆ, ಎನ್‌ಡಿಎ ಮಿತ್ರ ಪಕ್ಷದ ನಾಯಕರಾದ ಚಿರಾಗ್‌ ಪಾಸ್ವಾನ್‌ ಅವರು ನಿತೀಶ್‌ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ. ಈ ಚುನಾವಣೆಯಲ್ಲಿ ನಿತೀಶ್ ಅವರನ್ನು ಮತ್ತಷ್ಟು ದುರ್ಬಲಗೊಳಿಸಿ ರಾಜ್ಯ ರಾಜಕಾರಣದಲ್ಲಿ ಅವರನ್ನು ಅಪ್ರಸ್ತುತ ಗೊಳಿಸುವುದು ಅವರ ಕಾರ್ಯತಂತ್ರ. ಇದಕ್ಕೆ ಬಿಜೆಪಿ ನಾಯಕರ ಪರೋಕ್ಷ ಚಿತಾವಣೆಯೂ ಇದೆ. ಈ ಮೂಲಕ, ರಾಜ್ಯದಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮುವುದು ಕಮಲ ಪಾಳಯದ ಹಂಬಲ. 2020ರ ಚುನಾವಣೆಯಲ್ಲಿ ಮಿತ್ರರನ್ನು ನಿತೀಶ್‌ ವಿರುದ್ಧ ಎತ್ತಿ ಕಟ್ಟುವ ಮೂಲಕ ಬಿಜೆಪಿ ಭಾಗಶಃ ಯಶಸ್ಸು ಸಾಧಿಸಿತ್ತು.

ಇನ್ನೊಂದೆಡೆ, ಆರ್‌ಜೆಡಿ–ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ’ಮತ ಕಳವು’ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯನ್ನೇ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದೆ. ರಾಹುಲ್‌ ಗಾಂಧಿ–ತೇಜಸ್ವಿ ಯಾದವ್‌ ಜೋಡಿಯ ಮ್ಯಾಜಿಕ್‌ನಿಂದ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂಬುದು ಮೈತ್ರಿಕೂಟದ ನಾಯಕರ ವಿಶ್ವಾಸ.

ಮೈತ್ರಿಕೂಟವು ಶೇ 30ರಷ್ಟಿರುವ ಮುಸ್ಲಿಂ–ಯಾದವ ಮತದಾರರನ್ನು ನೆಚ್ಚಿಕೊಂಡಿದೆ. ಮಂಡಲ್‌– ಕಮಂಡಲ ಚಳವಳಿಯ ಬಳಿಕ ಪಕ್ಷವು ರಾಜ್ಯದಲ್ಲಿ ನಿಸ್ತೇಜಗೊಂಡಿತ್ತು. 2020ರ ಚುನಾವಣೆ ಯಲ್ಲಿ ಮೈತ್ರಿಕೂಟವು ಅಧಿಕಾರದಿಂದ ಗಾವುದ ದೂರ ಉಳಿಯಲು ಕಾಂಗ್ರೆಸ್‌ನ ಕಳಪೆ ಪ್ರದರ್ಶನವು ಪ್ರಮುಖ ಕಾರಣ.

ಈಚಿನ ವರ್ಷಗಳಲ್ಲಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್‌ ಆಣತಿಯಂತೆ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಚುನಾವಣೆಗೆ ಆರು ತಿಂಗಳು ಇರುವಾಗ ಇಂತಹ ನಾಯಕರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಈ ಜಾಗಕ್ಕೆ ರಾಹುಲ್‌ ಗಾಂಧಿ ಆಪ್ತರನ್ನು ಕೂರಿಸಲಾಗಿದೆ. ರಾಹುಲ್‌ ಗಾಂಧಿ ನಡೆಸಿದ ಮತ ಅಧಿಕಾರ ಯಾತ್ರೆಯು ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕಾರ್ಯಕರ್ತರಲ್ಲಿ ಕಸುವು ತುಂಬಿದೆ.

ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ಹಾಗೂ ಎರಡನೇ ಹಂತದಲ್ಲಿ 122 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ವೇಳಾಪಟ್ಟಿಯ ಘೋಷಣೆಯ ಬೆನ್ನಲ್ಲೇ, ಎನ್‌ಡಿಎ ಮತ್ತು ಇಂಡಿಯಾ ಬಣದಲ್ಲಿ ಸೀಟು ಹಂಚಿಕೆ ಮಾತುಕತೆಗೆ ವೇಗ ದೊರಕಿದೆ. ಸಿಪಿಐಎಂಎಲ್‌ (ಎಲ್‌), ವಿಐಪಿ, ಎಲ್‌ಜೆಪಿ (ಆರ್‌ವಿ) ಹಾಗೂ ಎಚ್‌ಎಎಂನಂತಹ ಸಣ್ಣ ಪಕ್ಷಗಳು ಮೈತ್ರಿಕೂಟದ ನಾಯಕರೊಂದಿಗೆ ತೀವ್ರ ಚೌಕಾಶಿಯಲ್ಲಿ ತೊಡಗಿವೆ.

ಚುನಾವಣಾ ಆಯೋಗವು ನಡೆಸಿದ ವಿವಾದಾತ್ಮಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ರಾಜ್ಯದಲ್ಲಿ ಮತದಾರರ ಸಂಖ್ಯೆಯನ್ನು 7.49 ಕೋಟಿಯಿಂದ 7.43 ಕೋಟಿಗೆ ಇಳಿಸಿದೆ. ಈ ಚುನಾವಣೆಯು ಬಿಜೆಪಿ ಅಂತಿಮವಾಗಿ ಜೆಡಿಯು ನೆರಳಿನಿಂದ ಹೊರಬರುತ್ತದೆಯೇ ಎಂಬುದನ್ನು ಸಹ ನಿರ್ಧರಿಸಲಿದೆ. 

ಚುನಾವಣಾ ತಂತ್ರಜ್ಞ-ರಾಜಕಾರಣಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ಸಾಮರ್ಥ್ಯವನ್ನು ಚುನಾವಣೆ ಪರೀಕ್ಷಿಸಲಿದೆ. ಮುಂದಿನ ದಿನಗಳಲ್ಲಿ, ನಿತೀಶ್ ಅವರ ಮಗ ನಿಶಾಂತ್ ಚುನಾವಣಾ ಕಣಕ್ಕೆ ಇಳಿಯುತ್ತಾರೆಯೇ ಎಂಬುದೂ ಗೊತ್ತಾಗಲಿದೆ. 

243 ಸದಸ್ಯ ಬಲದ ರಾಜ್ಯ ವಿಧಾನಸಭೆಯ ಅವಧಿ ನವೆಂಬರ್ 22ರಂದು ಕೊನೆಗೊಳ್ಳಲಿದೆ. ಇದೇ ಮೊದಲ ಬಾರಿಗೆ ಪ್ರತಿ ಕ್ಷೇತ್ರಕ್ಕೆ ಐಎಎಸ್‌ ಅಧಿಕಾರಿಯನ್ನು ಸಾಮಾನ್ಯ ವೀಕ್ಷಕರನ್ನಾಗಿ ನಿಯೋಜಿಸಲಾಗುತ್ತಿದೆ ಎಂದು ಜ್ಞಾನೇಶ್‌ ಕುಮಾರ್ ತಿಳಿಸಿದರು. 

ಉತ್ತರ ನೀಡದ ಆಯುಕ್ತ: ಎಸ್‌ಐಆರ್‌ ನಂತರ ಮತದಾರರ ಪಟ್ಟಿಯಿಂದ ಕಿತ್ತು ಹಾಕಿದ ಅಕ್ರಮ ವಲಸಿಗರ ಸಂಖ್ಯೆಯನ್ನು ಜ್ಞಾನೇಶ್ ಕುಮಾರ್ ಸೋಮವಾರ ನೀಡಲಿಲ್ಲ. ‘ಇದನ್ನು ವಿಕೇಂದ್ರೀಕೃತ ರೀತಿಯಲ್ಲಿ ನಿರ್ವಹಿಸಲಾಗಿದೆ ಮತ್ತು ವಿಧಾನಸಭೆ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಲಭ್ಯವಿದೆ‘ ಎಂದು ಹೇಳಿದರು. 

ಚುನಾವಣೆಯ ವೇಳಾಪಟ್ಟಿ ಘೋಷಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮೂವರು ಪತ್ರಕರ್ತರು ಈ ಅಂಕಿಅಂಶಗಳನ್ನು ಕೋರಿದ್ದರು. ಆದರೆ, ಕುಮಾರ್ ಅದಕ್ಕೆ ನೇರವಾಗಿ ಪ್ರತಿಕ್ರಿಯಿಸಲಿಲ್ಲ. ಆಗಸ್ಟ್ 17ರಂದು ನಡೆದ ಪತ್ರಿಕಾಗೋಷ್ಠಿಯಲ್ಲೂ ಕುಮಾರ್ ಅವರು ಈ ಬಗ್ಗೆ ವಿವರ ನೀಡಿರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.